
ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ? ಚುನಾವಣಾ ಆಯೋಗದಿಂದ ನಾಳೆ ಕಾರ್ಯಾಗಾರ
ಇತ್ತೀಚೆಗೆ ಬಿಹಾರದಲ್ಲಿ ಚುನಾವಣಾ ಆಯೋಗವು 'ಎಸ್.ಐ.ಆರ್' ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದು ದೇಶಾದ್ಯಂತ ಗಮನ ಸೆಳೆದಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮಾದರಿಯಲ್ಲೇ ಕರ್ನಾಟಕದಲ್ಲೂ ಮತದಾರರ ಪಟ್ಟಿಯನ್ನು ಆಮೂಲಾಗ್ರವಾಗಿ ಪರಿಷ್ಕರಿಸುವ ಪ್ರಕ್ರಿಯೆ ಆರಂಭವಾಗುವ ಸೂಚನೆ ಸಿಕ್ಕಿದೆ. ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಬುಧವಾರ (ಸೆಪ್ಟೆಂಬರ್ 17ರಂದು) ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದೆ. ಈ ಕಾರ್ಯಾಗಾರದಲ್ಲಿ, ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಏನಿದು ಬಿಹಾರದ 'ಎಸ್.ಐ.ಆರ್' ಮಾದರಿ?
ಇತ್ತೀಚೆಗೆ ಬಿಹಾರದಲ್ಲಿ ಚುನಾವಣಾ ಆಯೋಗವು 'ಎಸ್.ಐ.ಆರ್' ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದು ದೇಶಾದ್ಯಂತ ಗಮನ ಸೆಳೆದಿದೆ. ಈ ಪ್ರಕ್ರಿಯೆಯಡಿ, ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರನ್ನು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ.
ಒಂದೇ ವ್ಯಕ್ತಿ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದನ್ನು ತಡೆಯುವುದು, ಮತದಾರರ ಪಟ್ಟಿಯನ್ನು ನಿಖರ ಅಪ್ಡೇಟ್, ಬೇರೆಡೆಗೆ ವಲಸೆ ಹೋದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು, ಅವರು ವಾಸಿಸುವ ಹೊಸ ಸ್ಥಳದಲ್ಲಿ ಹೆಸರು ನೋಂದಾಯಿಸಲು ಪ್ರೋತ್ಸಾಹಿಸುವುದು. 18 ವರ್ಷ ತುಂಬಿದ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.
ಕರ್ನಾಟಕದಲ್ಲಿ ಯಾಕೆ ಈ ಚರ್ಚೆ?
ಕರ್ನಾಟಕದಲ್ಲಿಯೂ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರು, ಮೃತರ ಹೆಸರುಗಳು ಮತ್ತು ಸ್ಥಳಾಂತರಗೊಂಡವರ ಹೆಸರುಗಳು ದೊಡ್ಡ ಸಂಖ್ಯೆಯಲ್ಲಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಬಿಹಾರದ ಯಶಸ್ವಿ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗವು ಗಂಭೀರವಾಗಿ ಚಿಂತನೆ ನಡೆಸಿದೆ ಎನ್ನಲಾಗಿದೆ.