Violation of High Court order | Sharan Pumpwell of Vishwa Hindu Parishad fined two lakhs
x

ಹೈಕೋರ್ಟ್‌ ಹಾಗೂ ವಿಶ್ವ ಹಿಂದೂ ಪರಿಷತ್‌ನ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌

‌ಆದೇಶ ಉಲ್ಲಂಘಿಸಿ ಭಾಷಣ; ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ಗೆ ಎರಡು ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸೆ.13ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಿಸಿ ಶರಣ್ ಪಂಪ್​​ವೆಲ್​​ ಹೈಕೋರ್ಟ್ ಮೊರೆ ಹೋಗಿದ್ದರು.


Click the Play button to hear this message in audio format

ಆದೇಶ ಉಲ್ಲಂಘಿಸಿ ಭಾಷಣ ಮಾಡಿದ ಆರೋಪದ ಮೇರೆಗೆ ವಿಶ್ವ ಹಿಂದೂ ಪರಿಷತ್‌ ಸಹ ಕಾರ್ಯದರ್ಶಿಯಾದ ಮಂಗಳೂರಿನ ಶರಣ್‌ ಪಂಪ್‌ವೆಲ್‌ಗೆ ಹೈಕೋರ್ಟ್‌ ಎರಡು ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್‌ ಕ್ಷೇಮಾಭಿವೃದ್ಧಿ ನಿಧಿಗೆ ತಲಾ ಒಂದು ಲಕ್ಷ ರೂ. ಪಾವತಿಸುವಂತೆ ಆದೇಶಿಸಿದೆ.

ಏನಿದು ಪ್ರಕರಣ ?

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಸೆ.13ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತವು ಶರಣ್ ಪಂಪ್​​ವೆಲ್​​ಗೆ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧ ಪ್ರಶ್ನಿಸಿ ಶರಣ್ ಪಂಪ್​​ವೆಲ್​​ ಹೈಕೋರ್ಟ್ ಮೊರೆ ಹೋಗಿದ್ದರು. ಕೆಲ ಷರತ್ತು ವಿಧಿಸಿ ಜಿಲ್ಲಾಡಳಿತದ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿತ್ತು.

ಆದೇಶ ಉಲ್ಲಂಘಿಸಿದ್ದ ಪಂಪ್‌ವೆಲ್‌

ಸೆಪ್ಟೆಂಬರ್​ 13 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಬೆಳಿಗ್ಗೆ 10.30ರಿಂದ 12.30ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಶರಣ್ ಪಂಪ್​​ವೆಲ್​​ ಆ ದಿನ 12.30ರ ಬದಲು 12.45ರವರೆಗೆ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಅವಧಿ ಮೀರಿದರೂ ಭಾಷಣ ಮಾಡಿದ್ದರು. ಈ ಬಗ್ಗೆ ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಹೀಗಾಗಿ ಆದೇಶ ಉಲ್ಲಂಘಿಸಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿ ಆದೇಶಿಸಿದೆ.

ಜಿಲ್ಲಾಡಳಿತದ ವಿರುದ್ದ ಹೋರಾಟ

ಜಿಲ್ಲಾಡಳಿತದ ನಿರ್ಬಂಧದ ವಿರುದ್ಧ ಬಿಜೆಪಿ ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಹೋರಾಟ ಮಾಡಿದ್ದರು. ಶೋಭಾಯಾತ್ರೆಗೆ ತಂದಿದ್ದ ಡಿಜೆ ವಾಹನದ ಡೀಸೆಲ್‌ ಟ್ಯಾಂಕ್​​ಗೆ ಪೊಲೀಸರು ನೀರು ಹಾಕಿದ್ದು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಂತಿಮವಾಗಿ ಪೊಲೀಸರು 6 ಡಿಜೆ ಬಳಕೆಗೆ ಅನುಮತಿ ನೀಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಶರಣ್ ಪಂಪ್​​ವೆಲ್ ಹೈಕೋರ್ಟ್ ಮೊರೆ ಹೋಗಿ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಬರಲು ಅನುಮತಿ ಪಡೆದಿದ್ದೇನೆ. ರಾಜ್ಯ ಸರ್ಕಾರ ಏಕೆ ಹಿಂದೂಗಳ ಧಾರ್ಮಿಕ ಆಚರಣೆ, ಹಬ್ಬಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ ಎಂದಿದ್ದರು.

ಶರಣ್‌ ಪಂಪ್‌ವೆಲ್‌ ವಿರುದ್ಧದ ಪ್ರಕರಣಗಳು

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ವಿರುದ್ದ ಕೋಮುದ್ವೇಷ, ಪ್ರಚೋದನಕಾರಿ ಹೇಳಿಕೆ ಹಾಗೂ ಗುಂಪು ಘರ್ಷಣೆಗೆ ಕಾರಣವಾದ ಆರೋಪ ಸೇರಿದಂತೆ ಇದುವರೆಗೂ 22ಪ್ರಕರಣಗಳು ದಾಖಲಾಗಿವೆ. ಆದ್ದರಿಂದಲೇ ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಲಾಗಿತ್ತು.

Read More
Next Story