ಪ್ರತಿಭಟನೆ ವೇಳೆ ಡಿಸಿಎಂ ಜೊತೆ ಹರಟೆ ನೈತಿಕ ಅಧಃಪತನ: ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ
ಸರ್ಕಾರದ ವಿರುದ್ಧ ಸದನದಲ್ಲಿ ಪ್ರತಿಪಕ್ಷ ಪ್ರತಿಭಟನೆ ನಡೆಸುತ್ತಿರುವಾಗ ಬಿ ವೈ ವಿಜಯೇಂದ್ರ ಅವರು ಡಿ ಕೆ ಶಿವಕುಮಾರ್ ಬಳಿ ಒಂದು ಬಂಡಲ್ ಕಾಗದಪತ್ರಗಳನ್ನು ಒಯ್ದು ಅವುಗಳಿಗೆ ಸಹಿ ಮಾಡಿಸಿಕೊಂಡಿದ್ದು ಮತ್ತು ಅವರೊಂದಿಗೆ ಸುಮಾರು 25 ನಿಮಿಷ ಹರಟೆ ಹೊಡೆದಿದ್ದು ನೈತಿಕ ಅಧಃಪತನವನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಆಗಾಗ ಹೇಳಿಕೆ ನೀಡುತ್ತ ಸದ್ದು ಮಾಡುತ್ತಿದ್ದ ಯತ್ನಾಳ ಅವರು, ಹೈಕಮಾಂಡ್ ನಾಯಕರ ಆದೇಶದ ಮೇರೆಗೆ ಇತ್ತೀಚೆಗೆ ಮೌನವಾಗಿದ್ದರು. ಇದೀಗ ಮತ್ತೆ ಯಡಿಯೂರಪ್ಪನವರ ಪುತ್ರ, ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ʻʻಬುಧವಾರ ಬಿಜೆಪಿ ನಾಯಕರು ಸದನದಲ್ಲಿ ಬಾವಿಗಿಳಿದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಿವೈ ವಿಜಯೇಂದ್ರ ಅವರು ಡಿಕೆ ಶಿವಕುಮಾರ್ ಅವರ ಬಳಿ ಒಂದು ಬಂಡಲ್ ಕಾಗದಪತ್ರಗಳನ್ನು ಒಯ್ದು ಅವುಗಳ ಮೇಲೆ ಸಹಿ ಮಾಡಿಸಿಕೊಂಡಿದ್ದು ಮತ್ತು ಅವರೊಂದಿಗೆ ಸುಮಾರು 25 ನಿಮಿಷಗಳ ಕಾಲ ಹರಟೆ ಹೊಡೆದಿದ್ದು ನೈತಿಕ ಅಧಃಪತನ ಬಿಂಬಿಸುತ್ತದೆ" ಎಂದು ಕಿಡಿ ಕಾರಿದ್ದಾರೆ.
ಯಡಿಯೂರಪ್ಪ ಹಗರಣವೂ ಹೊರಗೆ ಬರಲಿ
ʻʻಶಿವಕುಮಾರ್ ಅವರನ್ನು ಖುಷಿಪಡಿಸುವ ಪ್ರಯತ್ನ ವಿಜಯೇಂದ್ರ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು. ಕಾಂಗ್ರೆಸ್ ಮತ್ತು ಬಿಎಸ್ ಯಡಿಯೂರಪ್ಪ ಕುಟುಂಬದ ನಡುವೆ ಹೊಂದಾಣಿಕೆಯಾಗಿದೆ. ಹಾಗಾಗೇ ಪರಸ್ಪರ ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ. ಮುಡಾ ಹಗರಣವನ್ನು ಒಂದೋ ಸಿಬಿಐ ತನಿಖೆಗೆ ಒಪ್ಪಿಸಬೇಕು, ಇಲ್ಲವೇ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು, ಹಗರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಈ ಹಗರಣದಲ್ಲಿ ಯಾರ್ಯಾರು ತಪ್ಪು ಮಾಡಿದ್ದಾರೋ ಅವರ ಸತ್ಯವೆಲ್ಲವೂ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ, ಕುಮಾರಸ್ವಾಮಿಯವರ ಅವಧಿಯಲ್ಲಿ ತಪ್ಪಾಗಿದ್ದರೂ ಅದು ಕೂಡಾ ತಪ್ಪೇʼʼ ಎಂದು ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ.
ʻʻಯಡಿಯೂರಪ್ಪನವರ ಕಾಲದ ಹಗರಣವೂ ಹೊರಗೆ ಬರಲಿ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೂ ನಿಜಬಣ್ಣ ಗೊತ್ತಾಗಲಿ. ಪೂಜ್ಯ ಅಪ್ಪಾಜಿಯವರು, ಪೂಜ್ಯ ತಂದೆಯವರು ಎಂದು ತಿಳಿದುಕೊಳ್ಳುವವರಿಗೆ ಇವರ ಅಸಲಿ ರೂಪ ಗೊತ್ತಾಗಲಿ. ಇದು ನಡೆಯಬೇಕು, ಅವರೂ ಜೈಲಿಗೆ ಹೋಗಲಿʼʼ ಎಂದು ಸ್ವಪಕ್ಷದವರ ವಿರುದ್ದವೇ ಯತ್ನಾಳ್ ಗುಡುಗಿದ್ದಾರೆ.
ʻʻಬಿಜೆಪಿ ನಾಯಕರು ಮೈಸೂರಿಂದ ಬೆಂಗಳೂರವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಮಾತಾಡುತ್ತಿರೋದು ವೃಥಾ ಕಾಲಹರಣದ ಸರ್ಕಸ್, ಬರೀ ನಾಟಕ... ಮತ್ತೇನೂ ಅಲ್ಲ, ಇವರು, ಇವರ ಅಪ್ಪ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿ. ಯಡಿಯೂರಪ್ಪನವರ ಅವಧಿಯಲ್ಲಿ ಏನೇನು ಆಗಿದೆ ಎನ್ನುವುದು ಮೊದಲು ಗೊತ್ತಾಗಲಿ. ಪಾದಯಾತ್ರೆ ಮಾಡುವುದರಿಂದ ಆಗುವುದೇನಿದೆ? ಮೊದಲು ನಮಗೆ ನೈತಿಕತೆ ಇದೆಯಾ ಎನ್ನುವುದು ಕರ್ನಾಟಕದ ಜನತೆಗೆ ಗೊತ್ತಾಗಲಿ. ಮುಖ್ಯಮಂತ್ರಿಗಳ ಮಗನ ದಾಖಲೆಯೂ ಇದೆ. ಎಲ್ಲರೂ ಜೈಲಿಗೆ ಹೋದರೆ ಹೋಗಲಿ, ನ್ಯಾಯ ಕೊಡಿಸುವುದಕ್ಕೆ ನಾನಿದ್ದೇನೆ. ಈ ಬಗ್ಗೆ ನಾನು ಕೇಂದ್ರದ ನಾಯಕರಿಗೆ ಪತ್ರ ಬರೆಯಲಿದ್ದು ಅಕ್ರಮದಲ್ಲಿ ಬಿಜೆಪಿ ನಾಯಕರ ಪಾತ್ರ ಇರುವುದನ್ನೂ ತಿಳಿಸುತ್ತೇನೆʼʼ ಎಂದು ಯತ್ನಾಳ್ ಹೇಳಿದರು.