Let Vijayendra sleep in front of the Prime Ministers house; Minister M.B. Patil attacks the Centre,
x

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಚಿವ ಎಂ.ಬಿ. ಪಾಟೀಲ್‌

ವಿಜಯೇಂದ್ರ ಪ್ರಧಾನಿ ಮನೆ ಮುಂದೆ ಮಲಗಲಿ; ಕೇಂದ್ರದ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ

ಸಕ್ಕರೆಗೆ ಸಂಬಂಧಿಸಿದ ಎಲ್ಲಾ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಸಚಿವರು ಹೇಳಿದರು. "ಎಫ್‌ಆರ್‌ಪಿ, ಎಥೆನಾಲ್ ನೀತಿ, ಸಕ್ಕರೆ ಆಮದು-ರಫ್ತು ಮತ್ತು ಬೆಲೆ ಏರಿಕೆ ನಿಯಂತ್ರಣ ಎಲ್ಲವೂ ಕೇಂದ್ರವೇ ಮಾಡುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ತೀವ್ರಗೊಂಡಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಮಸ್ಯೆಯ ಮೂಲ ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ಬಿಜೆಪಿಯವರು ಮುಗ್ಧ ರೈತರ ದಾರಿ ತಪ್ಪಿಸುವ ನಾಟಕವಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಎಫ್‌ಆರ್‌ಪಿ ನಿಗದಿ ಮಾಡುವುದು ಕೇಂದ್ರ

ನಿನ್ನೆ ಸಿಎಂ ಕಬ್ಬು ಬೆಳೆಗಾರರ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ, ನಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಅಪಾರ ಗೌರವವಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು. "ಆದರೆ, ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಕೊಡಿಸಲು ಆಗುತ್ತಿಲ್ಲ ಎಂದು ಬಿಜೆಪಿ ಟೀಕಿಸುತ್ತಿದೆ. ಎಫ್‌ಆರ್‌ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ, ಈ ಸತ್ಯವನ್ನು ಮುಚ್ಚಿಹಾಕಿ, ಇಲ್ಲಿ ನಾಟಕವಾಡುತ್ತಿದ್ದಾರೆ" ಎಂದು ಪಾಟೀಲ್ ಹರಿಹಾಯ್ದರು.

ವಿಜಯೇಂದ್ರ, ಜೋಷಿಗೆ ಸವಾಲು

"2025ನೇ ಸಾಲಿಗೆ ಪ್ರತಿ ಟನ್‌ಗೆ 3,550 ರೂಪಾಯಿ ಎಫ್‌ಆರ್‌ಪಿಯನ್ನು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನೂ ಸೇರಿಸಿ ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಇದು 10.25% ರಿಕವರಿಗೆ ಅನ್ವಯವಾಗುತ್ತದೆ. ಈ ದರವನ್ನು ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದು ಗೊತ್ತಿದ್ದರೂ, ಬಿಜೆಪಿಯವರು ಮಾತನಾಡುತ್ತಿಲ್ಲ. ನಿಜವಾಗಿಯೂ ರೈತರ ಪರ ಕಾಳಜಿ ಇದ್ದರೆ, ವಿಜಯೇಂದ್ರ ಅವರು ಹೋಗಿ ಪ್ರಧಾನಿಗಳ ಮನೆ ಮುಂದೆ ಮಲಗಲಿ. ಪ್ರಧಾನಿಗಳ ಭೇಟಿಗೆ ಅವಕಾಶ ಕೊಡಿಸಲಿ, ನಾವು ಹೋಗಿ ಮಾತನಾಡುತ್ತೇವೆ" ಎಂದು ಸವಾಲು ಹಾಕಿದರು.

ಸಕ್ಕರೆ ನಿಯಂತ್ರಣ ಸಂಪೂರ್ಣ ಕೇಂದ್ರದ ಕೈಯಲ್ಲಿ

ಸಕ್ಕರೆಗೆ ಸಂಬಂಧಿಸಿದ ಎಲ್ಲಾ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಸಚಿವರು ಹೇಳಿದರು. "ಎಫ್‌ಆರ್‌ಪಿ, ಎಥೆನಾಲ್ ನೀತಿ, ಸಕ್ಕರೆ ಆಮದು-ರಫ್ತು ಮತ್ತು ಬೆಲೆ ಏರಿಕೆ ನಿಯಂತ್ರಣ ಎಲ್ಲವೂ ಕೇಂದ್ರವೇ ಮಾಡುವುದು. ರಾಜ್ಯ ಸರ್ಕಾರದ ಪಾತ್ರ ಕೇವಲ ಅದನ್ನು ಅನುಷ್ಠಾನ ಮಾಡುವುದು ಮಾತ್ರ," ಎಂದರು. ಇದಕ್ಕೆ ಪುಷ್ಟಿ ನೀಡುವಂತೆ, "ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವೇ ಇದೆಯಲ್ಲವೇ? ಅಲ್ಲಿನ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಕ್ಕರೆ ದರ ಏರಿಕೆ ಮತ್ತು ಎಫ್‌ಆರ್‌ಪಿ ಬದಲಾವಣೆ ಕೋರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದಾರೆ. ನೀವೇ ನೋಡಿ," ಎಂದು ಪತ್ರವನ್ನು ಪ್ರದರ್ಶಿಸಿದರು.

ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಲಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಎಂ.ಬಿ. ಪಾಟೀಲ್ ಆಗ್ರಹಿಸಿದರು. "ಇದು ಅವರದ್ದೇ ಇಲಾಖೆಗೆ ಸಂಬಂಧಿಸಿದ್ದು. ರೈತರು ಕೇಳುತ್ತಿರುವ 3,500 ರೂಪಾಯಿ ದರವು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಒಳಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಸ್ಪಷ್ಟಪಡಿಸಲಿ. ವಿಜಯೇಂದ್ರ ಮತ್ತು ಜೋಶಿ ಅವರು ದೆಹಲಿಗೆ ಹೋಗಿ ಎಫ್‌ಆರ್‌ಪಿ ಬದಲಾವಣೆ ಮಾಡಿಸಿಕೊಂಡು ಬರಲಿ, ಅದನ್ನು ಬಿಟ್ಟು ಮುಗ್ಧ ರೈತರ ದಾರಿ ತಪ್ಪಿಸುವ ಕೆಲಸ ಮಾಡಬಾರದು" ಎಂದು ಎಚ್ಚರಿಸಿದರು.

Read More
Next Story