
ವಿಕ್ರಂ ಗೌಡ ಎನ್‌ಕೌಂಟರ್ ಫೇಕ್ ಅಲ್ಲ, ಪ್ಲಾನ್ ಮಾಡಿರಲಿಲ್ಲ: ಡಿಜಿಪಿ ಮೊಹಂತಿ
ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ಫೇಕ್ ಅಲ್ಲ, ಈ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದ್ದಾರೆ.
ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ಫೇಕ್ ಅಲ್ಲ, ಈ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಾಬೈಲು ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಆತನ ಬಳಿ ಮಷಿನ್ ಗನ್, ಪಿಸ್ತೂಲ್, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ. ಎನ್‌ಕೌಂಟರ್ ಫೇಕ್ ಅಲ್ಲ, ಈ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ. ನಕ್ಸಲ್ ಪ್ರತಿದಾಳಿ ಸಾಧ್ಯತೆ ಬಗ್ಗೆ ಅಲರ್ಟ್ ಆಗಿದ್ದೇವೆ. ಅದನ್ನು ತಡೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ವಿಕ್ರಂ ಗೌಡ ಶರಣಾಗತಿ ಬಗ್ಗೆ ಮಾತನಾಡಿ, ಆತನ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ನಡೆದಿರಲಿಲ್ಲ. ವಿಕ್ರಂ ಗೌಡನ ಮೇಲೆ ಹಲವಾರು ಕೇಸುಗಳಿದ್ದವು. ಆತ ಮೋಸ್ಟ್ ವಾಂಟೆಡ್, ರಾಜ್ಯಮಟ್ಟದ ನಕ್ಸಲ್ ನಾಯಕನಾಗಿದ್ದ. ಮಲೆನಾಡಿನ ಭಾಗದ ಕಾಡುಗಳಲ್ಲಿ ಇನ್ನೂ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಮಲೆನಾಡು ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದ.ಕ.,ಕೇರಳ ನಡುವೆ ನಕ್ಸಲ್ ಚಟುವಟಿಕೆಗಳಿವೆ. ಕೇರಳ ಜೊತೆ ನಮ್ಮ ರಾಜ್ಯದ ಎಎನ್‌ಎಫ್ ಸಂಪರ್ಕ, ಸಂಬಂಧ ಚೆನ್ನಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ದಕ್ಷಿಣ ಕನ್ನಡ, ಕೊಡಗಿನಲ್ಲಿ ವಿಕ್ರಂ ಗೌಡನ ಚಲನವಲನಗಳು ಕಂಡು ಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದೆವು ಎಂದರು.
ನಕ್ಸಲರ ಶರಣಾಗತಿ ನಮ್ಮ ಮೂಲ ಉದ್ದೇಶವೇ ಹೊರತು ಎನ್‌ಕೌಂಟರ್ ಅಲ್ಲ. ಶರಣಾಗತಿ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್‌ಗಳಿವೆ. ಅದನ್ನು ಬಳಸಿಕೊಂಡು ನಕ್ಸಲರು ಮುಖ್ಯವಾಹಿನಿಗೆ ಬರಬಹುದಾಗಿದೆ. ನಕ್ಸಲ್ ಚಟುವಟಿಕೆ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಜನರ ರಕ್ಷಣೆಗಾಗಿಯೇ ನಾವಿದ್ದೇವೆ. ಊಹಾಪೋಹ ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರೂ ಕಿವಿಗೊಡಬಾರದು ಎಂದು ಅವರು ಕರೆ ನೀಡಿದರು.
ಸೋಮವಾರ ನಡೆದ ನಕ್ಸಲ್ ಹಾಗೂ ಎಎನ್‌ಎಫ್ (ನಕ್ಸಲ್ ನಿಗ್ರಹದಳ) ನಡುವಿನ ಮುಖಾಮುಖಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನ ಹತನಾಗಿದ್ದ. ಆತನ ಅಂತ್ಯಕ್ರಿಯೆ ಬುಧವಾರ ಹೆಬ್ರಿ ತಾಲೂಕಿನ ಕೂಡ್ಲು ಸಮೀಪದ ಮನೆ ಬಳಿ ಕುಟುಂಬಸ್ಥರ ಉಪಸ್ಥಿತಿಯಲ್ಲಿಯೇ ನಡೆದಿದೆ.