ಮತಗಳವು |ರಾಹುಲ್‌ಗಾಂಧಿ ಆರೋಪ ನಿಜ, ಬೇಕಿದ್ದರೆ ಪರಿಶೀಲಿಸಲಿ; ವಿಪಕ್ಷಗಳಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು
x

ಮತಗಳವು |ರಾಹುಲ್‌ಗಾಂಧಿ ಆರೋಪ ನಿಜ, ಬೇಕಿದ್ದರೆ ಪರಿಶೀಲಿಸಲಿ; ವಿಪಕ್ಷಗಳಿಗೆ ಪ್ರಿಯಾಂಕ್‌ ಖರ್ಗೆ ತಿರುಗೇಟು

11 ತಿಂಗಳಲ್ಲಿ ಶೇ.8.66 ಮತದಾರರು ಹೆಚ್ಚಳವಾಗಿದ್ದಾರೆ. ಎಇಆರ್‌ಒಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಇಆರ್‌ಒಗಳು ಇದಕ್ಕೆ ಹೊಣೆಯಾಗುತ್ತಾರೆ ಎಂದು ಪ್ರಿಯಾಂಕ್‌ ಖರ್ಗೆ ದೂರಿದ್ದಾರೆ.


ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನದ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಸಂಪೂರ್ಣ ಪರಿಶೀಲನೆ ನಡೆಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಡೆದ ಮತಗಳ್ಳತನ ವಿರುದ್ದ ದಾಖಲೆ ಸಮೇತ ಪಿಪಿಟಿ ಪ್ರಾತ್ಯಕ್ಷಿಕೆ ನೀಡಿದ ಅವರು, 11 ತಿಂಗಳಲ್ಲಿ ಶೇ.8.66 ಮತದಾರರು ಹೆಚ್ಚಳವಾಗಿದ್ದಾರೆ. ಎಇಆರ್‌ಒಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಇಆರ್‌ಒಗಳು ಇದಕ್ಕೆ ಹೊಣೆಯಾಗುತ್ತಾರೆ. ಪ್ರತಿ ನಿತ್ಯ 160 ಮತಗಳು ಸೇರ್ಪಡೆಯಾಗಿವೆ. ಈ ಬಗ್ಗೆ ರಾಹುಲ್‌ ಗಾಂಧಿ ನೇತೃತ್ವದ ತಂಡವು ಪರಿಶೀಲನೆ ನಡೆಸಿದೆ. 2019ರಲ್ಲಿ 5.1 ಲಕ್ಷ ಮತಗಳಿದ್ದವು. 2023 ವಿಧಾನಸಭಾ ಚುನಾವಣೆ ವೇಳೆಗೆ 6.07 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. 2024 ಲೋಕಸಭೆ ಚುನಾವಣೆ ವೇಳೆ 6.59 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ ಎಂದು ಆರೋಪಿಸಿದರು.

1ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಒಬ್ಬರಿಗೆ ಎರಡು ಕಡೆ ಮತದಾನ ಇರಬಾರದು. ಆದರೆ, ಗುರುಕೀರತ್ ಸಿಂಗ್‌ ಎಂಬುವರು ಮೂರು ಸಲ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ಬಾರಿ ಮತದಾನ ಹಕ್ಕು ಕೊಟ್ಟಿದ್ದಾರೆ. ಒಂದೊಂದಕ್ಕೂ ಒಂದೊಂದು ಮತದಾರರ ಗುರುತಿನ ಚೀಟಿಯ ಸಂಖ್ಯೆ ನೀಡಲಾಗಿದೆ. ಆಯೋಗವು ಸರಿಯಾಗಿ ಪರಿಷ್ಕರಣೆ ಮಾಡದೇ ರಾಹುಲ್ ಗಾಂಧಿಗೆ ನೊಟೀಸ್‌ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರು ಮತದಾನದ ಸಿಸಿಟಿವಿ ವಿಡಿಯೋ ದೃಶ್ಯಾವಳಿ ಕೇಳಿದ್ದರು. ಆದರೆ, 45 ದಿನಗಳ ನಂತರ ವಿಡಿಯೋ ತೆಗೆದುಹಾಕಲಾಗುತ್ತದೆ. ಬೇರೆ ವಿಡಿಯೋಗಳನ್ನೆಲ್ಲಾ ಇಟ್ಟುಕೊಳ್ಳುತ್ತಾರೆ. ಇಂತಹ ವಿಡಿಯೋಗಳನ್ನು ಯಾಕೆ ಇಟ್ಟುಕೊಂಡಿಲ್ಲ. ರಾಹುಲ್ ಗಾಂಧಿಗೆ ಪ್ರಮಾಣ ಪತ್ರ ಸಲ್ಲಿಸಲು ಹೇಳುತ್ತಾರೆ. ಅದೇ ರೀತಿ ಚುನಾವಣಾ ಆಯೋಗ ಕೂಡ ಯಾವುದೇ ಅಕ್ರಮ ನಡೆದಿಲ್ಲ ಎಂದು ಪ್ರಮಾಣ ಪತ್ರ ಜನರಿಗೆ ನೀಡಲಿ. ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಬೇಕು. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.

ಮಹದೇವಪುರದಲ್ಲಿ ಬಾಂಗ್ಲಾದೇಶಿಯರು ಇದ್ದಾರೆ ಎಂಬುದಾಗಿ ಸ್ಥಳೀಯರೇ ಹೇಳುತ್ತಾರೆ. ಅವರು ದೇಶದ ಗಡಿ ದಾಟಿ ಬರಲು ಹೇಗೆ ಸಾಧ್ಯ?, ರಾಜ್ಯದಿಂದ ರಾಜ್ಯ ದಾಟಿ ಹೇಗೆ ಬರುತ್ತಿದ್ದಾರೆ?, ಮಹದೇವಪುರದಲ್ಲಿ ಅಕ್ರಮ ವಲಸಿಗರು ಇದ್ದಾರೆ ಎಂಬುದಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಅದಕ್ಕೆ ಉತ್ತರ ಕೊಡಬೇಕಿರುವುದು ರಾಜ್ಯ ಸರ್ಕಾರವಾ .? ಕೇಂದ್ರ ಸರ್ಕಾರನಾ..? ಎಂದು ಟೀಕಾಪ್ರಹಾರ ನಡೆಸಿದರು.

ಬಿಜೆಪಿ ನಾಯಕರು ವರುಣಾ ಕ್ಷೇತ್ರ ಸೇರಿದಂತೆ ಬೇರೆ ವಿಧಾನಸಭೆ ಕ್ಷೇತ್ರಗಳ ಅಕ್ರಮದ ಬಗ್ಗೆ ಹೇಳಿದ್ದಾರೆ. ಅವರು ಬರಲಿ, ಇಬ್ಬರೂ ಹೋಗಿ ಚುನಾವಣಾ ಆಯೋಗಕ್ಕೆ ದೂರು ನೀಡೋಣ ಎಂದು ತಿರುಗೇಟು ನೀಡಿದರು.

Read More
Next Story