
ವರದಾ ಹಾಗೂ ಬೇಡ್ತಿ ನದಿಗಳು
ವರದಾ-ಬೇಡ್ತಿ ನದಿ ಜೋಡಣೆ ಸಾಧ್ಯ| ಗೊಂದಲ ನಿವಾರಣೆಗೆ ಸರ್ಕಾರ ಸಭೆ ಕರೆಯಲಿ: ಬೊಮ್ಮಾಯಿ
ಯೋಜನೆ ಬಗ್ಗೆ ಮುಕ್ತವಾಗಿ ಚರ್ಚಿಸಲು ಜಲ ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆದು ಸೌಹಾರ್ದಯುತ ನಿರ್ಣಯ ತೆಗದುಕೊಳ್ಳಬೇಕು. ನಮ್ಮ ಕಡೆ ಬರಗಾಲವಿದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ಬಹು ದಶಕಗಳ ಕನಸಾದ ವರದಾ-ಬೇಡ್ತಿ ನದಿ ಜೋಡಣೆ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಯೋಜನೆ ಜಾರಿಗೆ ಜನಜಾಗೃತಿ ಮೂಡಿಸಲು ಹಾವೇರಿ ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನರನ್ನು ಸೇರಿಸಿ ಜಾಗೃತಿ ಸಮಾವೇಶ ಮಾಡಲಾಗುವುದು. ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ (ಜ.11) ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳನ್ನು ಉಳಿಸಿ, ವರದಾ - ಬೇಡ್ತಿ ವಿರೋಧಿಸಿ ಅಭಿಯಾನ ನಡೆಸುತ್ತಿರುವ ಕುರಿತು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನದಿ ಜೋಡಣೆ ಯೋಜನೆ ಇಂದಿನದಲ್ಲ. 1994 ರಿಂದಲೇ ಇದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ. ಈಗ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗುವುದಿಲ್ಲ. ಬೆಡ್ತಿ ನದಿಯಿಂದ ಕಡಿಮೆ ನೀರನ್ನು ಎತ್ತುತ್ತಿದ್ದೇವೆ, ಯಾವುದೇ ನೀರಿನ ನಷ್ಟ ಆಗುವುದಿಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟಕ್ಕೆ ಮನವರಿಕೆ ಮಾಡಿಕೊಡಲಿ ಎಂದು ಹೇಳಿದರು.
ಚರ್ಚೆಗೆ ಸಿದ್ದ
ಯೋಜನೆ ಬಗ್ಗೆ ಮುಕ್ತವಾಗಿ ಚರ್ಚಿಸಲು ಜಲ ತಜ್ಞರು, ಪರಿಸರ ವಿಜ್ಞಾನಿಗಳನ್ನು ಕರೆದು ಸೌಹಾರ್ದಯುತ ನಿರ್ಣಯ ತೆಗದುಕೊಳ್ಳಬೇಕು. ನಮ್ಮ ಕಡೆ ಬರಗಾಲವಿದೆ. ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲವಾಗುತ್ತದೆ. ಇದನ್ನು ಭಾವನಾತ್ಮಕವಾಗಿ ನೋಡಬಾರದು. ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಆದ ಬಳಿಕ ರಾಜ್ಯ ಸರ್ಕಾರ ಸಭೆ ಕರೆಯಲಿ . ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಆಂದ್ರಪ್ರದೇಶ, ಕರ್ನಾಟಕದಲ್ಲಿ ಹರಿಯುತ್ತದೆ. ಬರಿ ಮಹಾರಾಷ್ಟ್ರಕ್ಕೆ ಮಾತ್ರವಲ್ಲ. ವರದಾ ಬೆಡ್ತಿ ಯೋಜನೆ ಆಗಲೇಬೇಕಿದ್ದು, ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ದ. ಗೊಂದಲವನ್ನು ಮಾತುಕತೆ ಮೂಲಕ ಬಗೆ ಹರಿಸಬೇಕು. ಅದಕ್ಕಾಗಿ ನಾವು ಹಾವೇರಿಯಲ್ಲಿ ಮಠಾಧೀಶರು, ರಾಜಕೀಯ ನಾಯಕರು ಎಲ್ಲರನ್ನೊಳಗೊಂಡ ಸಭೆ ಕರೆಯುತ್ತೇವೆ. ಜನ ಜಾಗೃತಿ ಸಮಾವೇಶ ಮಾಡುವ ಮೂಲಕ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.
ಏನಿದು ಯೋಜನೆ ?
ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ ಹೆಚ್ಚುವರಿ ನೀರನ್ನು ಪೂರ್ವಕ್ಕೆ ಹರಿಯುವ ವರದಾ ನದಿಗೆ ತಿರುಗಿಸುವ ಯೋಜನೆಯಾಗಿದೆ. ಈ ಯೋಜನೆಯಿಂದ ಪ್ರಮುಖವಾಗಿ ಉತ್ತರ ಕರ್ನಾಟಕದ ಹಾವೇರಿ, ಗದಗ, ಕೊಪ್ಪಳ, ಧಾರವಾಡ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು 1992ರಲ್ಲಿ ಈ ಯೋಜನೆ ರೂಪಿಸಲಾಯಿತು. ಯೋಜನೆಯ ಪ್ರಕಾರ, ಗದಗ ಜಿಲ್ಲೆಯ ಹಿರೇವದತ್ತಿಯಲ್ಲಿ ಬೃಹತ್ ಅಣೆಕಟ್ಟು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಗೋಡದಲ್ಲಿ ಪಟ್ಟಣಹಳ್ಳ ನದಿಗೆ ಎರಡನೇ ಅಣೆಕಟ್ಟು ನಿರ್ಮಿಸಿ ಎರಡೂ ಅಣೆಕಟ್ಟುಗಳು ಸುರಂಗಗಳ ಮೂಲಕ ವರದಾ ನದಿಗೆ ನೀರನ್ನು ಒಯ್ಯುವ ಯೋಜನೆಯಾಗಿತ್ತು.
61 ಮೆಗಾವ್ಯಾಟ್ ವಿದ್ಯುತ್ ಅಗತ್ಯ
ಬೇಡ್ತಿ ಮತ್ತು ವರದಾ ನದಿಗಳ ಉಪನದಿಗಳಾದ ಪಟ್ಟಣಹಳ್ಳ ಮತ್ತು ಶಾಲ್ಮಲಹಳ್ಳಗಳಿಂದ ಒಟ್ಟು 302 ಮಿಲಿಯನ್ ಘನ ಮೀಟರ್ ನೀರನ್ನು, ಬೇಡ್ತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸುರೇಮನೆ ಬ್ಯಾರೇಜ್‌ನಿಂದ 222 ಮಿಲಿಯನ್ ಘನ ಮೀಟರ್ ನೀರನ್ನು ಪಡೆಯಲಾಗುತ್ತದೆ. ಈ ಯೋಜನೆಗೆ ಗದಗದವರೆಗೆ ನೀರನ್ನು ಎಳೆಯಲು 61 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಇದರ ನಂತರವೂ, ನೀರು ಗದಗ ತಲುಪುತ್ತದೆಯೇ ಎಂಬುದಕ್ಕೆ ಖಾತರಿ ಇಲ್ಲ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.
ಭರವಸೆ ನೀಡಿದ್ದ ಡಿಸಿಎಂ
ಕಳೆದ ಮೇ ನಲ್ಲಿ ಹಾವೇರಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಬೇಡ್ತಿ ಹಾಗೂ ವರದಾ ನದಿಗಳ ಜೋಡಣೆಗೆ 1992ರಲ್ಲಿ ಯೋಜನೆ ರೂಪುಗೊಂಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. 2,018 ಕೋಟಿ ವೆಚ್ಚದ ವರದಾ ಮತ್ತು ಬೇಡ್ತಿ ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ನದಿ ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದರು.

