
ಬಿಜೆಪಿಯಲ್ಲಿ ತಲೆಕೆಳಗಾದ ಫೆ. 20ರ ಲೆಕ್ಕಾಚಾರ! ಮುಂದುವರಿದ ವಿಜಯೇಂದ್ರ, ಯತ್ನಾಳ್ ʼಬಣ ರಾಜಕೀಯʼ
ಫೆ. 20ರೊಳಗೆ (ಇಂದು) ಎಲ್ಲ ಅಸಮಾಧಾನಗಳು ತಣಿಯಲಿವೆ. ಹೈಕಮಾಂಡ್ ಎಲ್ಲದಕ್ಕೂ ತೆರೆ ಎಳೆಯಲಿದೆ ಎಂಬ ವಿಶ್ವಾಸದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇದ್ದರು. ಆದರೆ ಅವರ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದ ಭಿನ್ನರ ಬಣಗಳ ಲೆಕ್ಕಾಚಾರ ತಲೆಕೆಳಗಾಗಲಿವೆಯೇ?.
ಹೌದೆನ್ನುವ ಮಾಹಿತಿ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ. "ಫೆ. 20ರೊಳಗೆ ಬಿಜೆಪಿಯಲ್ಲಿನ ಎಲ್ಲ ಅಸಮಾಧಾನಗಳು ತಣಿಯಲಿವೆ. ಹೈಕಮಾಂಡ್ ಎಲ್ಲವನ್ನೂ ಸರಿ ಮಾಡಲಿದೆ," ಎಂದು ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದರು. ಉಳಿದ ನಾಯಕರೂ ಅಂಥದೇ ಹೇಳಿಕೆಗಳನ್ನು ನೀಡಿದ್ದರು.
ಅದರೆ ಅವರು ಹೇಳಿದ್ದ ಗಡುವು ಫೆ. 20 (ಗುರುವಾರ)ಕ್ಕೆ ಮುಗಿಯಲಿದೆ. ಹೈಕಮಾಂಡ್ನಿಂದ ಯಾವುದೇ ನಾಯಕರು ರಾಜ್ಯಕ್ಕೆ ಆಗಮಿಸುತ್ತಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವ ಕುರಿತು ಸ್ಪಷ್ಟವಾದ ನಿರ್ಧಾರವನ್ನೂ ಪ್ರಕಟಿಸಿಲ್ಲ. ಹೀಗಾಗಿ ಮುಂದೇನಾಗಲಿದೆ ಎಂಬ ಕುತೂಹಲ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿದೆ.
ಇದೇ ವೇಳೆ ಫೆ. 20 ರಂದು (ಇಂದು) ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮಹತ್ವದ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಇದು ಕೂಡ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಈ ಸಭೆಯ ಕುರಿತು ವಿಜಯೇಂದ್ರ ಹೈಕಮಾಂಡ್ ನಾಯಕರ ಗಮನ ಸೆಳೆಸಿದ್ದಾರೆ ಎನ್ನಲಾಗಿದೆ. ದೆಹಲಿ ವರಿಷ್ಠರೂ ಕೂಡ ಸೂಕ್ಷ್ಮವಾಗಿ ರಾಜ್ಯದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ.
ಯತ್ನಾಳ್ ಬಣದ ಮಹತ್ವದ ಸಭೆ
ಹೈಕಮಾಂಡ್ ಶೋಕಾಸ್ ನೋಟಿಸ್ಗೆ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಉತ್ತರಿಸಿದ ಬಳಿಕ ಗುರುವಾರ (ಫೆ. 20)ರಂದು ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ರೆಬೆಲ್ ನಾಯಕರ ಸಭೆ ನಡೆಯಲಿದೆ.
ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ಗೆ ಯತ್ನಾಳ್ ಅವರು ಉತ್ತರ ಕೊಟ್ಟ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಹೀಗಾಗಿ ಸಹಜವಾಗಿಯೇ ನೋಟಿಸ್ಗೆ ಯತ್ನಾಳ್ ಮಹತ್ವ ಕೊಟ್ಟಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸಭೆಯಲ್ಲಿ ಪ್ರಮುಖವಾಗಿ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಅರವಿಂದ್ ಲಿಂಬಾವಳಿ, ರಮೇಶ ಜಾರಕಿಹೊಳಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸುತ್ತಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಆಪ್ತರೂ ಭಾಗಿ?
ಕುಮಾರ್ ಬಂಗಾರಪ್ಪ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತರೂ ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಕುತೂಹಲ ಮೂಡಿಸಿದೆ. ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯುವುದಕ್ಕೆ ಬಿಜೆಪಿಯ ಹಲವು ಹಿರಿಯ ನಾಯಕರ ವಿರೋಧವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದರೆ ರೆಬೆಲ್ ನಾಯಕರ ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಭಾಗವಹಿಸುತ್ತಿಲ್ಲ. ಆದರೆ ಅವರು ವಿಜಯೇಂದ್ರ ಪರವಾಗಿಯೂ ಬೊಮ್ಮಾಯಿ ಬ್ಯಾಟಿಂಗ್ ಮಾಡಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರ ನಡೆ ಕುತೂಹಲ ಮೂಡಿಸಿದೆ.
ಹೈಕಮಾಂಡ್ ನಾಯಕರು ಬರುತ್ತಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದಂತೆ ಆಗಿದ್ದರೆ, ಗುರುವಾರದೊಳಗೆ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು. ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಬೆಂಗಳೂರಿಗೆ ಆಗಮಿಸುತ್ತಿಲ್ಲ. ಜೊತೆಗೆ ಫೆ.19 ರಂದು ವಿಜಯೇಂದ್ರ ಅವರೇ ಕೊಟ್ಟಿರುವ ಹೇಳಿಕೆಯಂತೆ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರ ನೇಮಕದ ಬಳಿಕ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 25 ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಸಂಘಟನಾತ್ಮಕ ಜಿಲ್ಲೆಗಳೂ ಸೇರಿದಂತೆ ಉಳಿದಿರುವ 12 ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳನ್ನು ನೇಮಕ ಮಾಡಬೇಕಾಗಿದೆ.
ಹೀಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾವಾಗ ಚುನಾವಣೆ ನಡೆಯಲಿದೆ? ಎಂಬುದು ಕುತೂಹಲ ಮೂಡಿಸಿದೆ. ಅಥವಾ ಎಲ್ಲರ ಸಹಮತ ಪಡೆದುಕೊಂಡು ಅಧ್ಯಕ್ಷರ ನೇಮಕ ಮಾಡಲಾಗುತ್ತದೆಯಾ? ಎಂಬ ಚರ್ಚೆ ಕೂಡ ಇದೆ.
ವಿಜಯೇಂದ್ರ ನೇತೃತ್ವದಲ್ಲಿ ಸಭೆ
ಇನ್ನು ಫೆ. 20 ಹಾಗೂ 21 (ಗುರುವಾರ ಮತ್ತು ರಂದು ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿಯೂ ಸಭೆಗಳು ಆಯೋಜನೆಗೊಂಡಿದ್ದು, ಈ ಸಭೆಗಳೂ ಕೂಡ ಮಹತ್ವ ಪಡೆದುಕೊಂಡಿವೆ. ಮಾ. 3 ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಮೊದಲು ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರ ಮಾ. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ವಿಜಯೇಂದ್ರ ಪಕ್ಷದ ಹಿರಿಯರ ಹಾಗೂ ಶಾಸಕರ ಸಭೆ ಕರೆದಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಲು ಸಭೆಗಳು ನಡೆಯುತ್ತಿರುವುದರಿಂದ ಈ ಸಭೆಗಳೂ ಮಹತ್ವ ಪಡೆದುಕೊಂಡಿವೆ. ವಿಜಯೇಂದ್ರ ನೇತೃತ್ವದ ಸಭೆಗಳಲ್ಲಿ ಯತ್ನಾಳ್ ಬಣದ ನಾಯಕರು ಭಾಗವಹಿಸುತ್ತಿಲ್ಲ.
ಬಜೆಟ್ ಅಧಿವೇಶನದ ನಂತರ ಏನಾಗಲಿದೆ?
ಬಜೆಟ್ ಅಧಿವೇಶನದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿಯೂ ಹಲವು ಮಹತ್ವದ ಬೆಳವಣಿಗೆಗಳು ಆಗಲಿವೆ ಎಂಬ ಮಾಹಿತಿಯಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಸರತ್ತು ನಡೆಯಲಿದೆ ಎಂಬ ಮಾಹಿತಿಯಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಕೇಸ್ನಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿರುವುದು ಕೂಡ ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ.
ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಕೂಡ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಅಧಿವೇಶನದ ಮೊದಲು ರಾಜ್ಯಾಧ್ಯಕ್ಷರ ಬದಲಾವಣೆ ಅಥವಾ ಮುಂದುವರೆಸುವ ತೀರ್ಮಾನವನ್ನು ಪ್ರಕಟಿಸುವುದು ಬಿಜೆಪಿ ಹೈಕಮಾಂಡ್ನಿಂದ ಆಗದ ಮಾತು ಎನ್ನಲಾಗುತ್ತಿದೆ. ಹೀಗಾಗಿ ಬಜೆಟ್ ಅಧಿವೇಶನದ ಬಳಿಕವಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತು ತೀರ್ಮಾನವಾಗಲಿದೆ ಎಂಬ ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ಬಂದಿದೆ.