
ವಂದೇ ಭಾರತ್ ರೈಲು.
ವಿಜಯವಾಡ - ಬೆಂಗಳೂರು ಇನ್ನಷ್ಟು ಹತ್ತಿರ, ಶೀಘ್ರವೇ ವಂದೇ ಭಾರತ್ ರೈಲು ಆರಂಭ
ವಿಜಯವಾಡದಿಂದ ಬೆಂಗಳೂರಿಗೆ ತಲುಪಲು 12 ಗಂಟೆ ಸಮಯ ತಗಲುತ್ತಿದ್ದು ಅರ್ಧದಿನ ಪ್ರಯಾಣದಲ್ಲಿಯೇ ಮುಗಿಯುತ್ತಿತ್ತು. ಇದೀಗ ವಂದೇ ಭಾರತ್ ಸಂಚರಿಸುವುದರಿಂದ ಬೆಂಗಳೂರಿನಿಂದ ವಿಜಯವಾಡಕ್ಕೆ ಪ್ರಯಾಣದ ಅವಧಿ ಕೇವಲ ಒಂಬತ್ತು ಗಂಟೆಗೆ ಇಳಿಯಲಿದೆ.
ಬೆಂಗಳೂರು-ವಿಜಯವಾಡ ಮಾರ್ಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಆರಂಭವಾಗಲಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಈ ಹೊಸ ರೈಲು ಎರಡೂ ರಾಜ್ಯಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಪ್ರಸ್ತುತ, ವಿಜಯವಾಡದಿಂದ ಬೆಂಗಳೂರಿಗೆ ಪ್ರಯಾಣಿಸಲು ಸುಮಾರು 12 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದು, ಇದು ಪ್ರಯಾಣಿಕರಿಗೆ ಅರ್ಧ ದಿನದ ಪ್ರಯಾಣವಾಗಿತ್ತು. ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭವಾದ ನಂತರ, ಈ ಪ್ರಯಾಣದ ಅವಧಿಯು ಕೇವಲ 9 ಗಂಟೆಗೆ ಇಳಿಯಲಿದೆ. ಆಂಧ್ರಪ್ರದೇಶದಿಂದ ಐಟಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿದಿನ ಬೆಂಗಳೂರಿಗೆ ಆಗಮಿಸುತ್ತಾರೆ. ಅದೇ ರೀತಿ, ಬೆಂಗಳೂರಿನಿಂದ ತಿರುಪತಿಗೆ ತೆರಳುವ ಭಕ್ತರ ಸಂಖ್ಯೆಯೂ ದೊಡ್ಡದಿದೆ. ಈ ಹೊಸ ರೈಲು ಈ ಎರಡೂ ವಿಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಉಳಿದ ಆರು ದಿನಗಳು ಲಭ್ಯವಿರುತ್ತದೆ. ಇದು ಪ್ರತಿದಿನ ಬೆಳಿಗ್ಗೆ 5.15ಕ್ಕೆ ವಿಜಯವಾಡದಿಂದ ಹೊರಟು ಮಧ್ಯಾಹ್ನ 2.15ಕ್ಕೆ ಬೆಂಗಳೂರನ್ನು ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 2.45ಕ್ಕೆ ಹೊರಟು ರಾತ್ರಿ 11.45ಕ್ಕೆ ವಿಜಯವಾಡ ತಲುಪುತ್ತದೆ. ಈ ರೈಲು ವಿಜಯವಾಡದಿಂದ ಹೊರಟು ತೆನಾಲಿ, ನೆಲ್ಲೂರು, ತಿರುಪತಿ ಮತ್ತು ಚಿತ್ತೂರು ಮೂಲಕ ಬೆಂಗಳೂರನ್ನು ತಲುಪುತ್ತದೆ.
ಪ್ರಸ್ತುತ, ವಿಜಯವಾಡ ಮತ್ತು ಬೆಂಗಳೂರು ನಡುವೆ ಕೇವಲ ಕೊಂಡವೀಡು ಎಕ್ಸ್‌ಪ್ರೆಸ್ ಮಾತ್ರ ಚಲಿಸುತ್ತಿದ್ದು, ಇದು ಮಚಲಿಪಟ್ನಂನಿಂದ ಯಶವಂತಪುರಕ್ಕೆ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಸಂಚರಿಸುತ್ತದೆ. ಇದರಿಂದಾಗಿ, ವಾರಾಂತ್ಯಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವವರಿಗೆ ಮತ್ತು ಇತರ ದಿನಗಳಲ್ಲಿ ಪ್ರಯಾಣಿಸುವವರಿಗೆ ಬಸ್ಸುಗಳು ಅಥವಾ ವಿಮಾನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು. ವಂದೇ ಭಾರತ್ ರೈಲಿನ ಆಗಮನದಿಂದ ಈ ಸಮಸ್ಯೆ ನಿವಾರಣೆಯಾಗಲಿದ್ದು, ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಮತ್ತು ವೇಗದ ಆಯ್ಕೆ ಲಭ್ಯವಾಗಲಿದೆ.