ʼಮತಕಳವುʼ ಪ್ರತಿಭಟನಾ ಸಮಾವೇಶ | ಚುನಾವಣಾ ಆಯೋಗಕ್ಕೆ ರಾಹುಲ್‌ ʼಪಂಚ ಪ್ರಶ್ನೆʼ; ದೂರು ನೀಡದೇ ವಾಪಸ್‌
x

ʼಮತಕಳವುʼ ಪ್ರತಿಭಟನಾ ಸಮಾವೇಶ | ಚುನಾವಣಾ ಆಯೋಗಕ್ಕೆ ರಾಹುಲ್‌ ʼಪಂಚ ಪ್ರಶ್ನೆʼ; ದೂರು ನೀಡದೇ ವಾಪಸ್‌

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಚುನಾವಣಾ ಅಕ್ರಮದ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು


ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರದಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ 1,00,250 ಮತಕಳವು ಸೂರ್ಯ ಚಂದ್ರರಷ್ಟೇ ಸತ್ಯ. ಸಂವಿಧಾನದಡಿ ಕಾರ್ಯ ನಿರ್ವಹಿಸಬೇಕಾದ ಚುನಾವಣಾ ಆಯೋಗವು ಬಿಜೆಪಿ ಆಣತಿಯಂತೆ ವರ್ತಿಸುತ್ತಿದೆ. ಮಹದೇವಪುರ ಒಂದೇ ಅಲ್ಲ, ಇಡೀ ದೇಶಾದ್ಯಂತ ಬಿಜೆಪಿ ಹಾಗೂ ಆಯೋಗ ಸೇರಿಕೊಂಡು ಮತಕಳವು ಮಾಡಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ನಡೆದ ಮತಗಳ್ಳತನ ಕುರಿತ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಆರು ತಿಂಗಳು ಶ್ರಮವಹಿಸಿ ಮತ ಕಳವು ವಿಶ್ಲೇಷಿಸಿದ್ದೇವೆ. ಇದರ ದಾಖಲೆ ಬಹಿರಂಗಪಡಿಸಿದ ನನಗೆ ಚುನಾವಣಾ ಆಯೋಗ ಈಗ ಪ್ರಮಾಣ ಪತ್ರ ಸಲ್ಲಿಸಲು ನೋಟಿಸ್‌ ನೀಡಿದೆ. ಮತ ಕಳವು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ ಎಂದು ಚುನಾವಣಾ ಆಯೋಗಕ್ಕೆ ಟಾಂಗ್‌ ನೀಡಿದರು.

ಚುನಾವಣೆಯಲ್ಲಿ ಆಗಿರುವ ಮತ ಪ್ರಮಾಣ, ಮತದಾನದ ದೃಶ್ಯಾವಳಿಗಳನ್ನು ಒದಗಿಸುವಂತೆ ಕೋರಿದರೆ ಚುನಾವಣಾ ಆಯೋಗ ನಿರಾಕರಿಸಿದೆ. ಮತದಾನ ನಡದ 45 ದಿನಗಳಲ್ಲೇ ಮತದಾನ ಚಿತ್ರೀಕರಣದ ದೃಶ್ಯಗಳನ್ನು ಡಿಲೀಟ್‌ ಮಾಡಿದೆ. ನಾವು ಕೇಳುವ ಪ್ರತಿ ಮಾಹಿತಿಯನ್ನೂ ಅಳಿಸಿ ಹಾಕುತ್ತಿದೆ ಎಂದು ಆರೋಪ ಮಾಡಿದರು.

ಚುನಾವಣಾ ಆಯೋಗ ನಾವು ಕೇಳಿರುವ ಮಾಹಿತಿ ನೀಡಲಿ, ಆರೋಪ ಸಾಬೀತು ಮಾಡುತ್ತೇನೆ. ಆದರೆ, ನಮ್ಮ ಸವಾಲು ಒಪ್ಪದ ಚುನಾವಣಾ ಆಯೋಗ ತನ್ನ ವೆಬ್‌ಸೈಟನ್ನು ಬಂದ್ ಮಾಡಿದೆ. ಮತದಾರರ ಡಿಜಿಟಲ್‌ ಮತದಾರರ ಪಟ್ಟಿ ನೀಡಿದರೆ ಮತಕಳ್ಳತನ ಸಾಬೀತು ಮಾಡುತ್ತೇವೆ, ಇದು ಕೇವಲ ಕರ್ನಾಟಕ ಅಲ್ಲ, ದೇಶಾದ್ಯಂತ ಮತ ಕಳ್ಳತನ ಆಗಿದೆ ಹೇಳಿದರು.

ಸಂವಿಧಾನದ ಮೇಲೆ ಪ್ರಹಾರ

ಒಬ್ಬರಿಗೆ ಒಂದು ಮತ ಎಂಬುದು ಸಂವಿಧಾನದ ಮೂಲಭೂತ ಅಡಿಪಾಯ. ಭಾರತದ ವಿವಿಧ ಸಂಸ್ಥೆಗಳ ಮೇಲೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಪ್ರಹಾರ ಮಾಡುತ್ತಿವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ 1 ಕೋಟಿ ಜನರು ಮತದಾನ ಮಾಡಿದರು. ಹೊಸದಾಗಿ ಮತಪಟ್ಟಿ ಸೇರಿದ ಮತಗಳೆಲ್ಲವೂ ಬಿಜೆಪಿಯ ಮತಗಳು. ಆಗ ನಾವು ಸಂದೇಹ ಪಟ್ಟು ಸಂಶೋಧನೆ ಮಾಡಲು ಶುರು ಮಾಡಿದೆವು. ಕರ್ನಾಟಕದಲ್ಲಿ 16 ಲೋಕಸಭೆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಬೇಕಾಗಿತ್ತು. ಆದರೆ, ಒಂಬತ್ತು ಸ್ಥಾನಗಳಲ್ಲಿ ಮಾತ್ರ ಗೆದ್ದೆವು. ಅನುಮಾನ ಬಂದು ಪರಿಶೀಲಿಸಿದಾಗ ಕೆಲ ಮನೆಗಳಲ್ಲಿ ಮತದಾರರೇ ಇರಲಿಲ್ಲ ಎಂದು ಹೇಳಿದರು.

ನಕಲಿ ಮತದಾರರ ಪಟ್ಟಿಯಲ್ಲಿದ್ದ ಒಬ್ಬನೇ ವ್ಯಕ್ತಿ ಕರ್ನಾಟಕ, ಲಕ್ನೋದಲ್ಲಿ ಮತ ಹಾಕಿದ್ದಾನೆ. ಯಾವುದೇ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಮತ ಹಾಕಬಹುದು ಎಂಬ ನಿಯಮವಿದೆಯೇ ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.

ಈಗ ಚುನಾವಣಾ ಆಯೋಗ ನನಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ. ಸಮಯ ಬಂದೇ ಬರುತ್ತದೆ, ಒಬ್ಬೊಬ್ಬರನ್ನು ಹುಡುಕಿ ಪಾಠ ಕಲಿಸುತ್ತೇವೆ, ನರೇಂದ್ರ ಮೋದಿ ಕೇವಲ 25 ಸೀಟುಗಳಲ್ಲಿ ಮಾತ್ರ ಪ್ರಧಾನಮಂತ್ರಿ ಆಗಿದ್ದಾರೆ. 25 ಕ್ಷೇತ್ರಗಳಲ್ಲಿ 34 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಲೇವಡಿ ಮಾಡಿದರು.

ಮತ ಕಳ್ಳತನ ಮಾಡಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿದ್ದಾರೆ. ಚುನಾವಣಾ ಆಯೋಗ ಎಲ್ಲಾ ದತ್ತಾಂಶಗಳನ್ನು ಬಹಿರಂಗಪಡಿಸಬೇಕು. ನಾವು ಯಾರನ್ನೇ ಪ್ರಶ್ನೆ ಮಾಡಿದರೂ ಸಾಕ್ಷಿನಾಶ ಮಾಡುತ್ತಾರೆ, ಚುನಾವಣಾ ಆಯೋಗ ನಮಗೆ ಮಾಹಿತಿ ನೀಡಲಿಲ್ಲ ಅಂದರೆ ಬೇರೆ ಕ್ಷೇತ್ರಗಳಲ್ಲಿ ನಾವು ಮತಗಳ್ಳತನ ಬಗ್ಗೆ ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಚುನಾವಣಾ ಆಯೋಗದ ಪ್ರತಿ ಅಧಿಕಾರಿಗೂ ಮನವರಿಕೆ ಆಗಬೇಕು.ಅಗತ್ಯ ಮಾಹಿತಿ ನೀಡದೇ ಹೋದರೆ ಒಂದಲ್ಲ, ಎರಡಲ್ಲ. ಸುಮಾರು 25 ಕ್ಷೇತ್ರದ ಮತಕಳವು ಬಹಿರಂಗಪಡಿಸುತ್ತೇವೆ ಎಂದರು.

ಮತಗಳ್ಳತನ ಕ್ರಿಮಿನಲ್ ಅಪರಾಧ

ಮಹದೇವಪುರದಲ್ಲಿ ನಡೆದಿರುವ ಮತಕಳ್ಳತನದ ಕರ್ನಾಟಕ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚಿಸಿದರು.

ಮತದಾರರಿಗೆ ಮತ ಕಳುವಿನ ಸತ್ಯ ತಿಳಿಸಬೇಕಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ಶಾಸಕರ ಖರೀದಿ ಮೂಲಕ ಸರ್ಕಾರ ರಚಿಸಿತ್ತು. ಚುನಾವಣಾ ಆಯೋಗ ಕಳೆದ 10 ವರ್ಷಗಳ ಮತಪಟ್ಟಿ ಹಾಗೂ ಮತಗಟ್ಟೆಗಳ ವಿಡಿಯೋ ಬಹಿರಂಗ ಪಡಿಸಬೇಕು ಎಂದು ರಾಹುಲ್‌ ಗಾಂಧಿ ಆಗ್ರಹಿಸಿದರು.

ಆಯೋಗಕ್ಕೆ ರಾಹುಲ್‌ ಪಂಚ ಪ್ರಶ್ನೆ

1. ಡಿಜಿಟಲ್ ಯಂತ್ರದ ಮರುಪರಿಶೀಲನೆಯಲ್ಲಿ ಮತದಾರರ ಪಟ್ಟಿಯನ್ನು ಜನರಿಗೆ ಏಕೆ ನೀಡುತ್ತಿಲ್ಲ?

2. ನೀವು ವಿಡಿಯೋ ಸಾಕ್ಷಿಯನ್ನು ಏಕೆ ನಾಶಪಡಿಸಿದ್ದೀರಾ ?

3. ಚುನಾವಣಾ ಆಯೋಗ ಏಕೆ ಬೃಹತ್‌ ವಂಚನೆ ಮಾಡಿದೆ?

4. ಚುನಾವಣಾ ಆಯೋಗ ವಿರೋಧ ಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ?

5. ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌ ರೀತಿ ಏಕೆ ಕಾರ್ಯ ನಿರ್ವಹಿಸುತ್ತಿದೆ?

ಜನ ಬೆಂಬಲ ಇಲ್ಲದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಯೋಜನೆ ಮಾಡಿ ಮತ ಕದ್ದಿದ್ದಾರೆ, ಈಗಿರುವ ಕೇಂದ್ರ ಸರ್ಕಾರ ಕಳ್ಳತನದ ಸರ್ಕಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಮತಕಳವಿನ ಮೂಲಕ ಅಧಿಕಾರ ಹಿಡಿದಿರುವ ಮೋದಿ ಅವರು ಪ್ರಧಾನಿ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಎಲ್ಲಾ ರಾಜ್ಯಗಳಲ್ಲಿ ಮತಗಳ್ಳತನ ತಪ್ಪುಗಳನ್ನು ಹುಡುಕಿ ತೆಗೆಯುತ್ತಿದ್ದೇವೆ, ಬೋಗಸ್ ವೋಟಿಂಗ್ ಮಾಡಿ ಮೋದಿಯವರು ದೇಶ ಆಳುತ್ತಿದ್ದಾರೆ ಎಂದು ಟೀಕಿಸಿದರು.

2019 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿನ ವಿಶ್ಲೇಷಣೆ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಬೋಗಸ್ ಮತದಾನದಿಂದ ಸೋತೆ. ಚುನಾವಣಾ ರಕ್ಷಣೆ ಜನರ ಜವಾಬ್ದಾರಿ, ಮೋದಿ ಈಗಾಗಲೇ ಬೇರೆ ಪಕ್ಷದ ಮುಖಂಡರಿಗೆ ಇ ಡಿ, ಸಿಬಿಐ ಮೂಲಕ ಹೆಸರಿಸುತ್ತಿದ್ದಾರೆ. ಪಕ್ಷಗಳನ್ನು ಒಡೆದು ಮೋದಿ ಬೇರೆ ರಾಜ್ಯಗಳಲ್ಲಿ ಸರ್ಕಾರ ರಚಿಸಿದ್ದಾರೆ ಎಂದು ಆರೋಪಿಸಿದರು.

ದೂರು ನೀಡದೇ ವಾಪಸ್‌

ಮತಕಳವು ಪ್ರತಿಭಟನಾ ಸಮಾವೇಶದ ಬಳಿಕ ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಅವರು ದೂರು ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಆದರೆ, ಸಭೆ ಮುಗಿದ ಕೂಡಲೇ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ಭೇಟಿ ನೀಡದೇ ವಾಪಸ್‌ ತೆರಳಿದ್ದರು. ಇದಕ್ಕೂ ಮುನ್ನ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ ಅವರು ನಾನು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಈಗ ನೀವು ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗಕ್ಕೆ ತಿರುಗೇಟು ನೀಡಿದ್ದರು.

ಮತಕಳವು ಆರೋಪ ಸಂಬಂಧ ಸೂಕ್ತ ದಾಖಲೆಯನ್ನು ಘೋಷಣೆ ಪತ್ರದೊಂದಿಗೆ ಒದಗಿಸುವಂತೆ ರಾಹುಲ್‌ ಗಾಂಧಿ ಅವರಿಗೆ ರಾಜ್ಯ ಚುನಾವಣಾಧಿಕಾರಿ ಪತ್ರ ಬರೆದಿದ್ದರು.

ಕೇಂದ್ರ ಚುನಾವಣಾ ಆಯೋಗಕ್ಕೆ ದೂರು

ಮತಕಳ್ಳತನದ ಬಗ್ಗೆ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಂಡಿ ಒಕ್ಕೂಟ ಈ ವಿಚಾರದಲ್ಲಿ ಒಗ್ಗಟ್ಟಾಗಿದೆ. ಸಂವಿಧಾನದ ರಕ್ಷಣೆ ಮಾಡಲು ಕ್ವಿಟ್ ಇಂಡಿಯಾ ಚಳವಳಿ ರೀತಿ ನಾವು ಹೋರಾಟ ಮಾಡಬೇಕಿದೆ. ಮಾಡು ಇಲ್ಲವೇ ಮಡಿ ಎಂದ ಸ್ಲೋಗನ್ ಜತೆ ಹೋರಾಟ ಮಾಡಬೇಕು ಎಂದು ಹೇಳಿದರು.

ಚುನಾವಣಾ ಆಯೋಗ ತಿರುಗೇಟು

ಮಹದೇವಪುರದಲ್ಲಿ ಮತಕಳವು ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ಮತದಾರರ ಪಟ್ಟಿ ಪಾರದರ್ಶಕವಾಗಿ ತಯಾರಿಸಲಾಗುತ್ತದೆ ಎಂಬುದು ನಿಮಗೂ ಗೊತ್ತಿದೆ. ಆದರೂ, ಮತಕಳವು ಬಗ್ಗೆ ಆರೋಪ ಮಾಡಿದ್ದೀರಿ, ಚುನಾವಣೆಗೂ ಮುನ್ನ ಕಾಂಗ್ರೆಸ್‌ ನಾಯಕರಿಗೂ ಮತದಾರರ ಪಟ್ಟಿ ನೀಡಲಾಗಿರುತ್ತದೆ. 2024 ರ ಕರಡು ಪ್ರತಿ ಮತ್ತು 2025 ರ ಅಂತಿಮಪಟ್ಟಿ ನೀಡಿದಾಗ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಈಗ ಮಾಧ್ಯಮಗೋಷ್ಠಿಯಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರು ಇದ್ದಾರೆ ಎಂದು ತೋರಿಸಿದ್ದೇಕೆ ಎಂದು ಪ್ರಶ್ನಿಸಿದೆ.

ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 1,14,046 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದರಲ್ಲಿ 1,00,250 ಮತಗಳು ನಕಲಿಯಾಗಿವೆ. ಈ ಪೈಕಿ 11,965 ಮತದಾರರು ನಕಲಿಯಾಗಿದ್ದರೆ, 40,009 ಖೊಟ್ಟಿ ವಿಳಾಸ ಹೊಂದಿದ್ದಾರೆ. 10,452 ಮತದಾರರು ಒಂದೇ ವಿಳಾಸ ಹೊಂದಿದ್ದಾರೆ. 4132 ನಕಲಿ ಫೋಟೋಗಳಿವೆ. 33,692 ಮಂದಿ ಫಾರಂ-6 ಅನ್ನು ದುರುಪಯೋಗಪಡಿಸಿಕೊಂಡು ಹೊಸ ಮತದಾರರಾಗಿ ಸೇರ್ಪಡೆಯಾಗಿದ್ದಾರೆ ಎಂದು ರಾಹುಕ್‌ ಗಾಂಧಿ ಅವರು ದಾಖಲೆ ಸಮೇತ ಆರೋಪ ಮಾಡಿದ್ದರು.



Live Updates

  • ಚುನಾವಣಾ ಆಯೋಗಕ್ಕೆ ದೂರು ನೀಡದ ರಾಹುಲ್‌ ಗಾಂಧಿ
    8 Aug 2025 2:27 PM IST

    ಚುನಾವಣಾ ಆಯೋಗಕ್ಕೆ ದೂರು ನೀಡದ ರಾಹುಲ್‌ ಗಾಂಧಿ

    ಮತ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ರಾಹುಲ್‌ ಗಾಂಧಿ ಅವರು ಕೊನೆ ಕ್ಷಣದಲ್ಲಿ ಚುನಾವಣಾ ಆಯೋಗಕ್ಕೆ ಭೇಟಿ ನೀಡದೇ ವಾಪಸ್‌ ತೆರಳಿದರು. ಮಹದೇವಪುರ ಚುನಾವಣಾ ಅಕ್ರಮದ ಕುರಿತು ಸಹಿ ಮಾಡಿದ ಅಫಿಡೆವಿಟ್‌ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯುಕ್ತರು ಪತ್ರ ಬರೆದಿದ್ದರು.

    ನಿಗದಿಯಂತೆ ಪ್ರತಿಭಟನಾ ಸಮಾವೇಶ ಮುಗಿಸಿ ಚುನಾವಣಾ ಆಯೋಗಕ್ಕೆ ತೆರಳಿ ಪ್ರಮಾಣ ಪತ್ರದ ಜತೆಗೆ ದೂರು ಸಲ್ಲಿಸಬೇಕಾಗಿತ್ತು. ಆದರೆ, ಸಮಾವೇಶದಲ್ಲೇ ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆಗಳನ್ನು ಕೇಳಿ ರಾಹುಲ್‌ ಹಿಂತಿರುಗಿದರು.  

  • ಕೇಂದ್ರ ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆ
    8 Aug 2025 1:41 PM IST

    ಕೇಂದ್ರ ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆ

    ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಚುನಾವಣಾ ಆಯೋಗದ ಮುಂದೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಡಿಜಿಟಲ್‌ ರೂಪದ ಮತದಾರರ ಪಟ್ಟಿ ನೀಡಲು ಆಯೋಗ ಹಿಂಜರಿಯುತ್ತಿರುವುದೇಕೆ, ಮತದಾನದ ವೇಳೆ ಚಿತ್ರೀಕರಿಸಿದ್ದ ವಿಡಿಯೋಗಳನ್ನು ಯಾಕೆ ಕೊಡುತ್ತಿಲ್ಲ. ಬಿಜೆಪಿ ಏಜೆಂಟ್‌ ರೀತಿ ವರ್ತಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.


  • 8 Aug 2025 12:32 PM IST

    ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನಿಂದ ದೂರು; ಆರು ನಾಯಕರಿಗೆ ಮಾತ್ರ ಅವಕಾಶ

    ಮತಗಳ್ಳತನ ಆರೋಪ‌ ವಿಚಾರಕ್ಕೆ ಸಂಬಂಧಪಟ್ಟಂತೆ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ  ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಬಳಿಕ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದ್ದು, 6 ನಾಯಕರಿಗಷ್ಟೇ ಅನುಮತಿ ನೀಡಲಾಗಿದೆ.

    ರಾಜ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ನಾಯಕರಿಂದ ದೂರು ಹಿನ್ನೆಲೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗಷ್ಟೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ದೂರು ಸಲ್ಲಿಸಲು ಅನುಮತಿ ನೀಡಿದ್ದಾರೆ.

  • 8 Aug 2025 11:18 AM IST

    ಚುನಾವಣಾ ಆಯೋಗಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ದೂರು

    ಫ್ರೀಡಂ ಪಾರ್ಕಿನಲ್ಲಿ ಮತಗಳ್ಳತನ ವಿಚಾರವಾಗಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದು, 6 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ರಾಹುಲ್‌ ಗಾಂಧಿ ಅವರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಇನ್ನೂ ಬಂದಿಲ್ಲ.

    ರಾಹುಲ್ ಗಾಂಧಿ ಆಸೀನರಾಗುವ ವೇದಿಕೆಯಲ್ಲಿ ಸಚಿವರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ವೇದಿಕೆಯಲ್ಲಿ ಶಾಸಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

    ವೇದಿಕೆಯಲ್ಲಿ ಭಾಷಣ ಬಳಿಕ 100 ಮೀಟರ್ ದೂರದಲ್ಲಿರುವ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

  • 8 Aug 2025 10:08 AM IST

    ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ - ಬಿಜೆಪಿ ತೀವ್ರ ಆಕ್ರೋಶ, ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸವಾಲ್

    ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 

     ಲೋಕಸಭೆಯ ವಿರೋಧ ಪಕ್ಷದ ನಾಯಕರು ರಾಹುಲ್‌ ಗಾಂಧಿ ಅವರೆ,ನೀವು ಇಂದು ಬೆಳಿಗ್ಗೆ ನಿಮ್ಮ ಪಕ್ಷ ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿದ್ದಿರಿ.

    ಯಾವುದೇ ವಿಷಯದ ಕುರಿತು ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಹೀಗಾಗಿ ನೀವು ಪ್ರತಿಭಟಿಸಲು ಸರ್ವ ಸ್ವತಂತ್ರರು. ಆದರೆ ಈ ಕೆಳಗಿನ ಪ್ರಶ್ನೆಗಳಿಗೆ ಮಾತ್ರ ನಿಮ್ಮಿಂದ ನೇರವಾದ ಹಾಗೂ ಸಮಂಜಸವಾದ ಉತ್ತರವನ್ನು ಬಯಸುತ್ತೇವೆ. ಏಕೆಂದರೆ ಈ ಪ್ರಶ್ನೆಗಳು ಕರ್ನಾಟಕದ ಜನತೆಯದ್ದಾಗಿವೆ. ಬಹಳಷ್ಟು ದಿನಗಳಿಂದ ಕನ್ನಡಿಗರು ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವನ್ನು ಬಯಸುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಉತ್ತರಿಸುತ್ತಿರಾ ಎಂದು ನಾವು ನಂಬಿದ್ದೇವೆ ಎಂದು ಕಿಡಿಕಾರಿದ್ದಾರೆ.

  • ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ನಿಖಿಲ್ ಕುಮಾರಸ್ವಾಮಿ
    8 Aug 2025 9:48 AM IST

    ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ನಿಖಿಲ್ ಕುಮಾರಸ್ವಾಮಿ

    ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ, ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಅವರಿಗೆ ಸ್ವಾಗತಿಸಿದ್ದಾರೆ. 'ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ'ದ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಗುರುವಾರ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇಂದು ಪ್ರತಿಭಟನೆ ನಡೆಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ರಾಹುಲ್ ಗಾಂಧಿ ದೂರು ಸಲ್ಲಿಕೆ ಮಾಡಲಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಟ್ವೀಟ್

    ಶ್ರೀ ರಾಹುಲ್ ಗಾಂಧಿ ಅವರೇ, ನಮ್ಮ ಕರ್ನಾಟಕಕ್ಕೆ ಸ್ವಾಗತ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

    ಕಳೆದ 3 ವರ್ಷದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3 ಲಕ್ಷ ಕೋಟಿ ಸಾಲ ಮಾಡಿದೆ.

    ರಾಜ್ಯದ GSDPಯಲ್ಲಿ ಸಾಲದ ಪ್ರಮಾಣ 24.91% ಆಗಿದೆ.

    ನಿಮ್ಮ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ ಬೇಕಾಗಿರುವುದು 55 ಸಾವಿರ ಕೋಟಿ, ಕಳೆದ 3 ವರ್ಷದಿಂದ ನಿಮ್ಮ ಸರ್ಕಾರ ಮಾಡುತ್ತಿರುವ ಸಾಲ ವರ್ಷಕ್ಕೆ 1 ಲಕ್ಷ ಕೋಟಿ.

    ⁠ನಿಮ್ಮ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ.

    ತಾಯಿ ಮಹಾಲಕ್ಷ್ಮಿಯು ಹಣಕಾಸು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಸರ್ವಐಶ್ವರ್ಯ ಪ್ರಾಪ್ತಿಸಲಿ ಎಂದು ಪ್ರಾರ್ಥನೆ ಮಾಡೋಣ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಸ್ವಾಗತಿಸಿದ್ದಾರೆ.

  • 8 Aug 2025 9:47 AM IST

    ʼಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿ ಪಿತೂರಿʼ

    ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ (Benefit of the doubt) ಪಡೆಯುವ ಕಿಡಿಗೇಡಿ ಪಿತೂರಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೂಬೆಲ್ ರಾಜಕಾರಣ. ಮತಗಳ್ಳತನಕ್ಕೆ ಒಂದೇ ಮದ್ದು. ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ ಎಂದು ಹೇಳಿದ್ದು, ರಾಹುಲ್‌ ಗಾಂಧಿ ಆರೋಪವನ್ನು ಟೀಕಿಸಿದ್ದಾರೆ.


  • ಫ್ರೀಡಂ ಪಾರ್ಕಿನಲ್ಲಿ ಬಿಗಿ ಪೊಲೀಸ್ ಭದ್ರತೆ
    8 Aug 2025 9:38 AM IST

    ಫ್ರೀಡಂ ಪಾರ್ಕಿನಲ್ಲಿ ಬಿಗಿ ಪೊಲೀಸ್ ಭದ್ರತೆ

    ರಾಹುಲ್ ಗಾಂಧಿ ಪ್ರತಿಭಟನಾ ಸಮಾವೇಶ ಹಿನ್ನೆಲೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸಾವಿರಾರು ಪೊಲೀಸರು ಸ್ಥಳದಲ್ಲಿದ್ದು, ಅಧಿಕಾರಿಗಳು ಮಹತ್ವದ ಸೂಚನೆ ನೀಡುತ್ತಿದ್ದಾರೆ. 

    ಇನ್ನು ಚುನಾವಣಾ ಆಯೋಗದ ಮುಂದೆಯೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಅಗಮಿಸುವ ಕಾರಣ ಬಿಗಿ ಭದ್ರತೆ ಒದಗಿಸಲಾಗಿದೆ.

Read More
Next Story