ಪ್ರವಾಹ ಪರಿಸ್ಥಿತಿ | ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ಕಾಲೆಳೆದ ಜೆಡಿಎಸ್
x

ಪ್ರವಾಹ ಪರಿಸ್ಥಿತಿ | ಉಸ್ತುವಾರಿ ಸಚಿವರನ್ನು ಹುಡುಕಿಕೊಡಿ ಎಂದು ಕಾಲೆಳೆದ ಜೆಡಿಎಸ್


"ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ನಿರಂತರ ಮಳೆ ಸುರಿಯುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಪ್ರವಾಹದಿಂದ ಮನೆ, ಜಾನುವಾರುಗಳು ನಡು ನೀರಿನಲ್ಲಿ ಮುಳುಗುತ್ತಿವೆ, ಆದರೆ ಉಸ್ತುವಾರಿ ಸಚಿವರು ಮಾತ್ರ ನಾಪತ್ತೆಯಾಗಿದ್ದಾರೆ" ಎಂದು ಜೆಡಿಎಸ್‌ ರಾಜ್ಯ ಘಟಕ ಲೇವಡಿ ಮಾಡಿದೆ.

ಈ ಬಗ್ಗೆ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ʻʻರಾಜ್ಯದ ಹಲವೆಡೆ ನೆರೆ ಪ್ರವಾಹದಿಂದ ಮನೆ, ಜನ ಜಾನುವಾರುಗಳು ನೀರಿನಲ್ಲಿ ಮುಳುಗುತ್ತಿದ್ದರೆ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಾತ್ರ ಹಗರಣಗಳಲ್ಲಿ ಮುಳುಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ʻʻಕರಾವಳಿ, ಮಲೆನಾಡು, ಬಯಲುಸೀಮೆಯ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಗುಡ್ಡಗಳ ಕುಸಿತ, ಸೇತುವೆ ಮುಳುಗಡೆ, ಮನೆ ಕುಸಿತದಿಂದ ಜೀವಹಾನಿಯಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಊಟ, ವಸತಿಯಿಲ್ಲದೇ ನರಕ ಅನುಭವಿಸುತ್ತಿದ್ದಾರೆ. ಆದರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿ, ಸಾಂತ್ವನ, ಪರಿಹಾರ ಒದಗಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆʼʼ ಎಂದು ಜೆಡಿಎಸ್‌ ಕಿಡಿಕಾರಿದೆ.

ʻʻಭ್ರಷ್ಟಾಚಾರದಲ್ಲೇ ಮುಳುಗೇಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಮಂತ್ರಿಗಳು ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುವಲ್ಲೇ ಬ್ಯುಸಿಯಾಗಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಡು ನೀರಿನಲ್ಲೇ 'ಕೈ'ಬಿಟ್ಟಿರುವ ಸರ್ಕಾರಕ್ಕೆ ನೊಂದವರ/ ನಿರಾಶ್ರಿತರ ಕಣ್ಣೀರು ಶಾಪವಾಗದೆ ಬಿಡದುʼʼ ಎಂದು ಜೆಡಿಎಸ್‌ ವಾಗ್ದಾಳಿ ನಡೆಸಿದೆ.

ಈ ಎಕ್ಸ್‌ ಪೋಸ್ಟ್‌ನಲ್ಲಿ ʼಕಾಣೆಯಾದವರ ಬಗ್ಗೆ ಪ್ರಕಟಣೆʼ ಎಂದು ಚಿತ್ರವೊಂದನ್ನು ಹಂಚಿಕೊಳ್ಳಲಾಗಿದೆ. ದಯವಿಟ್ಟು ಇವರನ್ನು ಎಲ್ಲೇ ನೋಡಿದರೂ ಕೂಡಲೇ ಅವರವರ ಉಸ್ತುವಾರಿ ಜಿಲ್ಲೆಗಳಿಗೆ ಕಳುಹಿಸಿಕೊಡಿ ಎಂದು ಬೆಳಗಾವಿ ಉಸ್ತುವಾರಿ ಸತೀಶ್‌ ಜಾರಕಿಹೊಳಿ, ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮಿ ಹೆಬ್ಬಾಳ್ಕರ್, ಶಿವಮೊಗ್ಗ ಉಸ್ತುವಾರಿ ಮಧು ಬಂಗಾರಪ್ಪ, ಚಿಕ್ಕಮಗಳೂರು ಉಸ್ತುವಾರಿ ಕೆಜೆ ಜಾರ್ಜ್‌, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಮಾಂಕಾಳ ವೈದ್ಯ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್‌ ಗೂಂಡುರಾವ್ ಅವರ ಫೋಟೋಗಳನ್ನು ಹಾಕಲಾಗಿದೆ.

Read More
Next Story