ಪೊಲೀಸ್ ಸೋಗಿನಲ್ಲಿ ವಿಡಿಯೋ ಕಾಲ್‌ | ಟೆಕ್ಕಿಗೆ 2.24 ಕೋಟಿ ಪಂಗನಾಮ
x
ಸೈಬರ್​ ಕ್ರೈಂ ಬೆಂಗಳೂರಿನ ಟೆಕ್ಕಿಯೊಬ್ಬರು ಬಲಿಯಾಗಿ ಬರೋಬ್ಬರಿ 2.24 ಕೋಟಿ ಕಳೆದುಕೊಂಡಿದ್ದಾರೆ.

ಪೊಲೀಸ್ ಸೋಗಿನಲ್ಲಿ ವಿಡಿಯೋ ಕಾಲ್‌ | ಟೆಕ್ಕಿಗೆ 2.24 ಕೋಟಿ ಪಂಗನಾಮ

ಸೈಬರ್​ ಕ್ರೈಂ ಗಾಳಕ್ಕೆ ಬಿದ್ದಿರುವ ಬೆಂಗಳೂರಿನ ಟೆಕ್ಕಿಯೊಬ್ಬರು ಬರೋಬ್ಬರಿ 2.24 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.


Click the Play button to hear this message in audio format

ಬೆಂಗಳೂರು: ನಗರದಲ್ಲಿ ಸೈಬರ್​ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆನ್​ಲೈನ್ ವಂಚನೆಗೆ ಗುರಿಯಾಗಿ ಬೆಂಗಳೂರಿನ ಮಹಿಳೆಯೊಬ್ಬರು 14 ಲಕ್ಷ ರೂ.ಗೂ ಹೆಚ್ಚು ಹಣ ಕಳೆದುಕೊಂಡ ಪ್ರಕರಣದ ಬೆನ್ನಲ್ಲೇ ಅಂಥದ್ದೇ ಮತ್ತೊಂದು ಪ್ರಕರಣ ಮರುಕಳಿಸಿದೆ.

ಸೈಬರ್​ ಕ್ರೈಂ ಬೆಂಗಳೂರಿನ ಟೆಕ್ಕಿಯೊಬ್ಬರು ಬಲಿಯಾಗಿ ಬರೋಬ್ಬರಿ 2.24 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಅಮೃತಹಳ್ಳಿ ಭಾಗದ ಟೆಕ್ಕಿಯೊಬ್ಬರಿಗೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ‘ನಿಮ್ಮ ಏರ್ ಪಾರ್ಸಲ್ ದೆಹಲಿಯ ಕಸ್ಟಮ್ಸ್​​​ನಲ್ಲಿ ಸೀಜ್ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರಿನ ನಕಲಿ ಪಾಸ್ ಪೋರ್ಟ್​​, ಬ್ಯಾಂಕ್ ಎಟಿಎಂ ಕಾರ್ಡ್​​ಗಳು, ಎಂಡಿಎಂಎ ಡ್ರಗ್ಸ್ ಇದೆ’ ಎಂದು ಸುಳ್ಳು ಹೇಳಿದ್ದ.

ಈ ವಿಚಾರ ಆ್ಯಂಟಿ ನಾರ್ಕೊಟಿಕ್ ಬ್ಯೂರೊಗೆ ತಿಳಿದಿದೆ. ಹಾಗಾಗಿ ದೂರು ದಾಖಲು ಮಾಡಬೇಕು ಎಂದಿದ್ದ. ದೂರು ನೀಡಲು ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಆರೋಪಿ ಸೂಚನೆ ನೀಡಿದ್ದ. ಇದನ್ನು‌‌ ನಂಬಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿದ ಟೆಕ್ಕಿ ಅದರ ಮೂಲಕ ದೂರು ನೀಡಲು ಆರೋಪಿ ಹೇಳಿದಂತೆಯೇ ಮಾಡಿದ್ದಾರೆ.

ಸ್ಕೈಪ್ ಆ್ಯಪ್​​ನಲ್ಲಿ ವಿಡಿಯೋ ಕಾಲ್​ನಲ್ಲಿ ಕಾಣಿಸಿಕೊಂಡ, ಪೊಲೀಸ್ ಸಮವಸ್ತ್ರದಂತೆಯೇ ಕಾಣುವ ದಿರಿಸು ಧರಿಸಿದ್ದ ವ್ಯಕ್ತಿ, ನಿಮ್ಮ ಮೇಲೆ‌ ಮನಿ‌ ಲಾಂಡರಿಂಗ್ ಪ್ರಕರಣ ಕೂಡ ಇದೆ. ಸಿಬಿಐನವರು ಈ ಬಗ್ಗೆ ವಿಚಾರಣೆ ಮಾಡುತ್ತಾರೆ ಎಂದು ಹೆದರಿಸಿದ್ದ. ಕೊನೆಗೆ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಹಣ ನೀಡುವಂತೆ ಕೇಳಿದ್ದ. ಜೊತೆಗೆ ಕೆಲವೊಂದು ಅಕೌಂಟ್ ನಂಬರ್​ಗಳನ್ನೂ ನೀಡಿದ್ದ.

ಆರೋಪಿ ಮಾತು ನಂಬಿದ ಟೆಕ್ಕಿ ಹಂತ ಹಂತವಾಗಿ 8 ಖಾತೆಗೆಗಳಿಗೆ ಒಟ್ಟು 2,42,05,000 ರೂ. ವರ್ಗಾವಣೆ ಮಾಡಿದ್ದಾರೆ. ಕೆಲ ದಿನಗಳ ನಂತರ ಟೆಕ್ಕಿಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಸದ್ಯ ಈ ಬಗ್ಗೆ ಈಶಾನ್ಯ ಸೆನ್(cen) ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಮಹಿಳೆಯೊಬ್ಬರಿಗೆ ಕಸ್ಟಮ್ಸ್​​ ಅಧಿಕಾರಿಗಳ ಸೋಗಿನಲ್ಲಿ ವಂಚಕರು ವಿಡಿಯೋ ಕಾಲ್​ನಲ್ಲಿ ಮಹಿಳೆಯನ್ನು ವಿವಸ್ತ್ರಗೊಳ್ಳುವಂತೆ ಸೂಚಿಸಿದ್ದಲ್ಲದೆ, ಆ ವಿಡಿಯೋವನ್ನು ರೆಕಾರ್ಡ್​ ಮಾಡಿ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದರು. ಪರಿಣಾಮವಾಗಿ ಆಕೆ 14.57 ಲಕ್ಷ ರೂ. ಕಳೆದುಕೊಂಡಿದ್ದರು.

Read More
Next Story