ವಾಲ್ಮೀಕಿ ನಿಗಮ ಹಗರಣ | 5 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
x

ವಾಲ್ಮೀಕಿ ನಿಗಮ ಹಗರಣ | 5 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂ. ಹಗರಣಕ್ಕೆ ಸಂಬಂಧ ಇಡಿ ಅಧಿಕಾರಿಗಳು 5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.


ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು 5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮುಟ್ಟುಗೋಲು ಹಾಕಿಕೊಂಡ ಸ್ಥಿರ ಆಸ್ತಿಗಳು ಉದ್ಯಮಿಗಳಾದ ನೆಕ್ಕೆಂಟಿ ನಾಗರಾಜ್, ಚಂದ್ರ ಮೋಹನ್, ಗೋಲಪಲ್ಲಿ ಕಿಶೋರ್ ರೆಡ್ಡಿ, ಎಟಕೇರಿ ಸತ್ಯನಾರಾಯಣ ಅವರಿಗೆ ಸೇರಿದ ರೂ. 4.45 ಕೋಟಿ ಮೌಲ್ಯದ ಭೂಮಿ ಮತ್ತು ಫ್ಲಾಟ್‌ಗಳ ರೂಪದಲ್ಲಿವೆ. ಚರಾಸ್ತಿ 50 ಲಕ್ಷ ರೂ. ಮೊತ್ತದ ಬ್ಯಾಂಕ್ ಖಾತೆಗಳ ರೂಪದಲ್ಲಿ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನಲ್ಲಿದೆ ಎಂದು ಇಡಿ ತಿಳಿಸಿದೆ.

2024ರ ಮೇ 26ರಂದು ನಿಗಮದ ಉದ್ಯೋಗಿ ಚಂದ್ರಶೇಖರ್ ಅವರ ಆತ್ಮಹತ್ಯೆಯ ನಂತರ ಪ್ರಕರಣ ಬೆಳಕಿಗೆ ಬಂದಿತು. ರಾಜ್ಯ ಪೊಲೀಸರು ಮತ್ತು ಸಿಬಿಐ ದಾಖಲಿಸಿದ ಎಫ್‌ಐಆರ್‌ ಆಧಾರದ ಮೇಲೆ ಇಡಿ ತನಿಖೆ ಕೈಗೊಂಡಿದೆ. ಆರೋಪಿಗಳು ನಿಗಮದ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ನಕಲಿ ದಾಖಲೆಗಳ ಮೂಲಕ ರೂ. 89.63 ಕೋಟಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೇ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಜೈಲಿಗೆ ಹೋಗಿದ್ದರು. ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

ಇಡಿ ನಡೆಸಿದ ತನಿಖೆಯಲ್ಲಿ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ನಕಲಿ ಖಾತೆ ತೆರೆಯಲಾಯಿತು. ಆ ಖಾತೆಗೆ ನಿಗಮದ ನಿಧಿಯನ್ನು ವರ್ಗಾಯಿಸಿ, ಬಳಿಕ 18 ನಕಲಿ ಖಾತೆಗಳ ಮೂಲಕ 89.63 ಕೋಟಿ ರೂ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್‌ಗೆ ವರ್ಗಾಯಿಸಲಾಗಿತ್ತು. ಹಣವನ್ನು ಶೆಲ್ ಖಾತೆಗಳು, ನಗದು ಮತ್ತು ಬೆಳ್ಳಿಯ ರೂಪದಲ್ಲಿ ಆರೋಪಿಗಳ ನಡುವೆ ಹಂಚಿಕೊಳ್ಳಲಾಯಿತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಹಗರಣದ ಹಣವನ್ನು ಬಳ್ಳಾರಿ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಬಳಸಲಾಗಿದೆ. ಅಲ್ಲದೇ, ಹಣದಿಂದ ಲ್ಯಾಂಬೋರ್ಘಿನಿ ಸೇರಿದಂತೆ ಐಷಾರಾಮಿ ಕಾರುಗಳು ಖರೀದಿಸಲಾಗಿದೆ. ವಸತಿ ಪ್ರವೇಶ ಪೂರೈಕೆದಾರರು, ಬೆಳ್ಳಿಯ ವ್ಯಾಪಾರಿಗಳು ಮತ್ತು ಕಾರು ವ್ಯಾಪಾರಿಗಳು ಈ ಸಂಗತಿಗಳನ್ನು ದೃಢಪಡಿಸಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳು ಅಕ್ರಮವಾಗಿ ಗಳಿಸಿದ ಆದಾಯವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿರುವುದರಿಂದ, 5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ತನಿಖೆ ಇನ್ನೂ ಮುಂದುವರಿದಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

Read More
Next Story