
̈Gold Smuggling | ನಟಿ ರನ್ಯಾ ರಾವ್ ಹಿಂದಿದ್ದಾರೆ ಪ್ರಭಾವಿ ಸಚಿವರು; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?
ನಟಿ ರನ್ಯಾ ರಾವ್ ಕೆಲ ತಿಂಗಳಿಂದ 30ಕ್ಕೂ ಹೆಚ್ಚು ಬಾರಿ ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿರುವ ಮಾಹಿತಿ ಇದೆ. ಚಿನ್ನ ಕಳ್ಳಸಾಗಣೆ ಹಿಂದಿರುವ ಪ್ರಭಾವಿಗಳ ಹೆಸರು ಬಹಿರಂಗಪಡಿಸುವಂತೆ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಹಿಂದಿರುವ ಪ್ರಭಾವಿ ರಾಜಕಾರಣಿಗಳ ಮಾಹಿತಿ ಬಹಿರಂಗಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾದ ರನ್ಯಾರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಇದೇನೂ ಸಣ್ಣ ಘಟನೆಯಲ್ಲ, ರನ್ಯಾ ರಾವ್ ಕಳೆದ ಕೆಲವು ತಿಂಗಳಿಂದ 30ಕ್ಕೂ ಹೆಚ್ಚು ಬಾರಿ ದುಬೈ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿರುವ ಮಾಹಿತಿ ಇದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿದಾಗ ಪ್ರೊಟೊಕಾಲ್ ಭದ್ರತೆ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ನಟಿ ರನ್ಯಾ ರಾವ್ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು. ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಾಗ ವಿಮಾನ ನಿಲ್ದಾಣದಿಂದ ಪೊಲೀಸರೇ ಭದ್ರತೆ ನೀಡುತ್ತಿದ್ದರು. ಇದರಿಂದಲೇ ಆಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಖಾತರಿ. ಆಕೆಯ ಹಿಂದಿರುವ ಪ್ರಭಾವಿ ವ್ಯಕ್ತಿಗಳು ಯಾರೆಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರದ ಭದ್ರತೆ ಸಿಗಲಿದೆ, ತಪಾಸಣೆ ಆಗುವುದಿಲ್ಲ ಎನ್ನುವುದಾದರೆ ಇವರ ಹಿಂದೆ ಘಟಾನುಘಟಿಗಳೇ ಇದ್ದಾರೆ. ಅಲ್ಲದೇ ಕೆಲ ಸಚಿವರಿರುವ ಬಗ್ಗೆಯೂ ಡಿಆರ್‌ಐ ತನಿಖೆಯಿಂದ ತಿಳಿದು ಬಂದಿದೆ. ಹೀಗಿರುವಾಗ ಸಿಎಂ ಅವರಿಗೆ ಇದರ ಮಾಹಿತಿ ಇದ್ದೇ ಇರುತ್ತದೆ. ಕೂಡಲೇ ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಚಿನ್ನ ಕಳ್ಳಸಾಗಾಣಿಕೆ ಹಿಂದಿರುವ ಹವಾಲಾನಿರತರು, ಮಾಫಿಯಾದವರು, ಇಂತವರಿಗೆ ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಎಂಬುದು ಜನರಿಗೆ ಗೊತ್ತಾಗಬೇಕು ಎಂದಿದ್ದಾರೆ.
ಒಬ್ಬ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಮಗಳ ನೇತೃತ್ವದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನ ಕಳ್ಳಸಾಗಣೆ ನಡೆದಿದ್ದನ್ನು ನಾವೆಂದೂ ಕೇಳಿರಲಿಲ್ಲ. ಇದು ಗಂಭೀರ ಸ್ವರೂಪದ ಪ್ರಕರಣ. ರಾಜ್ಯ ಸರ್ಕಾರ ಗಾಳಿಯಲ್ಲಿ ಗುಂಡು ಹಾರಿಸದೇ ಕೂಡಲೇ ಪ್ರಭಾವಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
13 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ವೇಳೆ. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು.