ಯೋಗೀಶ್ ಗೌಡ ಕೊಲೆ ಪ್ರಕರಣ| ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ನಿಂದ ನಿರಾಸೆ
x

ವಿನಯ್ ಕುಲಕರ್ಣಿ

ಯೋಗೀಶ್ ಗೌಡ ಕೊಲೆ ಪ್ರಕರಣ| ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ನಿಂದ ನಿರಾಸೆ

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.


Click the Play button to hear this message in audio format

ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಈ ಹಿಂದೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿತ್ತು. ಈಗ ಹೈಕೋರ್ಟ್ ಕೂಡ "ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿರುವುದರಿಂದ, ನಾವು ಈ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ನೀವು ಪುನಃ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದೇ ಸೂಕ್ತ" ಎಂದು ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು, "ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಕೇವಲ ಸರ್ಕಾರಿ ಸಾಕ್ಷಿಗಳ ವಿಚಾರಣೆ ಮಾತ್ರ ಬಾಕಿ ಇದೆ. ಪರಿಸ್ಥಿತಿಯಲ್ಲಿ ಬದಲಾವಣೆಯಾಗಿರುವುದರಿಂದ ಜಾಮೀನು ನೀಡಬೇಕು" ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, "ಜಾಮೀನು ಅರ್ಜಿಯು ಅರ್ಹತೆಯ ಆಧಾರದ ಮೇಲೆ ತಿರಸ್ಕೃತಗೊಂಡಿದ್ದರೆ ಸಂದರ್ಭಗಳ ಬದಲಾವಣೆಯನ್ನು ಪರಿಗಣಿಸಬಹುದಿತ್ತು. ಆದರೆ ಇಲ್ಲಿ ಜಾಮೀನು ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಸುಪ್ರೀಂ ಕೋರ್ಟ್ ಮಾತ್ರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಲ್ಲದು" ಎಂದು ಹೇಳಿದೆ.

ವಿನಯ್‌ ಕುಲಕರ್ಣಿಯಿಂದ ಪ್ರಾಣ ಬೆದರಿಕೆ

ಶಾಸಕ ವಿನಯ್‌ ಕುಲಕರ್ಣಿ ವಿರುದ್ಧ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದ ಮಹಿಳೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಿಬಿಐ ಪರ ವಕೀಲ ಮಿತ್ತಳಿಕೆ ಗಂಗಾಧರ ಶೆಟ್ಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗಮನಕ್ಕೆ ತಂದಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ವಿನಯ್‌ ಕುಲಕರ್ಣಿ ವಿರುದ್ಧ ಪ್ರಾಣ ಬೆದರಿಕೆಯ ಮೆಮೋ ಹಾಕಲಾಗಿತ್ತು.

ಪ್ರಕರಣದ ಹಿನ್ನೆಲೆ

2016 ರ ಜೂನ್ 15 ರಂದು ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಯೋಗೀಶಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್‌ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ತನಿಖೆಯಲ್ಲಿ ವಿನಯ್‌ ಕುಲಕರ್ಣಿ ಕೈವಾಡ ಇರುವ ಆರೋಪದ ಶಂಕೆಯ ಮೇಲೆ 2020 ನವೆಂಬರ್ 5 ರಂದು ಸಿಬಿಐ ಬಂಧಿಸಿತ್ತು. ಬಳಿಕ 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ವಿನಯ್‌ ಕುಲಕರ್ಣಿ ಅವರ ಮೇಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ ಹೊರಿಸಲಾಗಿತ್ತು. ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ವಿನಯ್‌ ಕುಲಕರ್ಣಿ ಜಾಮೀನು ರದ್ದುಗೊಳಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಸಾಕ್ಷಿಗಳನ್ನು ಬೆದರಿಸಿದ ಆರೋಪ ಸಾಬೀತಾದ ಕಾರಣ 2025ರ ಜೂನ್‌ನಲ್ಲಿ ಮತ್ತೆ ಜೈಲು ಪಾಲಾಗಿದ್ದರು. ಸದ್ಯ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Read More
Next Story