ನಕ್ಸಲ್ ನಾಯಕ ವಿಕ್ರಂ ಗೌಡ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಅವಘಡ
ಕೂಡ್ಲು ಪರಿಸರದಲ್ಲಿ ವಿಕ್ರಂ ಗೌಡನಿಗೆ ಸೇರಿದ ಒಂದು ಎಕರೆ ಭೂಮಿ ಇದೆ. ಆತನ ಸ್ವಂತ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ತೀರ್ಮಾನ ಮಾಡಿದ್ದಾರೆ.
ನಕ್ಸಲ್ ನಿಗ್ರಹ ತಂಡದ ಗುಂಡಿಗೆ ಬಲಿಯಾದ ನಕ್ಸಲ್ ಮುಂಖಡನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಅವಘಡಕ್ಕೀಡಾಗಿದೆ.
ನಕ್ಸಲ್ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ (ಎಎನ್‌ಎಫ್) ಪೊಲೀಸರು ಗುಂಡಿಕ್ಕಿ ಕೊಂದ ಬಳಿಕ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಬಳಿಕ ಆತನ ದೇಹವನ್ನು ಕುಟುಂಬಸ್ಮರಿಗೆ ಇಂದು ಹಸ್ತಾಂತರಿಸಲಾಯಿತು. ಈ ವೇಳೆ ದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 169 Aಯಲ್ಲಿ ಆಂಬುಲೆನ್ಸ್ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಹೀಗಾಗಿ ಆತನ ದೇಹವನ್ನು ಬೇರೆ ವಾಹನದಲ್ಲಿ ತೆಗೆದುಕೊಂಡು ಹೆಬ್ರಿಕೋಡು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ.
ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಮಂಗಳವಾರ ಮಧ್ಯರಾತ್ರಿ ಆರಂಭವಾದ ಮರಣೋತ್ತರ ಪರೀಕ್ಷೆ, ಮುಂಜಾನೆ ಐದು ಗಂಟೆವರೆಗೆ ನಡೆದಿದೆ. ಮೃತದೇಹ ಸ್ವೀಕರಿಸಲು ವಿಕ್ರಂ ಗೌಡ ಸಹೋದರ ಸುರೇಶ್ ಗೌಡ, ತಂಗಿ ಸುಗುಣ ಹಾಗೂ ಕೆಲ ಕುಟುಂಬಸ್ಥರು ಮಣಿಪಾಲದ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ಬಂದಿದ್ದಾರೆ.
ಕೂಡ್ಲುವಿನಲ್ಲಿ ವಿಕ್ರಂ ಅಂತ್ಯಸಂಸ್ಕಾರಕ್ಕೆ ಸಿದ್ದತೆ
ಉಡುಪಿಯ ಕೂಡ್ಲು ಮನೆಯಲ್ಲಿ ವಿಕ್ರಂ ಗೌಡ ಅಂತ್ಯಸಂಸ್ಕಾರ ನಡೆಯಲಿದೆ. ಹೆಬ್ರಿ ತಾಲೂಕಿನ ಕೂಡ್ಲು ವಿಕ್ರಂ ಗೌಡ ಮೂಲಮನೆಯಾಗಿದ್ದು ಸದ್ಯ ಮೂಲ ಮನೆಯಲ್ಲಿ ಯಾರು ವಾಸವಿಲ್ಲ. ಮನೆಯನ್ನು ಕೆಡವಿ ಹೊಸಮನೆ ನಿರ್ಮಾಣವಾಗುತ್ತಿದೆ. ಮನೆ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಕೂಡ್ಲು ಪರಿಸರದಲ್ಲಿ ವಿಕ್ರಂ ಗೌಡನಿಗೆಸೇರಿದ ಒಂದು ಎಕರೆ ಭೂಮಿ ಇದೆ. ಸ್ವಂತ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ತೀರ್ಮಾನ ಮಾಡಲಾಗಿದೆ. ಅಣ್ಣ ಸುರೇಶ ಗೌಡ ಹಾಗೂ ತಂಗಿ ಸುಗುಣ ಈ ತೀರ್ಮಾನ ಕೈಗೊಂಡಿದ್ದಾರೆ. "ನನ್ನ ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ. ಅಣ್ಣನಿಗೆ ಸೇರಿದ ಭೂಮಿ ಇದೆ. ಆ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ," ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಸಮೀಪದ ಪೀತಂಬೈಲು ಎಂಬಲ್ಲಿ ಸೋಮವಾರ ನಡೆದ ಎಎನ್‌ಎಫ್‌ನ ಆಂತರಿಕ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ ಗುಂಡಿಗೆ ಬಲಿಯಾಗಿ ಮೃತಪಟ್ಟಿದ್ದಾನೆ.
ಪೀತಂಬೈಲಿನ ತುತ್ತ ತುದಿಯಲ್ಲಿ ಮೂರು ಮನೆಗಳಿದ್ದು, ನಾರಾಯಣಗೌಡ, ಜಯಂತ್ ಗೌಡ ಮತ್ತು ಸುಧಾಕರ ಗೌಡ ಎಂಬುವವರು ಈ ಮನೆಗಳಲ್ಲಿ ವಾಸವಿದ್ದಾರೆ. ನವೆಂಬರ್ 11ರಂದು ಜಯಂತ್ ಗೌಡ ಮನೆಗೆ ಬಂದಿದ್ದ ವಿಕ್ರಂ ಗೌಡ ರೇಷನ್ ಕೇಳಿದ್ದ. ಸೋಮವಾರ ಮತ್ತೆ ಬರುತ್ತೇವೆ, ರೇಷನ್ ತೆಗೆದಿರಿಸುವಂತೆ ಅವರಿಗೆ ಹೇಳಿದ್ದ ಎನ್ನಲಾಗಿದೆ. ಈ ಬಗ್ಗೆ ಎಎನ್‌ಎಫ್ ಪೊಲೀಸರು ಮೊದಲೇ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ವಿಕ್ರಂ ಗೌಡ ಈ ಹಿಂದೆ ಮೂರು ಬಾರಿ ಪೊಲೀಸರಿಂದ ತಪ್ಪಿಸಿಕೊಂಡು ಬಚಾವಾಗಿದ್ದ. ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂ ಗೌಡ, ನೇತ್ರಾವತಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದ. 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಕ್ರಂ ಗೌಡ ಪೊಲೀಸರಿಗೆ ಬೇಕಾಗಿದ್ದ.