ವಾಲ್ಮೀಕಿ ನಿಗಮ ಹಗರಣ| ಆ. 3 ರವರೆಗೆ ಶಾಸಕ ನಾಗೇಂದ್ರಗೆ ನ್ಯಾಯಾಂಗ ಬಂಧನ
x

ವಾಲ್ಮೀಕಿ ನಿಗಮ ಹಗರಣ| ಆ. 3 ರವರೆಗೆ ಶಾಸಕ ನಾಗೇಂದ್ರಗೆ ನ್ಯಾಯಾಂಗ ಬಂಧನ


ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಆಗಸ್ಟ್ 3ರವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನ ಜಾರಿ ನಿರ್ದೇಶನಾಲಯ ಬಂಧಿಸಿ ವಿಚಾರಣೆ ನಡೆಸಿತ್ತು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬಿ.ನಾಗೇಂದ್ರ ಅವರನ್ನ ಹಾಜರುಪಡಿಸಲಾಗಿತ್ತು. ಇಡಿ ಅಧಿಕಾರಿಗಳು ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರಿಗೆ ಆಗಸ್ಟ್ 3ರವರೆಗೆ ಅಂದರೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.

ಹಗರಣದ ಆರೋಪಿ ಸತ್ಯನಾರಾಯಣ ವರ್ಮನನ್ನು ಬಾಡಿವಾರೆಂಟ್​​ ಮೇಲೆ ನಮಗೆ ನೀಡಿ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸತ್ಯನಾರಾಯಣ ವರ್ಮನನ್ನು ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದು, ಸದ್ಯ ಆರೋಪಿ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ರವಿವಾರ ಪರಪ್ಪನ ಅಗ್ರಹಾರಕ್ಕೆ ತೆರಳಿ ಸತ್ಯನಾರಾಯಣ ವರ್ಮನನ್ನು ವಿಚಾರಣೆ ನಡೆಸಿದ್ದರು.

ಏನಿದು ಹಗರಣ?

ರಾಜ್ಯ ರಾಜಕಾರಣದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಭಾರಿ ಸದ್ದು ಮಾಡುತ್ತಿದೆ. ಈ ನಿಗಮದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಎಸ್‌ಐಟಿ ಬಂಧಿಸಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ (ಜು.10) ಬೆಳ್ಳಂಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​​ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ನಿಗಮದ ಹಣ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ಈ ಬಗ್ಗೆ ಬಸನಗೌಡ ದದ್ದಲ್​ ಮತ್ತು ನಾಗೇಂದ್ರ ನಿವಾಸದಲ್ಲಿ ಮಹತ್ವದ ದಾಖಲೆಗಳ ಪತ್ತೆಯಾಗಿವೆ ಎಂದು ಇಡಿ ಪ್ರಕಟಣೆ ಮೂಲಕ ತಿಳಿಸಿತ್ತು.

ಈ ಎಲ್ಲ ಅಂಶಗಳನ್ನು ಇಡಿ ಅಧಿಕಾರಿಗಳು ಗಮನದಲ್ಲಿ ಇಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಂಧಿಸಿದ್ದರು. ಇದೀಗ ಬಿ. ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Read More
Next Story