ಮುನಿರತ್ನ ಜಾತಿ ನಿಂದನೆ ಪ್ರಕರಣ:  ಕಠಿಣ ಕ್ರಮಕ್ಕೆ ಒಕ್ಕಲಿಗ  ಶಾಸಕರ ಆಗ್ರಹ
x

ಮುನಿರತ್ನ ಜಾತಿ ನಿಂದನೆ ಪ್ರಕರಣ: ಕಠಿಣ ಕ್ರಮಕ್ಕೆ ಒಕ್ಕಲಿಗ ಶಾಸಕರ ಆಗ್ರಹ


ದಲಿತರ ಮತ್ತು ಒಕ್ಕಲಿಗ ಮಹಿಳೆಯರ ವಿರುದ್ಧ ಅಸಹ್ಯ ರೀತಿಯಲ್ಲಿ ಮಾತನಾಡಿ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದರೆನ್ನಲಾದ ಆಡಿಯೋ ಸೋರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ,ಬಿಜೆಪಿ ಮುಖಂಡ ಮುನಿರತ್ನ ನಾಯ್ಡು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿಯಾದ ಒಕ್ಕಲಿಗ ಸಮೂದಾಯದ ಶಾಸಕರು ಅವರು ಒಕ್ಕಲಿಗ ಸಮುದಾಯ ಹಾಗೂ ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ನಿಂದನೆ ಮಾಡಿರುವ ಮುನಿರತ್ನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಿದ್ದಾರೆ.

ಈ ನಡುವೆ ದಲಿತ ಮುಖಂಡರೂ ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಪಿಸಿಸಿ ಎಸ್.ಸಿ ವಿಭಾಗದ ಅಧ್ಯಕ್ಷರಾದ ಎನ್.ಧರ್ಮಸೇನ್ ಮಾತನಾಡಿ, ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ಮನೆಯೊಳಗೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಇಂತಹವರು ನಮ್ಮ ಸಮಾಜಕ್ಕೆ ಬೇಕಿಲ್ಲ. ಇವರನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.

"ರಜೆ ದಿನವೇ ನನ್ನನ್ನು ಬಂಧಿಸಿದ್ದಾರೆ ಎಂದು ಮುನಿರತ್ನ ಅವರು ಹೇಳಿದ್ದಾರೆ. ಅವರು ದಲಿತರನ್ನು ನಿಂದಿಸುವಾಗ ದಿನ, ಗಳಿಗೆ ನೋಡಿದ್ದರಾ? ನೀವು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಕಾಂಗ್ರೆಸ್ ಪಕ್ಷದ ಮೇಲೆ ದೂರಿದರೆ ಏನು ಪ್ರಯೋಜನ? ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ ಅವರನ್ನು ಈ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಎಸ್.ಸಿ ವಿಭಾಗದಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಶಾಸಕರ ವಿರುದ್ಧ ದೂರು ದಾಖಲಿಸುತ್ತೇವೆ. ಕಾಂಗ್ರೆಸ್ ಪಕ್ಷ ದಲಿತರ ಪರ ನಿಲ್ಲಲಿದೆ. ದಲಿತರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಮಾತನಾಡಿ, ಜನಪ್ರತಿನಿಧಿಯೊಬ್ಬ ಹೀಗೆ ಮಾತನಾಡುತ್ತಾನೆ ಎನ್ನುವುದು ಅಸಹ್ಯದ ಪರಮಾವಧಿ. ಹೊರ ರಾಜ್ಯದಿಂದ ಬಂದ ಈತ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲೇ ಮುಳುಗಿರುವ ವ್ಯಕ್ತಿ. ಮುನಿರತ್ನನ ಸಂಪೂರ್ಣ ಆಡಿಯೋ ಅಸಹ್ಯಕರವಾಗಿದೇ. ಈತ ಗುತ್ತಿಗೆದಾರನ ಮನೆಯ ತಾಯಿ, ಹೆಂಡತಿಯರ ವಿರುದ್ಧ ಮಾತನಾಡಿರುವ ಮಾತುಗಳು ಕೇಳಲು ಅಸಾಧ್ಯ. ಯಾವುದೇ ಕಾರಣಕ್ಕೂ ಈತ ಕ್ಷಮೆಗೆ ಅರ್ಹನಲ್ಲದ ವ್ಯಕ್ತಿ. ತಳ ಸಮುದಾಯದ ಯಾರೂ ಸಹ ಈತನನ್ನು ಕ್ಷಮಿಸಲು ಸಾಧ್ಯವಿಲ್ಲ. ಮುಂದಕ್ಕೆ ಈತ ಕ್ಷಮೆ ಕೇಳಿಕೊಂಡು ಬರಬಹುದು ಆದರೆ ಸಮುದಾಯಕ್ಕೆ ಹಾಗೂ ಮಹಿಳೆಯರಿಗೆ ಆಗಿರುವ ಅಪಮಾನ ಸಹಿಸಲು ಅಸಾಧ್ಯ. ಈತನ ರಕ್ಷಣೆಗೆ ಬರುವ ವ್ಯಕ್ತಿಗಳನ್ನು ಸಮುದಾಯ ಸಾರ್ವಜನಿಕ ಜೀವನದಲ್ಲಿ ಇರಲು ಬಿಡುವುದಿಲ್ಲ ಎಂದಿದ್ದಾರೆ.

Read More
Next Story