
ವಾಲ್ಮೀಕಿ ನಿಗಮ ಹಗರಣ | ಹಣದಲ್ಲಿ ಐಷಾರಾಮಿ ಫ್ಲ್ಯಾಟ್, 10 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ!
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಿಂದ ಎಸ್ಐಟಿ ತಂಡ ಬರೋಬ್ಬರಿ 10 ಕೆ.ಜಿ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿದೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಹಗರಣದ ಪ್ರಧಾನ ಆರೋಪಿ ಸತ್ಯನಾರಾಯಣ ವರ್ಮಾನ ಮನೆಯಿಂದ ಬರೋಬ್ಬರಿ 10 ಕೆ.ಜಿ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದಿದೆ.
ಆರೋಪಿ ಸತ್ಯನಾರಾಯಣ್ ವರ್ಮಾ ವಾಲ್ಮೀಕಿ ಹಗರಣದ ಹಣದಲ್ಲೇ ಈ ಚಿನ್ನ ಖರೀದಿಸಿದ್ದ. ಎಸ್ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದಾಗ 15 ಕೆ.ಜಿ.ಗೋಲ್ಡ್ ಕೊಡುವುದಾಗಿ ಹೇಳಿದ್ದ. ಅದರಂತೆ ತನ್ನ ಹೈದರಾಬಾದ್ ಪ್ಲಾಟ್ ನಲ್ಲಿ 10 ಕೆ.ಜಿ.ಚಿನ್ನದ ಗಟ್ಟಿ ಇಟ್ಟಿರುವುದನ್ನು ತೋರಿಸಿದ್ದಾನೆ. ಉಳಿದ ಚಿನ್ನದ ಬಿಸ್ಕೆಟ್ ಗಾಗಿ ಎಸ್ಐಟಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ವರ್ಮಾ ಇದುವರೆಗೂ ವಾಲ್ಮೀಕಿ ಹಗರಣದ ಹಣದಿಂದ ಬರೋಬ್ಬರಿ 35 ಕೆ.ಜಿ.ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದಾನೆ ಎನ್ನಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಹೈದರಾಬಾದ್ ಮೂಲದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷ ಸತ್ಯನಾರಾಯಣ ಎಂಬುವರನ್ನು ಎಸ್ ಐ ಟಿ ಅಧಿಕಾರಿಗಳು ಜೂನ್ 4ರಂದು ಹೈದರಬಾದ್‌ನಲ್ಲಿ ಬಂಧಿಸಿದ್ದರು. ಬಳಿಕ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದಾಗ ಹಣ ಹಾಗೂ ಪ್ಲಾಟ್ ಖರೀದಿ ಬಗ್ಗೆ ಬಾಯ್ಬಿಟ್ಟಿದ್ದ. ನಂತರ ಎಸ್ಐಟಿ ತಂಡ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಹೈದರಾಬಾದ್ನಲ್ಲಿರುವ ವರ್ಮಾನ ಫ್ಲಾಟ್ ಶೋಧ ಕಾರ್ಯ ನಡೆಸಿತ್ತು.
ಹೈದರಾಬಾದ್ ಸೀಮಾ ಪೇಟೆ, ಮೀಯಾ ಪುರದಲ್ಲಿ ವಾಸವಿ ಬಿಲ್ಡರ್ಸ್ನಲ್ಲಿ ತಲಾ ಎರಡು ಫ್ಲಾಟ್ ಸೇರಿ ಒಟ್ಟು 11 ಫ್ಲಾಟ್ ಖರೀದಿಸಿರುವ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿದೆ. ಹೈದರಾಬಾದ್ ಫ್ಲಾಟ್ನಲ್ಲಿ 8 ಕೋಟಿ ಹಣ ಅಡಗಿಸಿಟ್ಟಿದ್ದು ಬ್ಯಾಗ್ ನಲ್ಲಿ 8 ಕೋಟಿ ನಗದು ಸಿಕ್ಕಿದೆ. ಹಣ ಎಣಿಕೆ ಮಿಷನ್ ತರಿಸಿ ಹಣ ಎಣಿಕೆ ಮಾಡಿ ಜಪ್ತಿ ಮಾಡಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅನುದಾನ ದುರುಪಯೋಗವಾಗಿರುವುದಾಗಿ ಆರೋಪಿಸಿ ಡೆತ್ ನೋಟ್ ಬರೆದು ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 26 ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಡೆತ್‌ನೋಟ್ ಮೂಲಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರೂ.ಗಳ ಅನಧಿಕೃತ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ.
ಮಾರ್ಚ್ 2024 ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಜಿ ರೋಡ್ ಶಾಖೆಯಲ್ಲಿರುವ ನಿಗಮದ ಬ್ಯಾಂಕ್ ಖಾತೆಯಿಂದ ಅದೇ ಬ್ಯಾಂಕ್‌ನ ಇತರ ಶಾಖೆಗಳಿಗೆ ಹಣ ವರ್ಗಾವಣೆ ಮಾಡಿದ್ದು, 89.62 ಕೋಟಿ ರೂ.ಗಳನ್ನು ವಿವಿಧ ಐಟಿ ಕಂಪನಿಗಳಿಗೆ ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ಗೆ ವರ್ಗಾಯಿಸಿರುವುದು ಬೆಳಕಿಗೆ ಬಂದಿತ್ತು. ಹಗರಣದ ಕುರಿತು ಸದ್ಯ ರಾಜ್ಯ ಸರ್ಕಾರದ ಎಸ್‌ಐಟಿ, ಕೇಂದ್ರದ ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿವೆ.