ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರಗೆ ಜಾಮೀನು
x
ಸಚಿವ ನಾಗೇಂದ್ರ

ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರಗೆ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಾಜಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


Click the Play button to hear this message in audio format

ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಜಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ 82 ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

ಜಾಮೀನಿನ ಮೇಲೆ ಹೊರಗೆ ಬರಲು 2 ಲಕ್ಷ ರೂ. ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ನೀಡುವಂತೆ ಕೋರ್ಟ್‌ ಆದೇಶಿಸಿದೆ. ಸೋಮವಾರ ಸಂಜೆ ವೇಳೆ ಜಾಮೀನು ಮಂಜೂರು ಆಗಿದ್ದು, ಈ ಆದೇಶವನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸಿ, ಷರತ್ತುಗಳನ್ನು ಪೂರೈಸಿದ ನಂತರ ನಾಗೇಂದ್ರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಆ ಹಿನ್ನಲೆಯಲ್ಲಿ ಮಂಗಳವಾರ ನಾಗೇಂದ್ರ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಯಿದೆ.

ಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಸಚಿವರ ಸೂಚನೆ ಮೇರೆಗೆ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಡೆತ್‌ನೋಟ್‌ ಬರೆದಿತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲಿಯೇ ತನಿಖೆ ನಡೆಸಿ, ನಿಗಮದ ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಇಡಿ, ಸಚಿವ ಬಿ. ನಾಗೇಂದ್ರ ಅವರ ಕೈವಾಡವಿರುವುದನ್ನು ಪತ್ತೆ ಮಾಡಿತ್ತು. ಈ ನಡುವೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಳಿಕ ಮಾಜಿ ಸಚಿವ ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದು ವಿಚಾರಣೆ ಆರಂಭಿಸಿತ್ತು. ಇದಾದ ನಂತರ, ಅವರ ಮೇಲಿನ ಆರೋಪಗಳು ದೃಢವಾಗುತ್ತಿದ್ದಂತೆ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ನಂತರ ವಾರ್ಜ್‌ ಶೀಟ್ ಸಲ್ಲಿಕೆ ಮಾಡಲಾಗಿದ್ದು, ಆರೋಪಿ ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಕೋರ್ಟ್ ಆದೇಶದ ಮೇರೆಗೆ ಜು.12ರಿಂದ ನ್ಯಾಯಾಂಗ ಬಂಧನದಲ್ಲಿದ್ದ ನಾಗೇಂದ್ರ ಅವರಿಗೆ ಇದೀಗ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಬಿ ನಾಗೇಂದ್ರ ಅವರು ಜೈಲಿನಿಂದ ಹೊರಬರಲಿದ್ದಾರೆ.

Read More
Next Story