ಕಾಂಗ್ರೆಸ್ ನಾಯಕರ ʼಮತಗಳ್ಳತನʼ ಆರೋಪಕ್ಕೆ ಬೆಲೆ ಕೊಡದ ಮತದಾರ; ಸಂಸದ ಯದುವೀರ್‌ ಒಡೆಯರ್‌ ತಿರುಗೇಟು
x

ಕಾಂಗ್ರೆಸ್ ನಾಯಕರ ʼಮತಗಳ್ಳತನʼ ಆರೋಪಕ್ಕೆ ಬೆಲೆ ಕೊಡದ ಮತದಾರ; ಸಂಸದ ಯದುವೀರ್‌ ಒಡೆಯರ್‌ ತಿರುಗೇಟು

ಜನರ ದಿಕ್ಕು ತಪ್ಪಿಸುವ, ಅರ್ಧ ಸತ್ಯ ಹೇಳುವ ಹಾಗೂ ವೃಥಾ ಅಪಪ್ರಚಾರ ಮಾಡುವುದೇ ಕಾಂಗ್ರೆಸ್ಸಿಗರ ತಂತ್ರ. ಬಿಹಾರ ಚುನಾವಣೆ ಫಲಿತಾಂಶ ನೋಡಿಯಾದರೂ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಯದುವೀರ್‌ ಹೇಳಿದ್ದಾರೆ.


ಕಾಂಗ್ರೆಸ್ ನಾಯಕರ ‘ಮತಗಳ್ಳತನʼ ಆರೋಪ ಹಾಗೂ ನಿರೂಪಣೆಗೆ ಬೆಲೆ ಇಲ್ಲ ಎಂಬುದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಸಾಬೀತಾಗಿದೆ ಎಂದು ಮೈಸೂರು-ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮಾಡುತ್ತಿರುವ ಮತಗಳ್ಳತನ ಆರೋಪಗಳಿಗೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ನೀಡುವಂತೆ ಮೊದಲಿನಿಂದಲೂ ಹೇಳುತ್ತಿದ್ದೇವೆ. ಆದರೆ, ಈವರೆಗೂ ಯಾವುದೇ ದೂರು ಕೊಟ್ಟಿಲ್ಲ. ಕೇವಲ ಚುನಾವಣೆಗಾಗಿ ಮತಗಳ್ಳತನ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಜನರ ದಿಕ್ಕು ತಪ್ಪಿಸುವ, ಅರ್ಧ ಸತ್ಯ ಹೇಳುವ ಹಾಗೂ ವೃಥಾ ಅಪಪ್ರಚಾರ ಮಾಡುವುದೇ ಕಾಂಗ್ರೆಸ್ಸಿಗರ ತಂತ್ರ. ಬಿಹಾರ ಚುನಾವಣೆ ಫಲಿತಾಂಶ ನೋಡಿಯಾದರೂ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಹಾರ ಚುನಾವಣೆ ಪ್ರಚಾರದ ವೇಳೆ ಆ ಪಕ್ಷದ ನಾಯಕರು ವಿದೇಶದಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದುದ್ದನ್ನು ನೋಡಿದ್ದೇವೆ. ಆದರೆ, ಬಿಜೆಪಿ ನಾಯಕರು ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡಿದ್ದಾರೆ. ಇದರಿಂದಲೇ ಎನ್ಡಿಎ ಮೈತ್ರಿಕೂಟಕ್ಕೆ ಅದ್ಭುತ ಫಲಿತಾಂಶ ಸಿಕ್ಕಿದೆ. ಪ್ರಧಾನಿ ಮೋದಿ ನಾಯಕತ್ವ ಹಾಗೂ ಎನ್ಡಿಎ ಮೈತ್ರಿಕೂಟಕ್ಕೆ ಜಯ ಸಿಕ್ಕಿದೆ' ಎಂದು ಹೇಳಿದರು.

ಕಾಂಗ್ರೆಸ್ ಹಿಂದಿನಿಂದಲೂ ಅಭಿವೃದ್ಧಿಯಿಂದ ದೂರವೇ ಇದೆ. ಅಭಿವೃದ್ಧಿ ರಾಜಕಾರಣವನ್ನು ಆ ಪಕ್ಷದವರು ಮಾಡಿಯೇ ಇಲ್ಲ. ಸಮಾಜ ವಿಭಜನೆ ಮಾಡಿ ಲಾಭ ಪಡೆಯಲು ಮುಂದಾಗುತ್ತದೆ ಎಂದು ಆರೋಪಿಸಿದರು.

ದೇಶವು ಈಗ ಏಕತೆಯಿಂದ ಮುನ್ನುಗ್ಗುತ್ತಿದೆ. ವಿಕಸಿತ ಭಾರತಕ್ಕೆ ಜನರ ಸ್ಪಂದನೆ ಉತ್ತಮವಾಗಿದೆ. 2028ಕ್ಕೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಗ್ಯಾರಂಟಿಗೂ ಜನರ ಹಿತಕ್ಕಾಗಿ ಯೋಜನೆ ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಹಣಕಾಸಿನ ಮಿತಿಯಲ್ಲಿ ಯೋಜನೆ ರೂಪಿಸಿದರೆ ಒಳ್ಳೆಯದು. ಹಣಕಾಸಿನ ಸಾಮರ್ಥ್ಯ ಇಲ್ಲದಿದ್ದರೂ ರಾಜ್ಯ ಸರ್ಕಾರ ಯೋಜನೆಗಳನ್ನು ಮಾಡಿದೆ. ಹೀಗಾಗಿ, ಗ್ಯಾರಂಟಿಗೆ ಹಣ ಹೊಂದಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ದೂರಿದರು.

Read More
Next Story