
ಸಿಎಂ ಕಚೇರಿ ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಆರೋಪಿ ಬಂಧನ
ಕೆಎಎಸ್ ಅಧಿಕಾರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದ್ದ.
ಕೆಎಎಸ್ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ಕೊಡಿಸಲು ಮುಖ್ಯಮಂತ್ರಿ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಘವೇಂದ್ರ ಬಂಧಿತ ಆರೋಪಿ.
ಕೆಎಎಸ್ ಅಧಿಕಾರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದ್ದ. ಟಿಪ್ಪಣಿ ಕುರಿತು ಅನುಮಾನಗೊಂಡ ವಿಧಾನಸೌಧದ ಸಚಿವಾಲಯದ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿದ್ದಾರೆ. ಆರೋಪಿ ರಾಘವೇಂದ್ರ ಈ ಹಿಂದೆ ಹಲವು ಶಾಸಕರ ಬಳಿ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ.
ಪೋಸ್ಟಿಂಗ್ ಕೊಡಿಸುವುದಾಗಿ ಆರೋಪಿ ರಾಘವೇಂದ್ರ ಅಧಿಕಾರಿಯ ಬಳಿ ಹಣ ಪಡೆದು ವಂಚಿಸಿದ್ದ. ಅಲ್ಲದೆ ರಾಜಕಾರಣಿಗಳ ಬಳಿ ಕೆಲಸ ಮಾಡಿಸಿಕೊಳ್ಳಲು ಬರುತ್ತಿದ್ದವರಿಗೂ ವಂಚಿಸಿದ್ದ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.