BJP Infighting | ವೀರಶೈವ-ಲಿಂಗಾಯತ ಮುಖಂಡರ ಸಭೆ: ಯಡಿಯೂರಪ್ಪ ವರ್ಚಸ್ಸು ವೃದ್ಧಿಗೆ ವಿಜಯೇಂದ್ರ ಬಣ ಕಸರತ್ತು
x
ಬೆಂಗಳೂರಿನ ಯಡಿಯೂರಪ್ಪ ನಿವಾಸದಲ್ಲಿ ಎಂ.ಪಿ.ರೇಣುಕಾಚಾರ್ಯ ಅವರು ವೀರಶೈವ-ಲಿಂಗಾಯತ ಸಮುದಾಯದವರ ಸಭೆ ನಡೆಸಿದರು.

BJP Infighting | ವೀರಶೈವ-ಲಿಂಗಾಯತ ಮುಖಂಡರ ಸಭೆ: ಯಡಿಯೂರಪ್ಪ ವರ್ಚಸ್ಸು ವೃದ್ಧಿಗೆ ವಿಜಯೇಂದ್ರ ಬಣ ಕಸರತ್ತು

ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖರೊಂದಿಗೆ ಬಿ.ವೈ.ವಿಜಯೇಂದ್ರ ಬಣದ ನಾಯಕ ಎಂ.ಪಿ.ರೇಣುಕಾಚಾರ್ಯ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.


ಬಿಜೆಪಿಯ ರೆಬೆಲ್ ನಾಯಕರ ಟೀಕೆ, ಪೋಕ್ಸೊ ಪ್ರಕರಣದಿಂದ ಜರ್ಜರಿತವಾಗಿರುವ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೆ ವೀರಶೈವ-ಲಿಂಗಾಯತ ಸಮುದಾಯದ ಮೇರು ನಾಯಕರನ್ನಾಗಿ ಪ್ರತಿಷ್ಠಾಪಿಸಿ, ಕರಗುತ್ತಿರುವ ಅವರ ವರ್ಚಸ್ಸನ್ನು ಮತ್ತೆ ಕಟ್ಟಿ ನಿಲ್ಲಿಸುವ ಪ್ರಯತ್ನಕ್ಕೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ ಮುಂದಾಗಿದೆ.

ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಗುರುವಾರ ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ಆಗಮಿಸಿದ್ದ ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖರೊಂದಿಗೆ ವಿಜಯೇಂದ್ರ ಬಣದ ನಾಯಕ ಎಂ.ಪಿ.ರೇಣುಕಾಚಾರ್ಯ ಸಭೆ ನಡೆಸಿದ್ದು,ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ನಡೆಸುವ ಕುರಿತು ಘೋಷಣೆ ಮಾಡಿದಾದ ಯತ್ನಾಳ್ ಬಣದ ನಾಯಕರು ಟೀಕಿಸಿದ್ದರು. ಪಂಚಮಸಾಲಿ ಹೋರಾಟವನ್ನು ಬೆಂಬಲಿಸದ ಕಾರಣಕ್ಕೂ ಮಠಾಧೀಶರು ಸೇರಿದಂತೆ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಪಂಚಮಸಾಲಿ ಹೋರಾಟ ಬೆಂಬಲಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಯಡಿಯೂರಪ್ಪ ನಿಲುವನ್ನು ಬಹಿರಂಗವಾಗಿ ಟೀಕಿಸಿದ್ದರು. ತಮ್ಮ ಮಗನನ್ನು ಬೆಳೆಸುವ ಸಲುವಾಗಿ ಲಿಂಗಾಯತ ಸಮುದಾಯವನ್ನು ಯಡಿಯೂರಪ್ಪ ಹತ್ತಿಕ್ಕಿದ್ದಷ್ಟೇ ಅವರ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಸಮುದಾಯದಲ್ಲಿ ಯಡಿಯೂರಪ್ಪ ಅವರ ಮೇಲಿನ ನಂಬಿಕೆಗೆ ಧಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಅವರು ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖರ ಜೊತೆ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಯಡಿಯೂರಪ್ಪ ಅಭಿಮಾನಿಗಳ ಸಭೆ

ಯಡಿಯೂರಪ್ಪ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧೆಡೆ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ.

ಯಡಿಯೂರಪ್ಪ ಅವರು ಬಿಜೆಪಿಯ ಅಗ್ರಮಾನ್ಯ ನಾಯಕ. ಜನರು ಅವರ ಮುಖ ನೋಡಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಆದರೆ, ರಾಜ್ಯದಲ್ಲಿ ಇತ್ತೀಚೆಗೆ ಕೆಲ ದುಷ್ಟಶಕ್ತಿಗಳು ಒಳಪಂಗಡಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅವರ ಪರ ಒಗ್ಗಟ್ಟು ಪ್ರದರ್ಶಿಸಲು ರಾಜ್ಯದ ವಿವಿಧೆಡೆ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇಂದು(ಶುಕ್ರವಾರ) ಬೆಳಿಗ್ಗೆ 11ಕ್ಕೆ ದಾಬಸ್ ಪೇಟೆ, ಮಧ್ಯಾಹ್ನ 1 ಗಂಟೆಗೆ ತುಮಕೂರಿನಲ್ಲಿ ಸಭೆ ನಡೆಸಲಿದೆ. ಮಾರ್ಚ್ 1ರಂದು ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಅಭಿಮಾನಿಗಳ ಸಭೆಗಳು ದಾವಣಗೆರೆಯಲ್ಲಿ ನಡೆಯಲಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾರ್ಚ್ 4ರಂದು ದೊಡ್ಡ ಮಟ್ಟದ ಸಭೆ ನಡೆಸಲಾಗುವುದು. ಈ ಸಭೆಗಳಲ್ಲಿ ಉದ್ಯಮಿಗಳು, ನಿವೃತ್ತ ಅಧಿಕಾರಿಗಳು, ವಕೀಲರು ಮತ್ತು ಇತರರು ಭಾಗವಹಿಸುತ್ತಾರೆ. ಈ ಸಭೆಗಳಿಗೆ ತಗಲುವ ವೆಚ್ಚವನ್ನು ಆಯಾ ಭಾಗದ ನಾಯಕರೇ ಭರಿಸುತ್ತಾರೆ. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸ್ವಾಮೀಜಿಗಳು ಭಾಗವಹಿಸುತ್ತಾರೆ. ಅಲ್ಲಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ವಿಪರ್ಯಾಸವೆಂದರೆ ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಹುಟ್ಟುಹಬ್ಬದ ಶುಭಾಶಯ ಹೇಳಲು ಬಂದವರನ್ನೇ ಕೂರಿಸಿಕೊಂಡು ಎಂ.ಪಿ.ರೇಣುಕಾಚಾರ್ಯ ಸಭೆ ನಡೆಸಿರುವುದು ನಗೆಪಾಟಲಿಗೆ ಈಡಾಗಿದೆ.

Read More
Next Story