ವಾಲ್ಮೀಕಿ ಹಗರಣ: ಮುಂಬೈ ಮಹಿಳೆಯ ಬಾಡಿಗೆ ಕರಾರಿನಲ್ಲಿ ಪತಿಯಾಗಿ ಮಾಜಿ ಸಚಿವ ಬಿ. ನಾಗೇಂದ್ರ ಹೆಸರು!
x

ವಾಲ್ಮೀಕಿ ಹಗರಣ: ಮುಂಬೈ ಮಹಿಳೆಯ ಬಾಡಿಗೆ ಕರಾರಿನಲ್ಲಿ ಪತಿಯಾಗಿ ಮಾಜಿ ಸಚಿವ 'ಬಿ. ನಾಗೇಂದ್ರ' ಹೆಸರು!

ಸಿಬಿಐ ನೀಡಿದ ಮಾಹಿತಿಯ ಪ್ರಕಾರ, ಮುಂಬೈಗೆ ಅಕ್ರಮವಾಗಿ ಹಣ ವರ್ಗಾವಣೆಯಾದ ನಂತರ, ಅಲ್ಲಿನ ಇಬ್ಬರು ಮಹಿಳೆಯರು ಒಟ್ಟು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ.


Click the Play button to hear this message in audio format

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ಇದೀಗ ಹೈಕೋರ್ಟ್ ಮುಂದೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದೆ. ಅಕ್ರಮ ಹಣ ವರ್ಗಾವಣೆ ಜಾಡು ಹಿಡಿದು ಹೊರಟ ತನಿಖಾ ಸಂಸ್ಥೆಗೆ, ಮುಂಬೈನ ಮಹಿಳೆಯೊಬ್ಬರು ತಮ್ಮ ಬಾಡಿಗೆ ಕರಾರು ಪತ್ರದಲ್ಲಿ ಪತಿಯ ಹೆಸರಿನ ಜಾಗದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರನ್ನು ನಮೂದಿಸಿರುವುದು ಕಂಡುಬಂದಿದೆ.

ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಸಿಬಿಐ ಈ ವಿಷಯವನ್ನು ತಿಳಿಸಿದೆ.

ಮತ್ತೆರಡು ಹೊಸ ಹಗರಣಗಳ ಪತ್ತೆ

ಸಿಬಿಐ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನ ಕುಮಾರ್, "ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಸುವಾಗ ಅಕ್ರಮ ಹಣ ವರ್ಗಾವಣೆಯ ಇನ್ನೂ ಎರಡು ಪ್ರತ್ಯೇಕ ಹಗರಣಗಳು ಬೆಳಕಿಗೆ ಬಂದಿವೆ. ಇವುಗಳ ತನಿಖೆಗೂ ನ್ಯಾಯಾಲಯ ಅನುಮತಿ ನೀಡಿದೆ. ಈ ಹಣದ ಹಾದಿಯನ್ನು ಪರಿಶೀಲಿಸಿದಾಗ ಅದು ಮುಂಬೈನ ಇಬ್ಬರು ಮಹಿಳೆಯರಿಗೆ ತಲುಪಿರುವುದು ದೃಢಪಟ್ಟಿದೆ," ಎಂದು ವಿವರಿಸಿದರು.

ಸಚಿವರಿಗೂ ಮುಂಬೈ ಮಹಿಳೆಗೂ ಏನು ಸಂಬಂಧ?

ಸಿಬಿಐ ನೀಡಿದ ಮಾಹಿತಿಯ ಪ್ರಕಾರ, ಮುಂಬೈಗೆ ಅಕ್ರಮವಾಗಿ ಹಣ ವರ್ಗಾವಣೆಯಾದ ನಂತರ, ಅಲ್ಲಿನ ಇಬ್ಬರು ಮಹಿಳೆಯರು ಒಟ್ಟು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ. "ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಇಬ್ಬರಲ್ಲಿ ಒಬ್ಬ ಮಹಿಳೆ ತನ್ನ ಮನೆಯ ಬಾಡಿಗೆ ಕರಾರು ಪತ್ರದಲ್ಲಿ (Rental Agreement), ತನ್ನ ಪತಿ 'ಬಿ. ನಾಗೇಂದ್ರ' ಎಂದು ಅಧಿಕೃತವಾಗಿ ದಾಖಲಿಸಿದ್ದಾರೆ," ಎಂದು ಸಿಬಿಐ ವಕೀಲರು ನ್ಯಾಯಾಲಯದ ಗಮನ ಸೆಳೆದರು.

ಹಣದ ಹಾದಿ ಹೀಗಿದೆ

ಜಾತಿ ಕಲ್ಯಾಣ ಇಲಾಖೆಯ ಖಾತೆಯಿಂದ ನೆಕ್ಕಂಟಿ ನಾಗರಾಜ್ ಎಂಬುವವರ ಆಪ್ತರಿಗೆ 2.17 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಅದೇ ರೀತಿ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಿಂದ ನೆಕ್ಕಂಟಿ ಅವರಿಗೆ 95 ಲಕ್ಷ ರೂಪಾಯಿ ಪಾವತಿ ಆಗಿತ್ತು. ಈ ಹಣ ಅಂತಿಮವಾಗಿ ಮುಂಬೈನ ಮಹಿಳೆಯರ ಕೈಸೇರಿದ್ದು, ಅದನ್ನು ಚಿನ್ನ ಖರೀದಿಗೆ ಬಳಸಲಾಗಿದೆ.

ಜಾಮೀನು ರದ್ದಿಗೆ ಸಿಬಿಐ ಪಟ್ಟು

ಸರ್ಕಾರದ ಬೊಕ್ಕಸದ ಹಣವನ್ನು ಈ ರೀತಿ ದುರ್ಬಳಕೆ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ವಾದಿಸಿದ ಸಿಬಿಐ, ನೆಕ್ಕಂಟಿ ನಾಗರಾಜ್ ಅವರ ಕಸ್ಟೋಡಿಯಲ್ ವಿಚಾರಣೆ ಅತ್ಯಗತ್ಯವಾಗಿದೆ ಎಂದಿದೆ. ಅಲ್ಲದೆ, ಪ್ರಭಾವಿ ವ್ಯಕ್ತಿಯಾಗಿರುವ ನಾಗೇಂದ್ರ ಅವರ ನಿರೀಕ್ಷಣಾ ಜಾಮೀನನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದೆ. ವಾದ ಆಲಿಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಪೀಠ, ನಾಗೇಂದ್ರ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.

Read More
Next Story