
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್
ಮತ ಕಳವು ಆರೋಪ| ಚುನಾವಣಾಧಿಕಾರಿಗೆ ದೂರು ನೀಡಿದ ಡಿಕೆಶಿ; ದಾಖಲೆ, ಘೋಷಣಾ ಪತ್ರ ಸಲ್ಲಿಸಲು ಆಯೋಗ ಸೂಚನೆ
ಶುಕ್ರವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ದ ಹಲವಾರು ಆರೋಪ ಮಾಡಿ, ಐದು ಪ್ರಶ್ನೆಗಳನ್ನು ಕೇಳಿದ್ದರು.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಹದೇವಪುರ ಕ್ಷೇತ್ರದಲ್ಲಿ ʼಮತ ಕಳವುʼ ಪ್ರಕರಣ ನಡೆದಿದೆ ಎಂದು ಆರೋಪಿಸಿ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಶುಕ್ರವಾರ ಬೆಂಗಳೂರು ಪ್ರತಿಭಟನಾ ಸಭೆ ಮಾಡಿದ ಬಳಿಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಶುಕ್ರವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ದ ಹಲವಾರು ಆರೋಪ ಮಾಡಿ, ಐದು ಪ್ರಶ್ನೆಗಳನ್ನು ಕೇಳಿದ್ದರು. ಪ್ರತಿಭಟನೆ ನಂತರ ಚುನಾವಣಾ ಕಚೇರಿಗೆ ತೆರಳಿ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದರು.
ಈ ನಡುವೆ ಮತಕಳವು ಆರೋಪ ಮಾಡಿದ ರಾಹುಲ್ ಗಾಂಧಿ ಅವರು ದೂರು ನೀಡುವ ವೇಳೆ ತಮ್ಮ ಆರೋಪಗಳಿಗೆ ದಾಖಲೆಗಳನ್ನು ನೀಡುವುದಾಗಿ ಮತ್ತು ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಬದ್ಧತೆ ಬಗ್ಗೆ ಘೋಷಣಾ ಪತ್ರ ನೀಡಬೇಕೆಂದು ಆಯೋಗ ಸೂಚಿಸಿತ್ತು. ಆದರೆ, ಕೊನೆ ಘಳಿಗೆಯಲ್ಲಿ ರಾಹುಲ್ ಗಾಂಧಿ ಘೋಷಣಾ ಪತ್ರದೊಂದಿಗೆ ದೂರು ನೀಡುವ ಬಗ್ಗೆ ನಿಲುವು ಬದಲಾಯಿಸಿ ಚುನಾವಣಾ ಆಯೋಗದ ಕಚೇರಿಗೆ ತೆರಳದೆ ದೆಹಲಿಗೆ ವಾಪಸಾಗಿದ್ದರು.
ಬಳಿಕ ಸಂಜೆ ಹೊತ್ತಿಗೆ ಕಾಂಗ್ರೆಸ್ ಮುಖಂಡರೊಂದಿಗೆ ಚುನಾವಣಾ ಆಯೋಗದ ಕಚೇರಿಗೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್ ಮುಖ್ಯ ಚುನಾವಣಾಧಿಕಾರಿಗೆ ಕೇವಲ ದೂರು ಸಲ್ಲಿಸಿದ್ದು ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ. ಆದರೆ ಚುನಾವಣಾ ಆಯೋಗ, ಘೋಷಣಾ ಪತ್ರ ನೀಡಲು ಸೂಚನೆ ನೀಡಿದೆ.
ದಾಖಲೆ ಸಲ್ಲಿಸಲು ಆಯೋಗ ಸೂಚನೆ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತ ಕಳ್ಳತನ ನಡೆದಿದೆ ಎಂದು ದೂರು ನೀಡಲಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ದೂರಿನ ಮೇರೆಗೆ ಕ್ರಮ ಕೈಗೊಳ್ಳಲು 1960 ರ ಮತದಾರ ನೊಂದಣಿ ನಿಯಮಗಳ 20(3)(ಬಿ) ಪ್ರಕಾರ ತಮ್ಮ ಸ್ವಯಂ ಘೋಷಣೆಯೊಂದಿಗೆ ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ್‌ಗೆ ಮುಖ್ಯ ಚುನಾವಣಾಧಿಕಾರಿ ಪತ್ರ ಬರೆದಿದ್ದಾರೆ.