ವೃಕ್ಷಮಾತೆ ತುಳಸಿಗೌಡ ನಿಧನ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಅಂಕೋಲಾದ ತುಳಸಿ ಗೌಡ (74) ಅವರು ಅನಾರೋಗ್ಯದಿಂದಾಗಿ ಸೋಮವಾರ ಸಂಜೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ತುಳಸಜ್ಜಿ ಎಂದೂ ಕರೆಯಲ್ಪಡುತ್ತಿದ್ದ ತುಳಸಿಗೌಡ ಅವರು ವರ್ಷದಲ್ಲಿ ಸುಮಾರು ಮೂವತ್ತು ಸಾವಿರ ಸಸಿ ನೆಟ್ಟು ಲಕ್ಷಾಂತರ ಸಸಿ ಬೆಳೆಸಿ ಪರಿಸರವನ್ನು ಪ್ರೀತಿಸಿದ ಮಾದರಿ ಮಹಿಳೆಯಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಬಳಿಕ ತನ್ನಿಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ್ದರು.
ಕಾಡಿನ ಗಿಡಗಳ ಬೀಜಗಳನ್ನು ಬಿತ್ತನೆ ಮಾಡಿ ಸಸಿ ಬೆಳೆಸುತ್ತಿದ್ದ ಅವರು ಕ್ರಮೇಣ ಅದೇ ಕಾಯಕದಲ್ಲಿ ಮುಂದುವರಿದು ಹಸಿರು ಕ್ರಾಂತಿಯ ಹರಿಕಾರರಾದರು. ಅಳಿವಿನಂಚಿನ ಸಸ್ಯ ಸಂತತಿಯ ಪುನರುತ್ಥಾನಕ್ಕೆ ಕಾರಣರಾದರು.
ಹಾಲಕ್ಕಿ ಬುಡಕಟ್ಟು ಸಮುದಾಯದ ತುಳಸಿಗೌಡ, ಸಾಗವಾನಿ, ಹೆಬ್ಬಲಸು, ನಂದಿ, ಮತ್ತಿ, ಹುನಾಲು, ಆಲ ಮತ್ತಿತರ ಸಸ್ಯ ಪ್ರಬೇಧಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದುರ. ಅಂಕೋಲಾ, ಶಿರಸಿ ಮತ್ತಿತರ ಕಡೆ ಅವರು ಬೆಳೆಸಿದ ಗಿಡಗಳು ಇಂದು ಹೆಮ್ಮರಗಳಾಗಿ ಪರಿಸರ ಸಂರಕ್ಷರಂತೆ ಕಂಗೊಳಿಸುತ್ತಿವೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ, ಪದ್ಮಶ್ರೀ ಮತ್ತಿತರ ಬಿರುದುಗಳು ಸಂದಿವೆ.