ವಾಲ್ಮೀಕಿ ನಿಗಮ ಹಗರಣ | ಶಾಸಕ ನಾಗೇಂದ್ರ ಕಸ್ಟಡಿ ಇಂದು ಅಂತ್ಯ
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು 6 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತ್ತು. ಸೋಮವಾರ(ಜು.22) ಅವರ ಇಡಿ ಕಸ್ಟಡಿ ಅವಧಿ ಅಂತ್ಯವಾಗುವ ಹಿನ್ನಲೆಯಲ್ಲಿ ಇಂದು ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಿದೆ. ಬಿ.ನಾಗೇಂದ್ರ ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಕಳೆದ ಆರು ದಿನಗಳಿಂದ ನಾಗೇಂದ್ರ ಅವರನ್ನು ವಿಚಾರಣೆ ನಡೆಸುತ್ತಿರುವ ಇಡಿ, ಬಳ್ಳಾರಿ ಚುನಾವಣೆಗೆ 20 ಕೋಟಿ ಹಣ ಬಳಕೆ, ಎಲೆಕ್ಷನ್ ಮದ್ಯ ಹಂಚಿಕೂ ವಾಲ್ಮೀಕಿ ನಿಗಮದ ಹಣ ಬಳಕೆ, ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿಸಲೂ ಬಳಕೆ ಹಾಗೂ ಹಲವು ಶೆಲ್(ನಕಲಿ) ಅಕೌಂಟ್‌ಗಳಿಗೂ ನಿಗಮದ ಹಣ ವರ್ಗಾವಣೆ ಕುರಿತ ಮಾಹಿತಿ ಕೋರ್ಟ್ ಮುಂದಿಟ್ಟು ಇದೀಗ ಮತ್ತೆ ನಾಗೇಂದ್ರರನ್ನು ಕಸ್ಟಡಿಗೆ ಕೇಳಲು ಇಡಿ ತಯಾರಿ ನಡೆಸಿದೆ.
ಈ ಪ್ರಕರಣದಲ್ಲಿ ನಾಗೇಂದ್ರ ಪತ್ನಿಯನ್ನೂ ವಶಕ್ಕೆ ಪಡೆದ ಇಡಿ ಅಧಿಕಾರಿಗಳು 6 ಗಂಟೆ ಕಾಲ ವಿಚಾರಣೆ ನಡೆಸಿದ್ದರು. ಈ ವೇಳೆ ನಾಗೇಂದ್ರ ಅಕೌಂಟ್‌ನಿಂದ ಪತ್ನಿ ಅಕೌಂಟ್‌ಗೆ ಕೋಟಿ-ಕೋಟಿ ಹಣ ವರ್ಗಾವಣೆಯಾದ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೆಲ್ಲದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಕೋರ್ಟ್‌ಗೆ ಮಾಹಿತಿ ಸಾಧ್ಯತೆಯಿದೆ.
ಈಗಾಗಲೇ ಅಧಿಕಾರಿಗಳು ಶಾಂತಿನಗರದ ಇಡಿ ಆಫೀಸ್‌ನಿಂದ ಮೆಡಿಕಲ್ ಟೆಸ್ಟ್‌ಗೆ ನಾಗೇಂದ್ರರನ್ನು ಬೌರಿಂಗ್ ಆಸ್ಪತ್ರೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ಬಿಗಿ ಭದ್ರತೆಯಲ್ಲಿ ನಾಗೇಂದ್ರ ಅವರನ್ನು ಜನಪತ್ರಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಿದೆ.
ಈ ಪ್ರಕರಣದಲ್ಲಿ ಜುಲೈ 12ರಂದು ನಾಗೇಂದ್ರ ಅವರನ್ನು ಇ.ಡಿ ಬಂಧಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಗೇಂದ್ರ ಅವರನ್ನು ಜುಲೈ 18ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಬೇಕು ಎಂದು ಇ.ಡಿ ಕೋರಿದ್ದ ಕಾರಣ, ನ್ಯಾಯಾಲಯವು ಜುಲೈ 22ರವರೆಗೆ ಕನ್ನಡಿ ವಿಸ್ತರಿಸಿತ್ತು. ಸೋಮವಾರ ನಾಗೇಂದ್ರ ಅವರ ಕಸ್ಟಡಿ ಅವಧಿ ಅಂತ್ಯವಾಗಲಿದೆ. ಅವರ ಕಸ್ಟಡಿ ವಿಸ್ತರಿಸುವಂತೆ ಇ.ಡಿ ಮತ್ತೆ ನ್ಯಾಯಾಲಯವನ್ನು ಕೋರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.