ವಾಲ್ಮೀಕಿ ಹಗರಣ : ಸಂಪೂರ್ಣ ತನಿಖೆ ಸಿಬಿಐಗೆ ವರ್ಗಾಯಿಸಲು ಹೈಕೋರ್ಟ್‌ ಸೂಚನೆ
x

ವಾಲ್ಮೀಕಿ ಹಗರಣ : ಸಂಪೂರ್ಣ ತನಿಖೆ ಸಿಬಿಐಗೆ ವರ್ಗಾಯಿಸಲು ಹೈಕೋರ್ಟ್‌ ಸೂಚನೆ

ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ್​ ಯತ್ನಾಳ್​ ಸೇರಿದಂತೆ ಇತರರು ರಿಟ್​ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ಇಡೀ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಆದೇಶ ನೀಡಿದೆ.


ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣದ ಸಂಪೂರ್ಣ ತನಿಖೆಯ ಜವಾಬ್ದಾರಿ ಇದೀಗ ಸಿಬಿಐ ಹೆಗಲಿಗೆ ಹೋಗಿದೆ. ಅಕ್ರಮದ ಕುರಿತು ಸಮಗ್ರ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಎಸ್‌ಐಟಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಮಂಗಳವಾರ (ಜು.1) ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಮಹತ್ವದ ಆದೇಶ ನೀಡಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಮತ್ತಷ್ಟು ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಸಿಬಿಐ ಈವರೆಗೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ಹೈಕೋರ್ಟ್‌ನ ಆದೇಶದಿಂದಾಗಿ ಇನ್ನು ಸಿಬಿಐನಿಂದ ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ.

ಕೇವಲ ಬ್ಯಾಂಕ್‌ ವಿರುದ್ಧ ಮಾತ್ರ ಸಿಬಿಐ ತನಿಖೆ ನಡೆಸಿದರೆ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ. ಇದರಲ್ಲಿ ಕಾಂಗ್ರೆಸ್‌ ಸರ್ಕಾರದ ರಾಜಕೀಯ ವ್ಯಕ್ತಿಗಳು ಸೇರಿದಂತೆ ಇತರೆ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಎಸ್‌ಐಟಿ ತನಿಖೆಯಿಂದ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಸ್‌ಐಟಿ ಸರ್ಕಾರದ ಅಧೀನದಲ್ಲಿರುವುದರಿಂದ ಪಾರದರ್ಶಕತೆ ತನಿಖೆ ನಡೆಸಲಾಗುವುದಿಲ್ಲ. ಹೀಗಾಗಿ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಬಿಜೆಪಿ ಬಂಡಾಯ ಮುಖಂಡರಾದ ಬಸನಗೌಡ ಪಾಟೀಲ್​ ಯತ್ನಾಳ್​, ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮತ್ತು ಕುಮಾರ್​ ಬಂಗಾರಪ್ಪ ಅವರು ರಿಟ್​ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ಇದೀಗ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಆದೇಶ ನೀಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು. 187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್​ ಬ್ಯಾಂಕ್​ಗೆ ಅಂದರೆ, ಹೈದರಾಬಾದ್​ನ ಫಸ್ಟ್​ ಬ್ಯಾಂಕ್​​ಗೆ ವರ್ಗಾಯಿಸಲಾಗಿತ್ತು. ಫಸ್ಟ್​ ಬ್ಯಾಂಕ್​ನ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಇದೆಲ್ಲವೂ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್​ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆಯಾಗಿತ್ತು. ಹೀಗೆ ವರ್ಗಾವಣೆ ಆದ ಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದನು. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್​ ಬ್ಯಾಂಕಿಂಗ್​​, ಆರ್​​ಟಿಜಿಎಸ್, ಫೋನ್​ ಪೇ, ಗೂಗಲ್​ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರು.

ಮತ್ತೊಮ್ಮೆ ಬಂಧನ ಭೀತಿ

ನ್ಯಾಯಾಲಯದ ಆದೇಶದಿಂದ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮತ್ತೊಮ್ಮೆ ಬಂಧನ ಭೀತಿ ಶುರುವಾಗಿದೆ. ಸಿಬಿಐ ಪ್ರಕರಣದ ತನಿಖೆಯನ್ನು ಸಂಪೂರ್ಣವಾಗಿ ತೆಗೆದುಕೊಂಡ ನಂತರ ನೊಟೀಸ್‌ ನೀಡಿ ವಿಚಾರಣೆಗೆ ಕರೆಯಲಿದೆ. ಈ ವೇಳೆ ಸಮಾಧಾನಕಾರ ಉತ್ತರ ಸಿಗದಿದ್ದರೆ ಬಂಧನಕ್ಕೊಳಪಡಿಸುವ ಸಾಧ್ಯತೆ ಇದೆ. ವಾಲ್ಮೀಕಿ ಹಗರಣ ಸಂಬಂಧ ಈಗಾಗಲೇ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇಡಿ ಅಧಿಕಾರಿಗಳು ನಾಗೇಂದ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು. 187 ಕೋಟಿ ರು. ನಷ್ಟು ನಿಗಮದಲ್ಲಿನ ಹಣ ಅಕ್ರಮವಾಗಿ ಬಳಕೆಯಾಗಿದೆ ಎಂಬುದು ಇಡಿ ತನಿಖೆ ವೇಳೆ ತಿಳಿದುಬಂದಿದೆ.

ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಬಳಕೆಯಾಗಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಇತ್ತೀಚೆಗೆ ಸಂಸದ ಇ.ತುಕಾರಾಂ, ಶಾಸಕ ಕಂಪ್ಲಿ ಗಣೇಶ್‌ ಸೇರಿದಂತೆ ಇತರರ ಸ್ಥಳಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.



Read More
Next Story