
ಯತ್ನಾಳ್
ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಜಿಸಿ: ಯತ್ನಾಳ್
ಕೆಲವು ಕಮ್ಯೂನಿಸ್ಟ್ ಮನಸ್ಥಿತಿ ಸ್ವಾಮೀಜಿಗಳು ಉದ್ದೇಶಪೂರ್ವಕವಾಗಿ ತಮ್ಮ ವೈಭವೀಕರಣಕ್ಕಾಗಿ, ಸ್ವಾರ್ಥಕ್ಕಾಗಿ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ.
ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ಕೂಗಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ಹಿಂದೂ ಧರ್ಮ ಬೇಡ ಎನ್ನುವ ಸ್ವಾಮೀಜಿಗಳು ಕೇಸರಿ ಬಟ್ಟೆ ತ್ಯಾಗ ಮಾಡಿ, ಹಸಿರು ಅಥವಾ ಬಿಳಿ ಬಟ್ಟೆ ಧರಿಸಲಿ" ಎಂದು ಸವಾಲು ಹಾಕಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಸಂಪ್ರದಾಯವನ್ನು ಹೊಂದಿದ್ದು, ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾಗಿವೆ ಎಂದು ಪ್ರತಿಪಾದಿಸಿದರು. "ಕೆಲವು ಕಮ್ಯುನಿಸ್ಟ್ ಮನಸ್ಥಿತಿಯ ಸ್ವಾಮೀಜಿಗಳು ತಮ್ಮ ವೈಭವೀಕರಣ ಮತ್ತು ಸ್ವಾರ್ಥಕ್ಕಾಗಿ ಪ್ರತ್ಯೇಕ ಧರ್ಮದ ಕೂಗು ಎಬ್ಬಿಸುತ್ತಿದ್ದಾರೆ. ಇದು ಹಿಂದೂ ಶಬ್ದಕ್ಕೆ ಅಪಮಾನ ಮಾಡುವ ವ್ಯವಸ್ಥಿತ ಸಂಚು" ಎಂದು ಅವರು ಗಂಭೀರ ಆರೋಪ ಮಾಡಿದರು.
"ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿನ ಹೋಮ-ಹವನಗಳಿಗೆ ಅಪಮಾನ ಮಾಡುವುದೇ ಈ ಸ್ವಾಮೀಜಿಗಳ ಉದ್ದೇಶ. ನಮಗೆ ಇಂತಹ ಸ್ವಾಮೀಜಿಗಳು ಬೇಕಾಗಿಲ್ಲ. ಬಿಜೆಪಿಯಿಂದ ಹಿಂದೂ ಧರ್ಮದ ಹೆಸರು ಹೇಳಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು, ಈ ನಿಲುವನ್ನು ಒಪ್ಪದಿದ್ದರೆ ಪಕ್ಷ ಬಿಟ್ಟು ಹೋಗಬಹುದು" ಎಂದು ಯತ್ನಾಳ್ ಖಾರವಾಗಿ ನುಡಿದರು.