C T Ravi Case | ಹೆಬ್ಬಾಳ್ಕರ್‌ ವಿರುದ್ಧ ʼಅಶ್ಲೀಲ ಪದ ಬಳಕೆʼ ಆರೋಪ: ನಾಯಕರ ವಾಕ್ಸಮರ ತಾರಕಕ್ಕೆ
x

C T Ravi Case | ಹೆಬ್ಬಾಳ್ಕರ್‌ ವಿರುದ್ಧ ʼಅಶ್ಲೀಲ ಪದ ಬಳಕೆʼ ಆರೋಪ: ನಾಯಕರ ವಾಕ್ಸಮರ ತಾರಕಕ್ಕೆ

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಆಡಳಿತ ಹಾಗೂ ವಿಪಕ್ಷ ನಾಯಕರ ಮಧ್ಯೆ ವಾಕ್ಸಮರ ನಡೆಯುತ್ತಿದೆ.


ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಸಿ.ಟಿ.ರವಿ ಬಂಧನ, ಪೊಲೀಸರ ತನಿಖಾ ರೀತಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ. ಪ್ರಕರಣ ಸಂಬಂಧ ಆಡಳಿತ ಹಾಗೂ ವಿರೋಧ ಪಕ್ಷಗಳ ಯಾವೆಲ್ಲಾ ನಾಯಕರು, ಏನು ಹೇಳಿದ್ದಾರೆ ಎಂಬುದು ಇಲ್ಲಿದೆ.

ಸಿ.ಟಿ.ರವಿ ಹೇಳಿದ್ದೇನು?

ನನ್ನ ಜೀವಕ್ಕೆ ಅಪಾಯವಿದೆ. ನನಗೆ ಏನೇ ಆದರೂ ಪೊಲೀಸರು, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರಣ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ. ಎಕ್ಸ್ ಖಾತೆಯಲ್ಲಿ ದೂರಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿಯೇ ತಲೆಗೆ ಗಾಯವಾಗಿದೆ. ಗಾಯವಾಗಿ ಮೂರು ಗಂಟೆ ನಡೆದರೂ ಪ್ರಥಮ ಚಿಕಿತ್ಸೆ ಕೊಡಿಸಿಲ್ಲ. ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಷಡ್ಯಂತ್ರ ರೂಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದೇನು?

ನಾನು ಹುಟ್ಟಿದಾಗಿನಿಂದ ಇರುವೆಗೂ ಕಾಟ ಕೊಟ್ಟವಳಲ್ಲ. ನನ್ನ ಕೈಲಾದ ಮಟ್ಟಿಗೆ ರಾಜಕಾರಣ, ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಹಿರಿಯರ ಚಾವಡಿ, ಬುದ್ದಿವಂತರ ವೇದಿಕೆ ಆಗಿರುವ ವಿಧಾನ ಪರಿಷತ್‌ನಲ್ಲಿ ಅಶ್ಲೀಲ ಪದ ಬಳಸಿದ್ದು ತೀವ್ರ ನೋವು ತಂದಿದೆ. ಇಂತಹ ಪದ ಬಳಸಿದ ಹೊರತಾಗಿಯೂ ಯಾರೊಬ್ಬರು ಸಿ.ಟಿ.ರವಿ ಹೇಳಿಕೆ ಖಂಡಿಸದಿರುವುದು ಬೇಸರ ತರಿಸಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದಕ್ಕೆ ನಾನು ಸಿ.ಟಿ.ರವಿ ಅವರನ್ನು ಕೊಲೆಗಾರ ಎಂದು ಟೀಕಿಸಿದ್ದೇನೆ. ನನ್ನ ಈ ಮಾತಿಗೆ ಬದ್ಧವಾಗಿದ್ದೇನೆ. ಆದರೆ, ಸಭಾಪತಿ ಎದುರು ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿಯೇ ಇಲ್ಲ ಸುಳ್ಳು ಹೇಳುತ್ತಿದ್ದಾರೆ. ಆದೆ, ಅವರಾಡಿರುವ ಮಾತು ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ ಎಂದು ದೂರಿದ್ದಾರೆ.

ಅಶ್ಲೀಲ ಪದ ಬಳಸಿದ್ದರೆ ಸಮರ್ಥಿಸುವುದಿಲ್ಲ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಆದರೆ, ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಕದ ವರ್ತನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ. ಸಿ.ಟಿ.ರವಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ ಎಂದು ಹೇಳಿದ್ದಾರೆ. ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಸಂವಿಧಾನದಡಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆ ಆಘಾತಕಾರಿ ಎಂದಿದ್ದಾರೆ.

ಸಿ.ಟಿ.ರವಿ ಉಳಿದಿದ್ದೇ ಪುಣ್ಯ; ಡಿಕೆಶಿ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಕರಣದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿಯವರೇ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಬಳಸಿ ಉಳಿದಿದ್ದೇ ಸಿ.ಟಿ.ರವಿಯವರ ಪುಣ್ಯ, ತಮ್ಮ ಪ್ರತಿನಿಧಿಯ ಬಗ್ಗೆ ಕೀಳಾಗಿ ಮಾತಾಡಿದರೆ ಇಲ್ಲಿನ ಜನ ಹೇಗೆ ಸಹಿಸಿಕೊಳ್ಳುತ್ತಾರೆ?, ರವಿಯವರ ಕೊಳಕು ಬಾಯಿ ಹೊಸದೇನಲ್ಲ, ಹಿಂದೆ ಅವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಅಂತ ಹೇಳಿದ್ದೂ ಇದೆ. ಚಿಕ್ಕಮಗಳೂರು ಜನರೆಲ್ಲ ಸಂಸ್ಕಾರವಂತರು. ಆದರೆ, ರವಿ ಒಬ್ಬರೇ ಹರಕು ಬಾಯಿ ಎಂದು ಕಿಡಿಕಾರಿದ್ದಾರೆ.

ವಿಜಯೇಂದ್ರ ಹೇಳಿದ್ದೇನು?

ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಪ್ರಜಾಪ್ರಭುತ್ವ ದೇಗುಲವೆನಿಸಿರುವ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿದೆ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಗೂಂಡಾ ಸಾಮ್ರಾಜ್ಯ ನಿರ್ಮಿಸುತ್ತಿದೆ. ವಿಧಾನಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣು ಪಾಲಾಗಿಸುವ ದಾರ್ಷ್ಟ್ಯತನ ಮೆರೆಯಲು ಕಾಂಗ್ರೆಸ್ ಹೊರಟಿದೆ ಎಂದು ದೂರಿದ್ದಾರೆ. ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಿ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜನಾ೦ದೋಲನ ಹಮ್ಮಿಕೊಳ್ಳುವ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸುವ ವೇಳೆಯೂ ವಿಜಯೇಂದ್ರ ಸ್ಥಳದಲ್ಲಿದ್ದರು.

ಅಶೋಕ್‌ ಹೇಳಿದ್ದೇನು?

ಪೊಲೀಸ್ ವಶದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಸರ್ಕಾರ ರಕ್ಷಣೆ ಕೊಟ್ಟಿಲ್ಲ. ರೌಡಿ, ಗೂಂಡಾ ಸರ್ಕಾರದಂತೆ ವರ್ತಿಸಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಆ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡಿದೆ. ರಾಜಾರೋಷವಾಗಿ ಮಂತ್ರಿಗಳಾಗಿ ಗೂಟದ ಕಾರಿನಲ್ಲಿ ದೇಶದ್ರೋಹಿಗಳು ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಶ್ಲೀಲ ಪದ ಬಳಸಿದ್ದಕ್ಕೆ ದಾಖಲೆ ಇಲ್ಲ

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ ಬಗ್ಗೆ ಯಾವುದೇ ದಾಖಲೆ ಇಲ್ಲ. ಆದರೆ, ಅಶ್ಲೀಲ ಪದ ಬಳಸಿರುವ ಕುರಿತು ನಾಲ್ವರು ಸದಸ್ಯರು ಸಾಕ್ಷಿ ನುಡಿದಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಅಶ್ಲೀಲ ಪದ ಬಳಸಿದ ಕುರಿತು ಆಡಿಯೊ ಅಥವಾ ವಿಡಿಯೋ ದಾಖಲೆ ಹುಡುಕಲಾಗುತ್ತಿದೆ. ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ಇಬ್ಬರಿಂದಲೂ ದೂರು ಪಡೆಯಲಾಗಿದೆ. ಪ್ರಕರಣವನ್ನು ಇಲ್ಲಿಗೇ ಮುಗಿಸೋಣ ಎಂದು ಇಬ್ಬರಿಗೂ ಹೇಳಿದ್ದೇನೆ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪ್ರೇರಿತ ಕ್ರಮ; ಉಪಸಭಾಪತಿ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನದ ಬಳಿಕ ಒಂದೊಂದು ಗಂಟೆಗೆ ಒಂದೊಂದು ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರ ಕ್ರಮ ರಾಜಕೀಯ ಪ್ರೇರಿತ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಟೀಕಿಸಿದ್ದಾರೆ.

ಪೊಲೀಸರ ಇಂತಹ ಧೋರಣೆ ಮುಂದುವರಿದರೆ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದು, ಸತ್ಯ ಹೊರಬರಲು ಸ್ವತಂತ್ರ ತನಿಖೆ ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

Read More
Next Story