
Caste Census: ಜಾತಿಗಣತಿ ವರದಿ ಕೈಬಿಡದಿದ್ದರೆ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಉಗ್ರ ಹೋರಾಟ: ಒಕ್ಕಲಿಗರ ಎಚ್ಚರಿಕೆ
ಸಂಶಯಾಸ್ವದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ (ಜಾತಿ ಗಣತಿ) ಸಿದ್ದಪಡಿಸಿರುವುದನ್ನು ಕೈಬಿಟ್ಟು ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ ನಡೆಸಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ಸಂಶಯಾಸ್ವದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ (ಜಾತಿ ಗಣತಿ) ಸಿದ್ದಪಡಿಸಿರುವುದನ್ನು ಕೈಬಿಟ್ಟು ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ ನಡೆಸಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಮತ್ತು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ಇಲ್ಲವಾದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಸಮುದಾಯದ ಪ್ರಮುಖರ ಜೊತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಜಿ.ಎನ್. ಶ್ರೀಕಂಠಯ್ಯ, ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ, ಈಗ ಬಿಡುಗಡೆ ಮಾಡಿರುವ ಸಮೀಕ್ಷೆ ವರದಿಯು ಸಮಾಜದ ನಾಗರೀಕರ ವಿಶ್ವಾಸ ಕಳೆದುಕೊಂಡಿದೆ. ಸಮೀಕ್ಷೆ ಕೈಗೊಳ್ಳುವಾಗ ರಾಜ್ಯದ ಎಲ್ಲಾ ನಾಗರೀಕರ ಮಾಹಿತಿಯನ್ನು ಸಂಗ್ರಹಿಸಿಲ್ಲ. ಸಕಾಲದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಫಲವಾಗಿದೆ ಎಂದರು.
2014-2015 ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 90 ರಷ್ಟು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು. ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಕೈಗೊಂಡಿಲ್ಲ. ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯ ಏರಿಕೆ ಕಂಡಿದೆ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈ ಅಂಶಗಳನ್ನು ಸಮೀಕ್ಷೆ ಒಳಗೊಂಡಿಲ್ಲ ಎಂದು ಹೇಳಿದರು.
ದತ್ತಾಂಶಗಳೇ ಸರಿಯಿಲ್ಲ
ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗೆ ದೂರವಿದ್ದು ಅಪ್ರಸ್ತುತವಾಗಿವೆ. ನಿಖರತೆ ಕಾಪಾಡಲು ಸಮೀಕ್ಷೆ ವೇಳೆ ಆಧಾರ್ ಲಿಂಕ್ ಮಾಡಿಲ್ಲ. ಸಚಿವ ಸಂಪುಟದಲ್ಲಿ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ರ ಮುಚ್ಚಿದ ಲಕೋಟೆಯನ್ನು ತೆರದಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಸಮೀಕ್ಷೆಯಲ್ಲಿ ಶೇಕಡ 15% ರಿಂದ 16% ರಷ್ಟು ಇರುವ ಒಕ್ಕಲಿಗ ಜನಸಂಖ್ಯೆಯನ್ನು ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಶೇಕಡ 10.3% ಎಂದು ನಮೂದಿಸಲಾಗಿದೆ. ವರದಿಗೆ ಪ್ರತಿಯೊಬ್ಬರ ಸಹಿಯನ್ನು ಪಡೆದಿದ್ದರೆ ಈ ರೀತಿ ತಪ್ಪುಗಳು ಆಗುತ್ತಿರಲಿಲ್ಲ. ಅವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಿರುವುದರಿಂದ ಒಕ್ಕಲಿಗ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದಾಹರಣೆ ಗಂಗಾಡ್ಕರ್ ಒಕ್ಕಲಿಗ ಜನಸಂಖ್ಯೆಯನ್ನು ಕೇವಲ 82,589 ಎಂದು, ಮರಸು ಒಕ್ಕಲಿಗರ ಜನಸಂಖ್ಯೆಯನ್ನು 3,859 ಎಂದು ನಮೂದಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಕೈಗೊಳ್ಳುವ ವೇಳೆಯಲ್ಲಿ ವ್ಯವಸ್ಥಿತವಾಗಿ ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರನ್ನು ಉದ್ದೇಶಪೂರ್ವಕವಾಗಿ ಸೇರಿಸಿಲ್ಲವಾದ್ದರಿಂದ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯುತ ಜನಾಂಗಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಸಮೀಕ್ಷೆಯಲ್ಲಿ ಜನಾಂಗದವರಿಗೆ ಅನುಮಾನ ಮೂಡಿಸಿದೆ ಎಂದರು.
2015ರ ಜಾತಿ ಜನಗಣತಿಯ ಪ್ರಕಾರ ಹಿಂದಿನ ಮೀಸಲಾತಿಗಳ ಅನ್ವಯ ಪ್ರವರ್ಗ- 1 ಮತ್ತು 2ಎ ಗಳ ಒಟ್ಟು ಜನಸಂಖ್ಯೆ 162 ಲಕ್ಷಗಳು ಪ್ರವರ್ಗ-1 ಮತ್ತು 2ಎ ಗಳನ್ನು ಹೊಸ ಮೀಸಲಾತಿಯ ಪ್ರಕಾರ ಪ್ರವರ್ಗ-1 ಎ, 1ಬಿ ಮತ್ತು 2ಎ ಗಳಾಗಿ ವಿಂಗಡಿಸಲಾಗಿದ್ದು ಪ್ರವರ್ಗ 1 ಮತ್ತು 2ಎ ನಲ್ಲಿದ್ದ 15.75 ಲಕ್ಷ ಮುಸ್ಲಿಂ ಉಪ ಜಾತಿಗಳ ಜನಾಂಗವನ್ನು ಪ್ರವರ್ಗ- 2 ಬಿ ಗೆ ವರ್ಗಾಯಿಸಲಾಗಿದೆ. ಅದೇ ರೀತಿ 28.4 ಲಕ್ಷ ಲಿಂಗಾಯತ ಉಪ ಪಂಗಡಗಳ ಜನಾಂಗವನ್ನು ಪ್ರವರ್ಗ-3 ಬಿ ಗೆ ವರ್ಗಾಯಿಸಲಾಗಿರುತ್ತದೆ ಆದ್ದರಿಂದ ಪ್ರವರ್ಗ-1ಎ , 1ಬಿ, 2ಎ ಒಟ್ಟು ಜನಸಂಖ್ಯ 118 ಲಕ್ಷಗಳಿಗೆ ಕಡಿಮೆಯಾಗುವ ಬದಲು 186 ಲಕ್ಷಗಳಿಗೆ ಹೆಚ್ದಾಗಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕುರುಬ ಜನಾಂಗಕ್ಕೆ, ಎಸ್ಸಿ/ಎಸ್ಟಿ ರೀತಿ ಶೇಕಡ 100ರಷ್ಟು ಮೀಸಲಾತಿ ನೀಡಿರುವುದು ಸ್ವಜನ ಪಕ್ಷಪಾತದಿಂದ ಕೂಡಿರುತ್ತದೆ. ಪ್ರವರ್ಗ-1 ಮತ್ತು ಪ್ರವರ್ಗ-2ಎ ಗುಂಪುಗಳಿಗೆ ಸುಮಾರು 30 ವರ್ಷಗಳಿಂದ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಶೇಕಡ 32% ಮೀಸಲಾತಿಯಲ್ಲಿ ಶೇಕಡ 19 ಮೀಸಲಾತಿ ನೀಡಲಾಗಿತ್ತು ಈ ಜನಾಂಗಗಳು 30 ವರ್ಷಗಳಿಂದ ಅತಿ ಹೆಚ್ಚು ಮೀಸಲಾತಿ ಉಪಯೋಗವನ್ನು ಪಡೆದಿವೆ ಎಂದು ಹೇಳಿದರು.
ಈ ಎರಡು ಪ್ರವರ್ಗಗಗಳನ್ನು ಹೊಸ ಮೀಸಲಾತಿಯಲ್ಲಿ ಪ್ರವರ್ಗ-1ಎ ಪ್ರವರ್ಗ-1ಬಿ ಪ್ರವರ್ಗ-2ಎ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಶೇಕಡ 51% ಮೀಸಲಾತಿಯಲ್ಲಿ ಶೇಕಡ 28% ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ 30 ವರ್ಷಗಳಿಂದ ಒಕ್ಕಲಿಗ ಜನಾಂಗಕ್ಕೆ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಶೇಕಡ 4% ಮೀಸಲಾತಿ ನೀಡಲಾಗಿತ್ತು ಈಗಲೂ ಕೂಡ ಹೊಸ ಮೀಸಲಾತಿಯಲ್ಲಿ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಮೀಸಲಾತಿ ಶೇಕಡ 7% ನೀಡಲಾಗಿದೆ. ಅಲ್ಲದೇ ಶೇಕಡ 50 ಕಿಂತ ಹೆಚ್ಚು ಮೀಸಲಾತಿ ನೀಡಿರುವುದು ರಾಜಕೀಯದುರುದ್ದೇಶದಿಂದಕೂಡಿದೆ. ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಿರುವುದರಿಂದ, 16% ಒಕ್ಕಲಿಗ ಜನಾಂಗಕ್ಕೆ ಶೇಕಡ 12% ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.