
ವಿಬಿ ಜಿ ರಾಮ್ ಜಿ | ಕೇರಳ ಬಳಿಕ ಕರ್ನಾಟಕದಲ್ಲೂ ʼಸರ್ಕಾರ ವರ್ಸಸ್ ಲೋಕಭವನʼ ಸಮರ
2011 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಗದ್ದಲದಲ್ಲಿ ಭಾಷಣ ಮಾಡಲು ಸಾಧ್ಯವಾಗದೇ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅರ್ಧಕ್ಕೆ ನಿಲ್ಲಿಸಿದ್ದರು.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯನ್ನು ರದ್ದುಗೊಳಿಸಿ, ಜಾರಿಗೆ ತಂದಿರುವ 'ವಿಬಿ-ಜಿ ರಾಮ್ ಜಿ' ಯೋಜನೆಯು ದಕ್ಷಿಣದ ರಾಜ್ಯಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ಮುನ್ನುಡಿ ಬರೆದಿದೆ. ಕೇರಳ ಮತ್ತು ತಮಿಳುನಾಡಿನ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಈ ಯೋಜನೆಯ ವಿರೋಧದ ಕಿಚ್ಚು ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ತೀವ್ರಗೊಳಿಸಿದೆ. ರಾಜ್ಯಪಾಲರು ಕೇಂದ್ರದ ವಿರುದ್ಧದ ಸರ್ಕಾರದ ಟೀಕೆಗಳನ್ನು ಸದನದಲ್ಲಿ ಓದಲು ಹಿಂದೇಟು ಹಾಕಿದ್ದಾರೆ.
ಕೇರಳದ ಮಾದರಿ ಕರ್ನಾಟಕದಲ್ಲೂ ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ, ಹೂಡಿಕೆಗಳ ಬಗ್ಗೆ ಸುಳ್ಳು ಮಾಹಿತಿ, ರಾಷ್ಟ್ರಗೀತೆ ಅಗೌರವ ತೋರಿದ ಆರೋಪದಲ್ಲಿ ತಮಿಳುನಾಡಿನಲ್ಲೂ ರಾಜ್ಯಪಾಲರು ಹಾಗೂ ಲೋಕಭವನ ನಡುವೆ ಸಂಘರ್ಷ ಏರ್ಪಟ್ಟಿತ್ತು. ಆದರೆ, ವಿಜಿ ಜಿ ರಾಮ್ ಜಿ ಯೋಜನೆ ವಿಚಾರದಲ್ಲಿ ಕೇರಳ ಹಾಗೂ ಕರ್ನಾಟಕದ ರಾಜ್ಯಪಾಲರು ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ.
ಕರ್ನಾಟಕದಲ್ಲಿ ಆಗಿದ್ದು ಏನು?
ಕರ್ನಾಟಕ ವಿಧಾನ ಮಂಡಲ ಅಧಿವೇಶನಲ್ಲಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಲು ನಿರ್ಣಯ ಕೈಗೊಳ್ಳುವ ಸಲುವಾಗಿ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ನಿಲುವು ತಿಳಿಸಲಾಗಿತ್ತು. ಇದಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ, ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿನ ತಾರತಮ್ಯಗಳ ಕುರಿತು ಪ್ರಸ್ತಾಪಿಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧದ ಈ ಸಂಗತಿಗಳನ್ನು ಪ್ರಸ್ತಾಪಿಸುವ ಕ್ರಮದಿಂದ ಹಿಂದೆ ಸರಿದಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಸರ್ಕಾರದ ಭಾಷಣದಲ್ಲಿ ಓದುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಈ ಹಿಂದೆ ವಿಧೇಯಕಗಳ ಅಂಗೀಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆಗೆ ಅನುಮತಿ ನೀಡಿದ ವಿಚಾರಗಳಲ್ಲಿ ರಾಜ್ಯ ಸರ್ಕಾರದ ಜೊತೆ ನೇರ ಸಂಘರ್ಷಕ್ಕೆ ಇಳಿದಿದ್ದರು. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ಮಸೂದೆಗಳನ್ನು ಹಲವು ತಿಂಗಳಿಂದ ಸಹಿ ಹಾಕದೇ ಬಾಕಿ ಉಳಿಸಿಕೊಂಡಿದ್ದರು.
ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಮಸೂದೆಯಲ್ಲಿ ಕುಲಪತಿ ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ಕಸಿದು ಮುಖ್ಯಮಂತ್ರಿಗೆ ವಹಿಸಿದ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು.
2011 ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಗದ್ದಲದಲ್ಲಿ ಭಾಷಣ ಮಾಡಲು ಸಾಧ್ಯವಾಗದೇ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅರ್ಧಕ್ಕೆ ನಿಲ್ಲಿಸಿದ್ದರು. ಬಳಿಕ ಭಾಷಣವನ್ನು ಓದಲಾಗಿದೆ ಎಂದು ಪರಿಗಣಿಸಲಾಗಿತ್ತು.
2015 ಹಾಗೂ 2023ರಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದಾಗ ಕನ್ನಡ ಪರ ಸಂಘಟನೆಗಳು ಮತ್ತು ಪ್ರತಿಪಕ್ಷಗಳು ʼಕನ್ನಡಕ್ಕೆ ಅವಮಾನʼ ಎಂದು ಟೀಕಿಸಿದ್ದವು.
2019 ರಲ್ಲಿ ವಜುಭಾಯಿ ವಾಲಾ ಅವರು ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟಿಸಿದಾಗ ತಮ್ಮ 22 ಪುಟಗಳ ಸುದೀರ್ಘ ಭಾಷಣದಲ್ಲಿ ಕೇವಲ 2 ಪುಟ ಓದಿ, ಭಾಷಣವನ್ನು ಮೊಟಕುಗೊಳಿಸಿ ಹೊರನಡೆದಿದ್ದರು.
ಮನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ತಂದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶವ್ಯಾಪಿ ʼನರೇಗಾ ಬಚಾವೋ ಆಂದೋಲನʼ ಹಮ್ಮಿಕೊಂಡಿದೆ. ಅದರಂತೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ವಿಬಿ ಜಿ ರಾಮ್ಜಿ ಯೋಜನೆ ಕುರಿತು ಚರ್ಚಿಸಿ, ಕೇಂದ್ರದ ನಿರ್ಧಾರ ವಿರೋಧಿಸಲು ತೀರ್ಮಾನಿಸಿದೆ.
ತಮಿಳುನಾಡು, ಕೇರಳದಲ್ಲಿ ಸಂಘರ್ಷ ಏಕೆ?
ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಸಾಕಷ್ಟು ದೋಷವಿದೆ ಎಂದು ಹೇಳಿ ರಾಜ್ಯಪಾಲ ಆರ್.ಎನ್. ರವಿ ಅವರು ಭಾಷಣ ಓದದೇ ಸದನದಿಂದ ಹೊರ ನಡೆದಿದ್ದರು. ರಾಜ್ಯಪಾಲರ ಈ ನಡೆಯನ್ನು ಡಿಎಂಕೆ ಸರ್ಕಾರ ಟೀಕಿಸಿತ್ತು. ಅಲ್ಲದೇ ಸಂವಿಧಾನದ 176ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸರ್ಕಾರ, ಸಿದ್ದಪಡಿಸುವ ಭಾಷಣವನ್ನು ರಾಜ್ಯಪಾಲರು ಓದಬೇಕು. ಯಾವುದೇ ವೈಯಕ್ತಿಕ ಅಭಿಪ್ರಾಯ ಸೇರ್ಪಡೆ ಅಥವಾ ಭಾಷಣದಲ್ಲಿರುವ ಅಂಶಗಳನ್ನು ಕೈ ಬಿಡುವಂತಿಲ್ಲ ಎಂಬುದು ಸಂವಿಧಾನದಲ್ಲಿದೆ ಎಂದು ಡಿಎಂಕೆ ವಾದಿಸಿತ್ತು.
ಇನ್ನು ಕೇರಳ ವಿಧಾನಸಭೆಯಲ್ಲೂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಓದದೇ ಬಿಟ್ಟಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಕೇಂದ್ರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ತಮಿಳುನಾಡು, ಕೇರಳ ವಿರೋಧಿಸಿರುವುದರಿಂದ ರಾಜ್ಯಪಾಲರ ಈ ನಡೆ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರದ ವಿರುದ್ಧ ನಿರ್ಣಯಕ್ಕೆ ತೀರ್ಮಾನ
ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಯಿಂದ ಗಂಭೀರವಾದ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳು ಎದುರಾಗಲಿವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮತ್ತು ಬಡವರ ಜೀವನೋಪಾಯದ ಭದ್ರತೆ ಕಸಿಯಲಿದೆ. ನರೇಗಾ ವ್ಯವಸ್ಥೆ ದುರ್ಬಲಗೊಳಿಸಿದ ಪರಿಣಾಮ ಗ್ರಾಮೀಣ ಭಾಗದ ಲಕ್ಷಾಂತರ ಜನರು ಸಂಕಷ್ಟ ಎದುರಿಸಲಿದ್ದಾರೆ ಎಂಬ ಅಂಶಗಳು ಭಾಷಣದಲ್ಲಿ ಇರಲಿವೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ಅನುದಾನ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಸಗಿದೆ. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯದ ಪಾಲು ಏರಿಕೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲಿದೆ ಎಂದು ಪ್ರಸ್ತಾಪಿಸುವ ಸಾಧ್ಯತೆಗಳಿವೆ.
ಕೇರಳ, ತಮಿಳುನಾಡು ಸೇರಿದಂತೆ ಆರೇಳು ರಾಜ್ಯಗಳು ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಹೋರಾಟ ರೂಪಿಸಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಸಂಸತ್ತಿನಲ್ಲಿ ಅಂಗೀಕರಿಸಿರುವ ಕಾಯ್ದೆಯನ್ನು ವಿಧಾನಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ಹೇಳುತ್ತಿದೆ. ಹಾಗಾಗಿ ರಾಜ್ಯಪಾಲರ ಭಾಷಣದಿಂದಲೇ ಅಧಿವೇಶನಕ್ಕೆ ಗ್ರಹಣ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ.

