ಸುಬ್ರಹ್ಮಣ್ಯ ಧಾರೇಶ್ವರ ನಿಧನ: ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ
x

ಸುಬ್ರಹ್ಮಣ್ಯ ಧಾರೇಶ್ವರ ನಿಧನ: ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ

ಯಕ್ಷಗಾನದ ಕೋಗಿಲೆ ಎಂದೇ ಜನಪ್ರಿಯರಾಗಿರುವ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ತಮ್ಮ 67 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.


ಯಕ್ಷಗಾನದ ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ತಮ್ಮ 67ನೇ ವಯಸ್ಸಿನಲ್ಲಿ ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಯಕ್ಷಗಾನ ಅಭಿಮಾನಿಗಳಿಂದ ಕರಾವಳಿ ಕೋಗಿಲೆ ಎಂಬ ವಿಶೇಷಣದಿಂದ ಗುರುತಿಸಲ್ಪಡುತ್ತಿದ್ದ ಧಾರೇಶ್ವರ ಅವರು, ಬಡಗುತಿಟ್ಟಿನ ಯಕ್ಷಗಾನದಲ್ಲಿ ವಿಶೇಷ ಹೆಸರು ಮಾಡಿದ್ದ ಕಾಳಿಂಗ ನಾವಡರ ನಿಧನದಿಂದ ಉಂಟಾಗಿದ್ದ ನಿರ್ವಾತವನ್ನು ತಮ್ಮದೇ ಶೈಲಿಯಲ್ಲಿ ತುಂಬುತ್ತಿದ್ದರು.

ಸರಿ ಸುಮಾರು ಐದು ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದ ಧಾರೇಶ್ವರ ಅವರು, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಪುತ್ರ ಕಾರ್ತಿಕ್‌ ಹವ್ಯಾಸಿ ಕಲಾವಿದರಾಗಿಯೂ ಗಮನ ಸೆಳೆದವರು.

ಕೋಟ ಅಮೃತೇಶ್ವರಿ ಮೇಳ, ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ಪ್ರಯೋಗವನ್ನು ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಪ್ರಯೋಗಿಸಿ ಯಶಸ್ವಿ ಕಂಡಿರುವ ಧಾರೇಶ್ವರ ಅವರ ಧ್ವನಿಯಲ್ಲಿ ಸುಮಾರು 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್ ಗಳು ಹೊರ ಬಂದಿವೆ.

ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ರಾಜ್ಯಮಟ್ಟದ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಂದ ಪುರಸ್ಕೃತರಾಗಿರುವ ಧಾರೇಶ್ವರ ಅವರು ಯಕ್ಷಗಾನ ರಂಗಕ್ಕೆ ಕಾಲಿಡುವ ಮುನ್ನ ಎಲೆಕ್ಟ್ರಿಕ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯನ್ನು ಗುರುಗಳಾದ ನಾರಾಯಣಪ್ಪ ಉಪ್ಪೂರರಿಂದ ಕಲಿತ ಸುಬ್ರಹ್ಮಣ್ಯ ಅವರು ಕೊನೆಯವರೆಗೂ ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದರು.

ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ಸಂಯೋಜಿಸಿ ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಪ್ರಸ್ತುತಪಡಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದ್ದರು.

ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದ ಅವರು, ಗುರು ಉಪ್ಪೂರರ ನಿರ್ದೇಶನದಲ್ಲಿ ಭಾಗವತಿಕೆ ಮಾಡಲು ಆರಂಭಿಸಿದ್ದರು. ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನೂ ಮಾಡುತ್ತಿದ್ದ ಧಾರೇಶ್ವರರು, ಭಾಗವತಿಕೆಯಲ್ಲಿ ತೊಡಗಿಸಿಕೊಳ್ಳುತ್ತಲೇ ತಮ್ಮ ಕಂಠದಿಂದ ಜನಪ್ರಿಯರಾದರು.

ಪೆರ್ಡೂರು ಮೇಳದಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿರುವ ಅವರು, ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ. ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Read More
Next Story