ಪುರಂದರದಾಸರಾದ ಡಾ. ವಿದ್ಯಾಭೂಷಣ; ‘ಹರಿದಾಸರ ದಿನಚರಿ’ ಚಿತ್ರದಲ್ಲಿ ಹೀರೋ
ಸನ್ಯಾಸತ್ವ ತೊರೆದು ಸಂಸಾರಿಯಾದ ವಿದ್ಯಾಭೂಷಣರು, ಸಂಸಾರವನ್ನು ತೊರೆದು ಬದುಕಿದ ಭಕ್ತಿಪಂಥದ ಸಾಧಕ ದಾಸಶ್ರೇಷ್ಠ ಪುರಂದರ ದಾಸರ ವಿಭಿನ್ನ ವ್ಯಕ್ತಿತ್ವದ ಕೈಗನ್ನಡಿಯಾಗಲು ಹೊರಟಿದ್ದಾರೆ. ಅದು ಬೆಳ್ಳಿ ಪರದೆ ಮೇಲೆ!
ಹರಿದಾಸ ಕೀರ್ತನೆಗಳ ಗಾಯಕ ಡಾ. ವಿದ್ಯಾಭೂಷಣ ಅವರು ನೂರಾರು ಗೀತೆಗಳಿಗೆ ಧ್ವನಿಯಾದವರು. ಆದರೆ, ಇದುವರೆಗೂ ಚಿತ್ರರಂಗದಿಂದ ದೂರವೇ ಇದ್ದರು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಗೋಪಾಲ’ ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಅವರು ಚಿತ್ರಗಳಲ್ಲಿ ನಟಿಸುವುದಾಗಲೀ, ಹಾಡಿದ್ದಾಗಲೀ ಇಲ್ಲ. ಈಗ ಮೊದಲ ಬಾರಿಗೆ ಅವರು ‘ಹರಿದಾಸರ ದಿನಚರಿ’ ಎಂಬ ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸಿದ್ದಾರೆ.
‘ಹರಿದಾಸರ ದಿನಚರಿ’ ಚಿತ್ರವು ಡಿಸೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಹರಿದಾಸರ ದಿನಚರಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಉಡುಪಿಯ ಶ್ರೀ ಕೃಷ್ಣ ಸನ್ನಿಧಿಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಡಾ. ವಿದ್ಯಾಭೂಷಣರು ಪುರಂದರದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಾ. ವಿದ್ಯಾಭೂಷಣರು ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧೀಶರಾಗಿ ಸೇವೆ ಸಲ್ಲಿಸಿದವರು. 90ರ ದಶಕದ ಕೊನೆಯಲ್ಲಿ ಅವರು ಮಠದ ಅಧಿಕಾರವನ್ನು, ಸನ್ಯಾಸತ್ವವನ್ನು ತೊರೆದು ಪ್ರೇಮ ವಿವಾಹ ಮಾಡಿಕೊಂಡು ಗೃಹಸ್ಥಾಶ್ರಮ ಸ್ವೀಕರಿಸಿದರು. ಅಂದಿನ ಕಾಲದಲ್ಲಿ ಒಂದು ರೀತಿಯ ಕ್ರಾಂತಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ ಆದರ್ಶವಾದಿ. ಬೆಂಗಳೂರಿನಲ್ಲಿ ಸದ್ಯ ತಮ್ಮ ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ಅವರು, ಅಪ್ರತಿಮ ಗಾಯಕರೆಂದು ಹೆಸರು ಮಾಡಿದವರು. ಮಠದಲ್ಲಿರುವಾಗಲೂ ದಾಸರ ಕೃತಿಗಳನ್ನು ಹಾಡಿ ದಾಸಸಾಹಿತ್ಯವನ್ನು ಜನಪ್ರಿಯಗೊಳಿಸಿದ್ದ ಅವರು, ಗೃಹಸ್ಥಾಶ್ರಮಕ್ಕೆ ಸೇರಿದ ನಂತರ, ಸಂಗೀತ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಪೂರ್ಣಪ್ರಮಾಣದಲ್ಲಿ ಮುಡಿಪಾಗಿಟ್ಟಿದ್ದಾರೆ. ಈಗಾಗಲೇ ಅವರು ಹಾಡಿರುವ ನೂರಾರು ಭಕ್ತಿಗೀತೆಗಳು ಲಭ್ಯವಿದೆ.
ಸನ್ಯಾಸತ್ವ ತೊರೆದು ಗೃಹಸ್ಥರಾದ ವಿದ್ಯಾಭೂಷಣರು, ಸಂಸಾರವನ್ನು ತೊರೆದು ಸನ್ಯಾಸತ್ವ ಪಡೆದು ಒಬ್ಬಂಟಿಯಾಗಿ ಊರೂರು ತಿರುಗುತ್ತಾ ಭಕ್ತಿಪಂಥದ ಸಾಧಕರಾದ ದಾಸ ಶ್ರೇಷ್ಠ ಪುರಂದರ ದಾಸರ ವಿಭಿನ್ನ ವ್ಯಕ್ತಿತ್ವದ ಕೈಗನ್ನಡಿಯಾಗಲು ಹೊರಟಿದ್ದಾರೆ. ಅದು ಬೆಳ್ಳಿ ಪರದೆ ಮೇಲೆ!
ಸುಮಾರು ನಾಲ್ಕು ದಶಕಗಳಿಂದ ಶಾಸ್ತ್ರೀಯ ಸಂಗೀತದಲ್ಲಿ ತೊಡಗಿಸಿಕೊಂಡಿರುವ ಡಾ. ವಿದ್ಯಾಭೂಷಣರು ದೇಶ-ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಜೊತೆಗೆ ತಮ್ಮ ಅದ್ಭುತ ಗಾಯನದಿಂದ ಸಾವಿರಾರು ಶ್ರೋತೃಗಳ ಮನಸ್ಸಿಗೆ ಹತ್ತಿರವಾಗಿದ್ದಾರೆ. ಅವರ ಸಂಗೀತ ಸೇವೆಯನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈಗ ಇದೇ ಮೊದಲ ಬಾರಿಗೆ ಅವರು ಚಲನಚಿತ್ರದಲ್ಲಿ ಪೂರ್ಣಪ್ರಮಾಣದ ನಟರಾಗಿ ಕಾಣಿಸಿಕೊಂಡಿದ್ದು, ಅದರಲ್ಲೂ ದಾಸಶ್ರೇಷ್ಠರೆನಿಸಿಕೊಂಡಿರುವ ಶ್ರೀ ಪುರಂದರದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದಾಸಶ್ರೇಷ್ಠ ಪುರಂದರದಾಸರ ಕುರಿತು ಕನ್ನಡ ಚಿತ್ರರಂಗದಲ್ಲಿ ಚಿತ್ರಗಳು ನಿರ್ಮಣವಾಗುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಕನ್ನಡದಲ್ಲಿ ಪುರಂದರದಾಸರ ಕುರಿತು ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಒಂದು ಡಾ. ರಾಜಕುಮಾರ್ ಅಭಿನಯದ ‘ನವಕೋಟಿ ನಾರಾಯಣ’. ಈ ಚಿತ್ರವು 1964ರಲ್ಲಿ ಬಿಡುಗಡೆಯಾಗಿತ್ತು. ಆ ನಂತರ ಕೆ.ಎಸ್. ಅಸ್ವತ್ಥ್ ಅವರ ಅಭಿನಯದಲ್ಲಿ ‘ಶ್ರೀ ಪುರಂದರದಾಸರು’ ಎಂಬ ಚಿತ್ರ 1967ರಲ್ಲಿ ಬಿಡುಗಡೆಯಾಗಿತ್ತು. ಈಗ ಸುಮಾರು 57 ವರ್ಷಗಳ ನಂತರ ಕನ್ನಡದಲ್ಲಿ ಪುರಂದರ ದಾಸರ ಕುರಿತು ಇನ್ನೊಂದು ಚಿತ್ರ ಬರುತ್ತಿದೆ. ಮೊದಲೆರಡು ಚಿತ್ರಗಳು ಪುರಂದರದಾಸರ ಜೀವನ ಚರಿತ್ರೆಯನ್ನು ಹೇಳಿದರೆ, ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗಿದ್ದು ಹೇಗೆಂದು ತೋರಿಸಿದರೆ, ‘ಹರಿದಾಸರ ದಿನಚರಿ’ ಚಿತ್ರವು ಪುರಂದರದಾಸರ ದೈನಂದಿನ ದಿನಚರಿಯ ಕುರಿತು ಹೇಳುತ್ತದಂತೆ.
‘ಹರಿದಾಸರ ದಿನಚರಿ’ ಚಿತ್ರದಲ್ಲಿ ಪುರಂದರದಾಸರ ಮುಂಜಾನೆಯ ಪ್ರಾರ್ಥನಾ ಕರ್ಮಗಳಿಂದ ಪ್ರಾರಂಭಿಸಿ, ರಾತ್ರಿ ಮಲಗುವ ತನಕ ಚಿತ್ರಣ ನೀಡಲಾಗುತ್ತದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ಮಾಣ ಮತ್ತು ನಿರ್ದೇಶನ ಹೊಣೆ ಹೊತ್ತವರು ಗಿರೀಶ್ ನಾಗರಾಜ. ಕರಿಗಿರಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪುರಂದರದಾಸರ ಹಲವು ಜನಪ್ರಿಯ ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ. ಡಾ. ವಿದ್ಯಾಭೂಷಣರು, ಈ ಚಿತ್ರದಲ್ಲಿ ಶ್ರೀ ಪುರಂದರದಾಸರಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಂಗೀತ ಸಂಯೋಜಿಸಿ, ಹಾಡುಗಳನ್ನುಳ ಹಾಡಿದ್ದಾರೆ.
‘ಹರಿದಾಸರ ದಿನಚರಿ’ ಚಿತ್ರದಲ್ಲಿ ಡಾ. ವಿದ್ಯಾಭೂಷಣರ ಜೊತೆಗೆ ಘನಶ್ಯಾಮ್ ಕೆ.ವಿ, ಗೋಕುಲ್ ಅಯ್ಯರ್, ವಾಸುದೇವ ಮೂರ್ತಿ ಕೆ.ಎನ್, ಚಲಪತಿ, ಪ್ರಸನ್ನ ವೆಂಕಟೇಶ ಮೂರ್ತಿ, ಪದ್ಮಕಲಾ ಡಾ. ಜಿ. ಎಲ್ ಹೆಗ್ಡೆ ಮುಂತಾದವರು ಅಭಿನಯಿಸಿದ್ದಾರೆ.