
ಗ್ರೇಟರ್ ಬೆಂಗಳೂರು ಅಲ್ಲ, ವಾಟರ್ ಬೆಂಗಳೂರು: ವಿಜಯೇಂದ್ರ ಟೀಕೆ
ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ʼಲೂಟಿ ಸಾಧನೆʼಗಳ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. "ಕೊಟ್ಟಿದ್ದು ತಲುಪುತ್ತಿಲ್ಲ, ಬಚ್ಚಿಟ್ಟಿದ್ದು ಇನ್ನೂ ಪತ್ತೆಯಾಗಿಲ್ಲ," ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ʼಲೂಟಿ ಸಾಧನೆʼಗಳ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, "ಬೊಗಳೆ ಬಿಡುವ ಭರವಸೆಗಳು, ಖಜಾನೆ ಬರಿದು ಮಾಡುವ ಜಾಹೀರಾತುಗಳು. ಕೊಟ್ಟಿದ್ದು ತಲುಪುತ್ತಿಲ್ಲ, ಬಚ್ಚಿಟ್ಟಿದ್ದು ಇನ್ನೂ ಪತ್ತೆಯಾಗಿಲ್ಲ, ಕೊಳ್ಳೆಯೊಡೆಯುವುದು ಕೊನೆಯಾಗುತ್ತಿಲ್ಲ. ದುಬಾರಿ ಜೀವನ -ಅಭಿವೃದ್ಧಿ ಶೂನ್ಯ ಆಡಳಿತ, ಇದುವೇ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ 2 ವರ್ಷಗಳ ಲೂಟಿ ಸಾಧನೆಗಳು," ಎಂದ ಕಟುವಾಗಿ ಹೇಳಿದ್ದಾರೆ.
" ಮಿತಿಮೀರಿದ ಭ್ರಷ್ಟಾಚಾರ, ನಿರಂತರ ಬೆಲೆ ಏರಿಕೆ, ಏರುತ್ತಿರುವ ರೈತರ ಆತ್ಮಹತ್ಯೆಗಳು, ಸರಣೀ ಬಾಣಂತಿಯರ ಸಾವುಗಳು, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ನಿರಂತರ ಬೆದರಿಕೆಯಲ್ಲಿರುವ ಹಿಂದೂಗಳ ಜೀವನ, ಮೂಲಸೌಕರ್ಯಭಿವೃದ್ಧಿ ಮೂಲೆಗುಂಪು, ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಬೆಂಬಲ, ನಿರುದ್ಯೋಗದ ತಾಂಡವ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಮತ್ತು ಆಶ್ವಾಸನೆಗಳು ಸಂಪೂರ್ಣ ವಿಫಲ, ಸ್ಥಗಿತಗೊಂಡ ಅಭಿವೃದ್ಧಿ, ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ಮತ್ತು ಇತರ ರೈತ ಕಲ್ಯಾಣ ಯೋಜನೆಗಳ ರದ್ದು," ಎಂದು ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರ ʼಸಾಧನೆʼಗಳನ್ನು ಪಟ್ಟಿಮಾಡಿದ್ದಾರೆ. " ವಾರಂಟಿಯಿಲ್ಲದ ಗ್ಯಾರಂಟಿಗಳು ಹಾಗೂ 2.5 ಲಕ್ಷ ಕೋಟಿ ರೂ ಸಾಲವೇ ಸಾಧನೆ. ಹೆಜ್ಜೆ ಇಡದ ಎರಡು ವರ್ಷದಲ್ಲಿ ಬೆಲೆ ಏರಿಕೆ-ಭ್ರಷ್ಟತೆಯ ಕರಾಳ ಸ್ಪರ್ಶವಾಗಿದೆ," ಎಂದೂ ಅವರು ಪಟ್ಟಿಮಾಡಿದ್ದಾರೆ.
ಮಳೆಯಿಂದುಂಟಾಗುವ ಸಮಸ್ಯೆಗಳನ್ನು ಸರ್ಕಾರ ಸರಿಯಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿರುವ ಅವರು, "ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರಾಯಿತು ಹಾಗೂ ಗ್ರೇಟರ್ ಬೆಂಗಳೂರು ವಾಟರ್ ಬೆಂಗಳೂರು," ಎಂದು ವ್ಯಂಗ್ಯವಾಡಿದ್ದಾರೆ.