ಮತ ಅಕ್ರಮದ ವಿರುದ್ಧ ಸಮರ:  ಮಲ್ಲಿಕಾರ್ಜುನ ಖರ್ಗೆಗೆ 1.12 ಕೋಟಿ ಕನ್ನಡಿಗರ ಸಹಿಪತ್ರ ಸಲ್ಲಿಕೆ
x

ಮತ ಅಕ್ರಮದ ವಿರುದ್ಧ ಸಮರ: ಮಲ್ಲಿಕಾರ್ಜುನ ಖರ್ಗೆಗೆ 1.12 ಕೋಟಿ ಕನ್ನಡಿಗರ ಸಹಿಪತ್ರ ಸಲ್ಲಿಕೆ

ಈ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಬಯಲಿಗೆಳೆದಿದ್ದ ಮತಗಳ ಅಕ್ರಮವೇ ಮೂಲ ಪ್ರೇರಣೆ.


Click the Play button to hear this message in audio format

ದೇಶಾದ್ಯಂತ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮಗಳ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನಡೆಸಿದ ಬೃಹತ್ ಆಂದೋಲನವು ರಾಷ್ಟ್ರ ರಾಜಧಾನಿ ತಲುಪಿದೆ. ರಾಜ್ಯದಲ್ಲಿ ಸಂಗ್ರಹಿಸಲಾದ 1.12 ಕೋಟಿಗೂ ಅಧಿಕ ಸಹಿಗಳ ದಾಖಲೆಗಳನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋಮವಾರ ಹಸ್ತಾಂತರಿಸಿತು.

ನವದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ, ಕರ್ನಾಟಕದ ಕಾಂಗ್ರೆಸ್ ಮುಖಂಡರು 1.12 ಕೋಟಿ ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಸಲ್ಲಿಸಿದರು. ನಂತರ, ಸಹಿ ಸಂಗ್ರಹದ ಉಳಿದ ಎಲ್ಲಾ ಪೆಟ್ಟಿಗೆಗಳನ್ನು ಎಐಸಿಸಿಯ ನೂತನ ಕಟ್ಟಡ 'ಇಂದಿರಾ ಭವನ'ದಲ್ಲಿ ಎಐಸಿಸಿ ಕಾರ್ಯದರ್ಶಿ ನೆಟ್ಟಾ ಡಿಸೋಜ ಅವರಿಗೆ ಹಸ್ತಾಂತರಿಸಲಾಯಿತು. ಈ ಸಹಿಪತ್ರಗಳನ್ನು ಶೀಘ್ರದಲ್ಲೇ ರಾಷ್ಟ್ರಪತಿಗಳು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದರು.

ಈ ನಿಯೋಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಜಿ.ಸಿ. ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಸಹಿ ಅಭಿಯಾನದ ಹಿನ್ನೆಲೆ

ಈ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಬಯಲಿಗೆಳೆದಿದ್ದ ಮತಗಳ ಅಕ್ರಮವೇ ಮೂಲ ಪ್ರೇರಣೆ. ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ಮತಗಳು ಮತ್ತು ಒಂದು ಬಾರ್‌ನಲ್ಲಿ 70-80 ಮತದಾರರಿರುವುದನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿತ್ತು. ಇದಲ್ಲದೆ, ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಂತಹ ಹಲವು ಕಡೆಗಳಲ್ಲಿ 'ಗರುಡಾ ಆ್ಯಪ್' ಬಳಸಿ, ಹೊರ ರಾಜ್ಯಗಳ ಮೊಬೈಲ್ ಸಂಖ್ಯೆಗಳ ಮೂಲಕ ಸಾವಿರಾರು ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರವು ಎಸ್‌ಐಟಿ ತನಿಖೆಗೂ ಆದೇಶಿಸಿದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, "ಇದು ಕೇವಲ ಕರ್ನಾಟಕದ ಸಮಸ್ಯೆಯಲ್ಲ, ದೇಶದಾದ್ಯಂತ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ವ್ಯವಸ್ಥಿತ ಪಿತೂರಿ. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ, ಬಿಜೆಪಿಯ ಕೈಗೊಂಬೆಯಾಗಿದೆ ಎಂಬ ಅನುಮಾನವಿದೆ. ಚುನಾವಣಾ ಆಯೋಗದ ಮೇಲೆ ನಂಬಿಕೆ ಕಡಿಮೆಯಾಗುತ್ತಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಲು ಸರ್ಕಾರ ಚಿಂತನೆ ನಡೆಸಿದೆ," ಎಂದು ತಿಳಿಸಿದರು.

Read More
Next Story