ವಾಲ್ಮೀಕಿ ಹಗರಣ; ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಸಂಬಂಧಿಕರಿಗೆ ಇಡಿ ನೋಟಿಸ್
x
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ

ವಾಲ್ಮೀಕಿ ಹಗರಣ; ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಸಂಬಂಧಿಕರಿಗೆ ಇಡಿ ನೋಟಿಸ್

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ನೆಕ್ಕಂಟಿ ನಾಗರಾಜ್ ಅವರ ಸಂಬಂಧಿಕರಿಗೆ ಇಡಿ ನೋಟಿಸ್ ನೀಡಿದೆ.


Click the Play button to hear this message in audio format

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ನೆಕ್ಕಂಟಿ ನಾಗರಾಜ್ ಅವರ ಸಂಬಂಧಿಕರಿಗೆ ಇಡಿ ನೋಟಿಸ್ ನೀಡಿದೆ. ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ ರಾವ್ ಮನೆಗೆ ಇಡಿ ತಂಡ ಭೇಟಿ ನೀಡಿದ್ದು ವೆಂಕಟೇಶ್ವರ ರಾವ್ ಈಗಾಗಲೇ ಎಸ್ಐಟಿ ಕಸ್ಟಡಿಯಲ್ಲಿದ್ದಾರೆ.

ಎರಡು ದಿನಗಳ ಹಿಂದೆ ಬಳ್ಳಾರಿ ತಾಲೂಕಿನ ಕೃಷ್ಣಾನಗರದ ಕ್ಯಾಂಪ್‌ಗೆ ಬಂದಿದ್ದ ಇಡಿ ಅಧಿಕಾರಿಗಳು, ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ ರಾವ್ ಮನೆಗೆ ಭೇಟಿ ನೀಡಿದ್ದರು. ಕೃಷ್ಣಾನಗರ ಕ್ಯಾಂಪ್‌ನಲ್ಲಿ ಕೆಲವರಿಗೆ ನೋಟಿಸ್ ನೀಡಿದ್ದಾರೆ. ಹಾಗೂ ಹಣ ವಾಪಾಸ್ ನೀಡುವಂತೆ ತಾಕೀತು ಮಾಡಿದ್ದಾರೆ. ಕೃಷ್ಣಾನಗರದ ಕ್ಯಾಂಪ್ನಲ್ಲಿರುವ ಸಂಬಂಧಿಕರಿಗೆ ವೆಂಕಟೇಶ್ವರ ರಾವ್ ಹಣ ವರ್ಗಾವಣೆ ಮಾಡಿಸಿದ್ದರು. ಶ್ರೀನಿವಾಸ ಎನ್ನುವವರು ಎಸ್ಐಟಿ ವಿಚಾರಣೆ ಹೋಗಿದ್ದು, ಹಣ ವಾಪಸ್ ನೀಡುವುದಾಗಿ ಹೇಳಿದ್ದರು. ಸೋಮವಾರ ಮತ್ತೊಮ್ಮೆ ಇಡಿ ಅಧಿಕಾರಿಗಳು ಕೃಷ್ಣಾನಗರದ ಕ್ಯಾಂಪ್‌ಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಹಣ ಹಿಂದಿರುಗಿಸನೆದ ಬಗ್ಗೆ ಕಾರಣ ನೀಡುವಂತೆ ಇಡಿ ಮತ್ತೆ ನೋಟಿಸ್ ನೀಡಿದೆ.

ಆರೋಪ ಪಟ್ಟಿ ಸಲ್ಲಿಕೆ

ಈ ಬಗ್ಗೆ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸೋಮವಾರ ನಗರದ ನ್ಯಾಯಾಲಯಕ್ಕೆ 3,072 ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದೆ. ಆರೋಪಿಗಳಾದ ಸತ್ಯನಾರಾಯಣ ವರ್ಮ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ. ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ತೇಜ, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಏನಿದು ಪ್ರಕರಣ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಾಂತರ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್‌ನವರು ಫೆ 26 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ-ಹಂತವಾಗಿ 187.33 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧೀಕ್ಷಕ ಚಂದ್ರಶೇಖರನ್ ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಯ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮೊದಲು ವಾಲ್ಮೀಕಿ ನಿಗಮದಲ್ಲಿಅವ್ಯವಹಾರ ನಡೆದಿದೆ ಎಂದು ನಿಗಮದ ಅಧಿಕಾರಿಗಳ ವಿರುದ್ಧ 5 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಈ ಅಕ್ರಮದಲ್ಲಿ ನಿಗಮದ ಎಂಡಿ ಜೆ.ಜಿ.ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್, ಯೂನಿಯನ್ ಬ್ಯಾಂಕ್ನ ಮ್ಯಾನೇಜರ್ ಶುಚಿಸ್ಮಿತಾ ರವುಲ್ ಪಾತ್ರವಿದೆ ಎಂದು ಉಲ್ಲೇಖಿಸಿದ್ದರು. ನಿಗಮದ ಎಂಡಿ ಅವರು ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ. ನಮಗೆ ಇದರ ಒಳಸಂಚು ಅರ್ಥವೇ ಆಗಲಿಲ್ಲ. ನಿಗಮಕ್ಕೆ ಇನ್ನೂ ಬ್ಯಾಂಕ್ ಪಾಸ್ಬುಕ್ ಹಾಗೂ ಚೆಕ್ ಬುಕ್ ನೀಡಿಲ್ಲ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಸರಿಯಾದ ಉತ್ತರ ನೀಡಿಲ್ಲ ಎಂದೂ ಉಲ್ಲೇಖಿಸಿದ್ದಾರೆ. ನಾನು ನಿಗಮಕ್ಕೆ ಮೋಸ ಮಾಡಿಲ್ಲ, ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ವಂಚನೆಯನ್ನೂ ಮಾಡಿಲ್ಲ. ಆದ್ರೆ, ನಿಗಮದ ಹಣವನ್ನು ನಿಯಮಬಾಹಿರವಾಗಿ ಹಣ ವರ್ಗಾವಣೆ ಆಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಕೆಲಸದ ಒತ್ತಡದಲ್ಲಿ ನಾನು ಮಾಡಿರುವ ತಪ್ಪೇನೆಂದರೆ, ಖಾತೆಯ ಚೆಕ್ ಬುಕ್ ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸಿರುವುದು ಎಂದು ತಮ್ಮ ಡೆತ್ ನೋಟ್‌ನಲ್ಲಿ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಡಿಜಿಪಿ ಉಸ್ತುವಾರಿ ಯಲ್ಲಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ಸರ್ಕಾರ ಎಸ್ಐಟಿ ರಚಿಸಿತು. ಎಸ್‌ ಐ ಟಿ ತನಿಖೆ ನಡೆಸುತ್ತಿದ್ದು, ಇದುವರೆಗೆ 12 ಜನರನ್ನು ಬಂಧಿಸಲಾಗಿದೆ.

ಇದುವರೆಗೆ ಬಂಧನವಾಗಿರುವ ಆರೋಪಿಗಳು

ವಾಲ್ಮೀಕಿ ನಿಗಮದ ಮಾಜಿ ಎಂ.ಡಿ ಜೆ.ಜಿ.ಪದ್ಮನಾಭ, ವಾಲ್ಮೀಕಿ ನಿಗಮದ ಲೆಕ್ಕಾಧೀಕ್ಷಕರು ಪರಶುರಾಮ ದುರಣ್ಣನವರ್, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ಮಾಜಿ ಸಚಿವ ನಾಗೇಂದ್ರರವರ ಪರಿಚಯಸ್ಥ ನೆಕ್ಕಂಟಿ ನಾಗರಾಜ್, ನೆಕ್ಕಂಟಿ ನಾಗರಾಜ್‌ ಭಾವಮೈದುನ ನಾಗೇಶ್ವರ ರಾವ್, ಹೈದರಾಬಾದ್ ಎಂ.ಚಂದ್ರಮೋಹನ್, ಹೈದರಬಾದ್ನ ಗಾದಿರಾಜು ಸತ್ಯನಾರಾಯಣ ವರ್ಮ, ಉಡುಪಿ ಜಿಲ್ಲೆಯ ಜಗದೀಶ ಜಿ.ಕೆ., ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶದ ಪಿಟ್ಟಲ ಶ್ರೀನಿವಾಸ, ಹೈದರಾಬಾದ್‌ನ ಸಾಯಿತೇಜ, ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ ರಾವ್ ಮೊದಲಾದವರು ಬಂಧಿತ ಆರೋಪಿಗಳು.

ಜಪ್ತಿ ವಿವರ

16.83 ಕೋಟಿ ನಗದು, 11.70 ಕೋಟಿ ಮೌಲ್ಯದ 16.256 ಕೆಜಿ ಚಿನ್ನ, 4.51 ಕೋಟಿ ರು. ಮೌಲ್ಯದ ಲ್ಯಾಂಬೋರ್ಗಿನಿ ಹಾಗೂ ಮರ್ಸಿಡಿಸ್ ಬೆಂಜ್ ಕಾರುಗಳು, ತನಿಖಾಧಿಕಾರಿಯ ಬ್ಯಾಂಕ್ ಖಾತೆಯಲ್ಲಿರುವ 3.19 ಕೋಟಿ ರು., ಇತರೆ ಬ್ಯಾಂಕ್ ಖಾತೆಗಳಲ್ಲಿ 13.72 ಕೋಟಿ ಮುಟ್ಟುಗೋಲು ಸೇರಿದಂತೆ ಒಟ್ಟು 49.96 ಕೋಟಿ ರೂಗಳನ್ನು ಇದುವರೆಗೆ ಜಪ್ತಿ ಮಾಡಲಾಗಿದೆ.

Read More
Next Story