ವೃದ್ಧಾಶ್ರಮ ಸೇರಿದ ʼವಿಜಯನಗರದ ವೀರಪುತ್ರʼನ ಪತ್ನಿ;  ಹಿರಿಯ  ನಟಿ ಶೈಲಶ್ರೀ ಸುದರ್ಶನ್‍ ಪರಿಸ್ಥಿತಿಗೆ ಕಾರಣವೇನು?
x

ನಟಿ ಶೈಲಶ್ರೀ ಸುದರ್ಶನ್‍ ವೃದ್ಧಾಶ್ರಮ ಸೇರಿದ್ದಾರೆ. 

ವೃದ್ಧಾಶ್ರಮ ಸೇರಿದ ʼವಿಜಯನಗರದ ವೀರಪುತ್ರʼನ ಪತ್ನಿ; ಹಿರಿಯ ನಟಿ ಶೈಲಶ್ರೀ ಸುದರ್ಶನ್‍ ಪರಿಸ್ಥಿತಿಗೆ ಕಾರಣವೇನು?

ಚಿತ್ರರಂಗದಲ್ಲಿ ಹಲವು ವರ್ಷಗಳು ಇದ್ದರೂ, ಹಲವು ಚಿತ್ರಗಳಲ್ಲಿ ನಟಿಸಿದರೂ ಅವರು ಆಸ್ತಿಪಾಸ್ತಿ ಮಾಡಿಲ್ಲ. ಪತಿ , ಖ್ಯಾತ ನಟ ಸುದರ್ಶನ್‌. ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಇವರಿಗೆ ದರ್ಶನ್‌, ಗಿರಿಜಾ ಲೋಕೇಶ್‌ ಸಹಾಯಹಸ್ತ ತೋರಿದ್ದು ಬಿಟ್ಟರೆ, ಬಹುಷಃ ಚಿತ್ರರಂಗವೇ ಅವರನ್ನು ಮರೆತಿದೆ!


Click the Play button to hear this message in audio format

ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ನಟ ಸುದರ್ಶನ್‍ ಅವರ ಪತ್ನಿ ಶೈಲಶ್ರೀ ಸುದರ್ಶನ್‍ ಅವರು ಮಡಿಲು ವೃದ್ಧಾಶ್ರಮ ಸೇರಿದ್ದಾರೆ. ಕೆಲವು ವರ್ಷಗಳ ಹಿಂದೆ ಸುದರ್ಶನ್‍ ಅವರ ನಿಧನದ ನಂತರ ಒಬ್ಬರೇ ಇದ್ದ ಅವರು, ಈಗ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಇತ್ತೀಚೆಗೆ ಶೈಲಶ್ರೀ ಸುದರ್ಶನ್‍ ಅವರ ವೃದ್ಧಾಶ್ರಮ ಸೇರಿದ್ದು ಸಾಕಷ್ಟು ಸುದ್ದಿಯಾಗಿದೆ. ಈ ಕುರಿತು ಅವರು ಹಲವು ಟಿವಿ ಚಾನಲ್‍ಗಳಿಗೆ ಸಂದರ್ಶನ ನೀಡಿದ್ದಾರೆ. ತಾವು ವೃದ್ಧಾಶ್ರಮ ಸೇರಿದ್ದೇಕೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನಾನು ಇಲ್ಲಿಗೆ ಕೆಲವು ತಿಂಗಳುಗಳ ಹಿಂದೆ ಒಬ್ಬರ ಜೊತೆಗೆ ಬಂದಿದ್ದೆ. ಇಲ್ಲಿಯ ಪರಿಸರ ನನಗೆ ಬಹಳ ಇಷ್ಟವಾಯಿತು. ನಾನು ಅಲ್ಲಿಗೆ ಸೇರಿಕೊಳ್ಳಬೇಕು ಎಂದು ಹೇಳಿದೆ. 20 ಸಾವಿರ ಕೊಟ್ಟು ಸೇರಿಕೊಳ್ಳಬಹುದು ಎಂದರು. ನನ್ನ ಹತ್ತಿರ ಅಷ್ಟು ದುಡ್ಡು ಇತ್ತು. ತಕ್ಷಣವೇ ಇಲ್ಲಿ ಸದಸ್ಯೆಯಾಗಿದ್ದೆ. ನಾನು ಇಲ್ಲಿಗೆ ಬಂದಿದ್ದು ಇಲ್ಲಿ ಸೇರೋಕೆ ಅಂತಲ್ಲ. ಇವರು ಒಳ್ಳೆಯ ಸೇವೆ ಮಾಡುತ್ತಿದ್ದಾರೆ. ಅದು ನನಗೆ ಇಷ್ಟವಾಯಿತು. ಹಾಗಾಗಿ, ನಾನು ಇಲ್ಲಿ ಸದಸ್ಯೆಯಾಗಿ ಸೇರಿಕೊಂಡೆ. ಆದರೆ, ಒಂದು ಹಂತದಲ್ಲಿ ಇಲ್ಲಿ ಸೇರಬೇಕಾಯಿತು’ ಎಂದು ಹೇಳಿಕೊಂಡಿದ್ದಾರೆ.


ಪತಿ ಸುದರ್ಶನ್‍ ನಿಧನದ ನಂತರ ತಾನು ಒಂಟಿಯಾಗಿದ್ದೆ ಎಂದು ಹೇಳಿಕೊಂಡಿರುವ ಅವರು, ‘ನನಗೆ ನನ್ನ ಕುಟುಂಬದವರು ಎಂದು ಇಲ್ಲ. ತಂದೆ, ತಾಯಿ, ಅಕ್ಕ ಯಾರೂ ಇಲ್ಲ. ನನ್ನ ತಮ್ಮ ಪಟ್ನಾದಲ್ಲಿದ್ದಾನೆ. ಅವನ ಮಕ್ಕಳು ಬೇರೆ ರಾಜ್ಯಗಳಲ್ಲಿದ್ದಾರೆ. ನಮ್ಮ ಯಜಮಾನರು ನಿಧನರಾದಾಗ ನನ್ನ ತಮ್ಮನ ಮಗಳು ಬಂದು ಕೆಲವು ದಿನಗಳ ಕಾಲ ಕರೆದುಕೊಂಡು ಹೋದಳು. ವಾಪಸ್ಸು ಬಂದ ನಂತರ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಮನೆ ಖಾಲಿ ಖಾಲಿ. ಮುಂದೇನು ಮಾಡಬೇಕು ಎಂದು ತೋಚಲಿಲ್ಲ. ಈ ಮಧ್ಯೆ, ಮನೆ ಬಿಡಬೇಕು ಎನ್ನುವ ಪರಿಸ್ಥಿತಿ ಎದುರಾಯಿತು. ಎರಡು ತಿಂಗಳು ಕಾಲಾವಕಾಶ ಕೊಟ್ಟರು. ಮುಂದೆ ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗಲಿಲ್ಲ’ ಎಂದಿದ್ದಾರೆ.

ಈ ಸಂದರ್ಭದಲ್ಲಿ ತಮಗೆ ದರ್ಶನ್‍ ಸಹಾಯ ಮಾಡಿದರು ಎಂದಿರುವ ಶೈಲಶ್ರೀ, ‘ಆ ಸಂದರ್ಭದಲ್ಲಿ ದರ್ಶನ್‍ ಸಹೋದರ ದಿನಕರ್ 50 ಸಾವಿರ ತೆಗೆದುಕೊಂಡು ಬಂದರು. ದರ್ಶನ್‍ ಕೊಡೋಕೆ ಹೇಳಿದರು ಎಂದು ಕೊಟ್ಟರು. ದರ್ಶನ್‍ ಕಂಡರೆ ನನಗೆ ಬಹಳ ಪ್ರೀತಿ. ಅವರು ಪ್ರಾಣಿಪ್ರಿಯರು. ನಾನು ಮತ್ತು ನನ್ನ ಯಜಮಾನರು ಸಹ ಪ್ರಾಣಿಪ್ರಿಯರು. ಅವರಿಗೆ ನಾನು ಮನೆ ಖಾಲಿ ಮಾಡುತ್ತಿರುವ ವಿಷಯ ಗೊತ್ತಾಯಿತು. ಮುಂದೇನು ಎಂದು ಕೇಳಿದರು. ಆಗ ನನಗೂ ಮುಂದೇನು ಎಂದು ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ನಾದಿನಿ ಮಗ ಇಲ್ಲಿಗೆ ತಂದುಬಿಟ್ಟು, ಊಟ ಮಾಡಿಕೊಂಡಿರಿ, ನಾನು ಮನೆ ಖಾಲಿ ಮಾಡಿ ಬರುತ್ತೇನೆ ಎಂದು ಹೋದರು. ಈ ಜಾಗ ನನಗೆ ಹೊಸದೇನಲ್ಲ. ಹಾಗಾಗಿ ಇಲ್ಲೇ ಮುಂದುವರೆದೆ’ ಎಂದು ಹೇಳಿದ್ದಾರೆ.

ತಾನು ಮುಂದೊಂದು ದಿನ ಇಲ್ಲಿ ಬರಬಹುದು ಎಂದು ಯಾವತ್ತೂ ಯೋಚಿಸಿರಲಿಲ್ಲ ಎಂದಿರುವ ಶೈಲಶ್ರೀ, 'ನಾನು ಈ ರೀತಿ ಬರುತ್ತೇನೆ, ಇಲ್ಲಿ ಇರುತ್ತೇನೆ ಅಂತಾ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಈ ಸಂಸ್ಥೆ ನಡೆಸುತ್ತಿರುವವರು ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡರು. ತುಂಬಾ ಪ್ರೀತಿಯಿಂದ ನೋಡಿಕೊಂಡರು. ಇನ್ನು, ಗಿರಿಜಾ ಲೋಕೇಶ್‍ ತುಂಬಾ ಸಹಾಯ ಮಾಡಿದ್ದಾರೆ. ನನ್ನ ಪತಿ ಸುದರ್ಶನ್‌ ಅವರು ಆಸ್ಪತ್ರೆ ಸೇರಿದ್ದಾಗ ಮೊದಲು ಬಂದವರು ಗಿರಿಜಾ ಲೋಕೇಶ್‌’ ಎಂದು ಹೇಳಿದ್ದಾರೆ.


ತಮಿಳುನಾಡು ಮೂಲದವರಾದರೂ ಚಿಂದೋಡಿ ಲೀಲಾ ಕನ್ನಡ ಕಲಿಸಿದರು

ಶೈಲಶ್ರೀ ಅವರು ಮೂಲತಃ ತಮಿಳು ನಾಡಿನ ಚಿದಂಬರಂನವರು. 1966ರಲ್ಲಿ ಬಿಡುಗಡೆಯಾದ ಡಾ. ರಾಜಕುಮಾರ್ ಅಭಿನಯದ ‘ಸಂಧ್ಯಾ ರಾಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅವರು, ನಂತರದ ದಿನಗಳಲ್ಲಿ ‘ಬಂಗಾರದ ಹೂವು’, ‘ದೇವರ ಗೆದ್ದ ಮಾನವ’, ‘ಜೇಡರ ಬಲೆ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಕನ್ನಡದ ಧೀಮಂತ ನಟ-ನಿರ್ದೇಶಕ ಆರ್. ನಾಗೇಂದ್ರ ರಾವ್‍ ಅವರ ಮಗ ಆರ್.ಎನ್‍. ಸುದರ್ಶನ್‍ ಅವರ ಜೊತೆಗೆ ಚಿತ್ರವೊಂದರಲ್ಲಿ ನಟಿಸುವಾಗ ಅವರ ಜೊತೆಗೆ ಪ್ರೇಮಾಂಕುರವಾಗಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆಯಾದರು. ಆರ್. ನಾಗೇಂದ್ರ ರಾವ್‍ ಅವರ ಮಕ್ಕಳ ಪೈಕಿ ಜಯಗೋಪಾಲ್‍ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡರೆ, ಕೃಷ್ಣಪ್ರಸಾದ್‍ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು.

ಇನ್ನು, ಸುದರ್ಶನ್‍ 1961ರಲ್ಲಿ ಬಿಡುಗಡೆಯಾದ ‘ವಿಜಯನಗರದ ವೀರಪುತ್ರ’ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ನಂತರ ಹಲವು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದರು. 1971ರಲ್ಲಿ ಬಿಡುಗಡೆಯಾದ ‘ನಗುವ ಹೂವು’ ಚಿತ್ರಕ್ಕೆ ಶೈಲಶ್ರೀ ಕಥೆ ಬರೆದರು. ಈ ಚಿತ್ರವನ್ನು ಶ್ರೀ ಸುದರ್ಶನ್‍ ಚಿತ್ರಾಲಯ ಬ್ಯಾನರ್ ಅಡಿ ಸುದರ್ಶನ್‍ ನಿರ್ಮಾಣ ಮಾಡಿದರೆ, ಅವರ ಸಹೋದರ ಆರ್.ಎನ್. ಕೃಷ್ಣಪ್ರಸಾದ್‍ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸುದರ್ಶನ್,‍ ಶೈಲಶ್ರೀ, ಆರ್‍. ನಾಗೇಂದ್ರ ರಾವ, ಅಶ್ವತ್ಥ್ ಮುಂತಾದವರು ನಟಿಸಿದ್ದರು.


ಮದುವೆಯ ನಂತರವೂ ನಟಿಸುವುದನ್ನು ಮುಂದವರೆಸಿದ ಶೈಲಶ್ರೀ, ‘ಬಂಗಾರದ ಪಂಜರ’, ‘ಕೌಬಾಯ್‍ ಕುಳ್ಳ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. 1984ರಲ್ಲಿ ಬಿಡುಗಡೆಯಾದ ‘ಅವಳ ಅಂತರಂಗ’, ಶೈಲಶ್ರೀ ಅಭಿನಯದ ಕೊನೆಯ ಚಿತ್ರವಾಯಿತು. ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲೂ ಶೈಲಶ್ರೀ ನಟಿಸಿದ್ದಾರೆ. ಚಲನಚಿತ್ರಗಳಲ್ಲದೆ, ರಂಗಭೂಮಿ ಮತ್ತು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ.

ಸುದರ್ಶನ್‍ ಅವರ ನಿಧನದ ನಂತರ ಒಬ್ಬಂಟಿಯಾಗಿದ್ದ ಶೈಲಶ್ರೀ, ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್‍ ಖಾಯಿಲೆಗೆ ತುತ್ತಾಗಿದ್ದರು. ಅದರಿಂದ ಗುಣಮುಖರಾಗಿರುವ ಅವರು ಈಗ ಆರೋಗ್ಯವಾಗಿದ್ದಾರೆ. ಸುದರ್ಶನ್‍ ಮತ್ತು ಶೈಲಶ್ರೀ ದಂಪತಿಗೆ ಮಕ್ಕಳಿಲ್ಲದ ಕಾರಣ, ಅವರು ಇದೀಗ ಮಡಿಲು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

Read More
Next Story