ವಾಲ್ಮೀಕಿ ನಿಗಮ ಹಗರಣ| ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡ ಹೊರಕ್ಕೆ: ಶ್ರೀರಾಮುಲು
x

ವಾಲ್ಮೀಕಿ ನಿಗಮ ಹಗರಣ| ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡ ಹೊರಕ್ಕೆ: ಶ್ರೀರಾಮುಲು


ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಇ.ಡಿ. ದಾಳಿಯಿಂದ ಇನ್ನಷ್ಟು ಕರ್ಮಕಾಂಡಗಳು ಹೊರಕ್ಕೆ ಬರಲಿದೆ ಎಂದು ರಾಜ್ಯದ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದಂತೆ ಎಂಬಂತೆ ಈ ಸರಕಾರ ವರ್ತಿಸುತ್ತಿದೆ. ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಬುಡಕಟ್ಟು ಸಮುದಾಯ, ಪರಿಶಿಷ್ಟ ಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಪಡಿಸುವ ಉದ್ದೇಶದಿಂದ ರಚಿಸಲಾಗಿತ್ತು ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಹಲವು ತಿಂಗಳಿನಿಂದ ಬಿಜೆಪಿ ಹೋರಾಟ ನಡೆದಿದೆ. ನಾಗೇಂದ್ರ ಅವರ ಮನೆಯ ಮೇಲೆ, ಆಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿದೆ. ಅನೇಕ ದಾಖಲಾತಿಗಳ ಪರಿಶೀಲನೆ ನಡೆದಿದೆ. ಒಂದೆಡೆ ಎಸ್‍ಐಟಿ ವಿಚಾರಣೆಯೂ ಇದೆ ಎಂದ ಅವರು, ಇ.ಡಿ. 18 ಕಡೆಗಳಲ್ಲಿ ದಾಳಿ ನಡೆಸಿದೆ. ಯೂನಿಯನ್ ಬ್ಯಾಂಕಿನವರು ಸಿಬಿಐಗೆ ದೂರು ಕೊಟ್ಟ ಕಾರಣ ಅದರ ಆಧಾರದಲ್ಲಿ ಇ.ಡಿ. ದಾಳಿ ನಡೆಯುತ್ತಿರಬಹುದು ಎಂದು ಅವರು ತಿಳಿಸಿದರು.

ವಾಲ್ಮೀಕಿ ನಿಗಮದಿಂದ ನಾಗೇಂದ್ರರ ಪಿ.ಎ. ಆಗಿದ್ದ ಹರೀಶ್ ಎಂಬವರ ಖಾತೆಗೆ 80 ಲಕ್ಷ ಹಣ ವರ್ಗಾವಣೆ ಆಗಿದೆ ಎಂದ ಅವರು, ಇಡಿಯನ್ನು ಆಹ್ವಾನಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ದಾಳಿ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಸರಕಾರವು ಈ ದೊಡ್ಡ ಹಗರಣದ ಭಾಗೀದಾರ ಎಂದು ಆರೋಪಿಸಿದರು.

ರಾಜ್ಯದ ಜನರು ನಾಚಿಕೆ ಇಲ್ಲದ ಸರಕಾರ ಎನ್ನುತ್ತಿದ್ದಾರೆ. ಕಳ್ಳರ ಸರಕಾರ ಎಂದು ಮಾತನಾಡುತ್ತಿದ್ದಾರೆ. ದರೋಡೆ ನಡೆದ ನಂತರ ಕಳ್ಳರನ್ನು ಹಿಡಿಯಬೇಕಿದೆ. ಇ.ಡಿಯವರು ಬಂದು ಕಳ್ಳರ ಉಪಾಧ್ಯಕ್ಷನನ್ನು ಹಿಡಿದಿದ್ದಾರೆ. ಅಧ್ಯಕ್ಷರು ಯಾರು ಎಂದು ಗೊತ್ತಾಗಿಲ್ಲ ಎಂದು ವಿಶ್ಲೇಷಿಸಿದರು. ಅಧ್ಯಕ್ಷರ ಪತ್ತೆಗೆ ಇ.ಡಿ. ಮುಂದಾಗಿದೆ ಎಂದರು.

Read More
Next Story