ವಾಲ್ಮೀಕಿ ನಿಗಮದ ಹಗರಣ | ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹ: ಬಿಜೆಪಿಯಿಂದ ರಾಜಭವನ ಚಲೋ
x

ವಾಲ್ಮೀಕಿ ನಿಗಮದ ಹಗರಣ | ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹ: ಬಿಜೆಪಿಯಿಂದ ರಾಜಭವನ ಚಲೋ


ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಗುರುವಾರ ರಾಜಭವನ ಚಲೋ ನಡೆಸಿತು.

ಗುರುವಾರ ಬೆಳಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದಿಂದ ರಾಜಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಪ್ರಮುಖ ಬಿಜೆಪಿ ಶಾಸಕರು ಈ ರಾಜಭವನ ಚಲೋದಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ʻʻವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಸಚಿವರ ಒಪ್ಪಿಗೆ ಪಡೆದು ತೆಲಂಗಾಣ ಮತ್ತು ಹೈದರಾಬಾದ್‌ನಲ್ಲಿನ ಫೇಕ್‌ ಅಕೌಂಟ್‌ಗಳಿಗೆ ವರ್ಗಾಯಿಸಲಾಗಿದೆ. ಭ್ರಷ್ಟಾಚಾರ ಮಾಡಿದ ಇಂತಹ ಕಳಂಕಿತ ಸಚಿವ ಬಿ. ನಾಗೇಂದ್ರ ಅವರು ತತಕ್ಷಣವೇ ರಾಜೀನಾಮೆ ನೀಡಬೇಕುʼʼ ಎಂದು ಒತ್ತಾಯಿಸಿದ್ದಾರೆ.

ರಾಜಭವನ ಚಲೋ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ʻʻಇದೊಂದು ಕಿವುಡು ಸರ್ಕಾರ ಎಂದು ರಾಜ್ಯಪಾರಿಗೆ ತಿಳಿಸಲಿದ್ದೇವೆ. ರಾಜ್ಯಪಾಲರು, ಸಂವಿಧಾನಾತ್ಮಕ ಅಧಿಕಾರ ಬಳಸಿ ಈ ಸಚಿವರನ್ನು ವಜಾ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆʼʼ ಎಂದು ತಿಳಿಸಿದರು.

ʻʻಬ್ಯಾಂಕಿನ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಸ್ವಯಂಪ್ರೇರಿತವಾಗಿ ಎಫ್‍ಐಆರ್ ದಾಖಲಿಸಿದೆ. ಇದು ಸರ್ಕಾರದ ಕಪಾಳಕ್ಕೆ ಹೊಡೆದ ಹಾಗೆ ಆಗಿದೆʼʼ ಎಂದು ವಿಶ್ಲೇಷಿಸಿದರು. ಸಂವೇದನಾಶೀಲ ಸರ್ಕಾರವು ತಾನು ಸಾಚಾ ಇರುವುದಾಗಿ ತೋರಿಸಲು ಸಿಬಿಐಗೆ ತನಿಖೆ ವಹಿಸಬೇಕಿತ್ತು. ಅದರಲ್ಲಿ ನಿರ್ಲಜ್ಜತೆ ತೋರಿದ ಪರಿಣಾಮವಾಗಿ ಇವತ್ತು ಸಿಬಿಐ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತಾಗಿದೆ. ಈ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ, ಭ್ರಷ್ಟರ ರಕ್ಷಣೆಗೆ ಯಾವ ರೀತಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಂತಿದೆʼʼ ಎಂದು ಕಿಡಿಕಾರಿದರು.

ʻʻವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದೆ. ಆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರರ ರಾಜೀನಾಮೆ ಪಡೆಯುವ ವಿಚಾರದಲ್ಲಿ ಇಲ್ಲಿನವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆʼʼ ಎಂದು ತಿಳಿಸಿದರು.

ʻʻಬಿಜೆಪಿ ಈ ಸರ್ಕಾರಕ್ಕೆ ಇದೇ 6ರವರೆಗೆ ಗಡುವು ನೀಡಿತ್ತು. ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟ 187 ಕೋಟಿ ದುರ್ಬಳಕೆ ಆಗಿದೆ. 187 ಕೋಟಿ ವಾಪಸ್ ತಂದು ಆ ವರ್ಗದವರಿಗೆ ಮುಟ್ಟಿಸುವವರೆಗೂ ಬಿಜೆಪಿ ತನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲʼʼ ಎಂದು ಅವರು ಎಚ್ಚರಿಕೆ ನೀಡಿದರು.

ಏನಿದು ಹಗರಣ?

ವಾಲ್ಮೀಕಿ ನಿಗಮದಿಂದ 90 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕ್ ವಸಂತ ನಗರ ಶಾಖೆಗೆ ವರ್ಗಾಯಿಸಲಾಗಿತ್ತು. ಬಳಿಕ ಅಲ್ಲಿಂದ ಹೈದರಬಾದ್ ನ ಫಸ್ಟ್‌ ಫೈನಾನ್ಸ್ ಕೋ ಅಪರೇಟಿವ್ ಸೊಸೈಟಿಗೆ ಸೇರಿದ 18 ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪ ಇದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಎಸ್ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತಂಡ ಸಚಿವ ಆಪ್ತನೊಬ್ಬನನ್ನು ಬಂಧಿಸಿದೆ. ಸಚಿವರ ಪಾತ್ರದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಗಳು ತೀವ್ರಗೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ನಾಗೇಂದ್ರ ಅವರ ಬಳಿ ರಾಜೀನಾಮೆಗೆ ತಿಳಿಸಿದಾಗ ಪ್ರತಿಯಾಗಿ ನಾಗೇಂದ್ರ ಅವರು ಸಿಎಂಗೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಈ ಆರೋಪವನ್ನು ಅಲ್ಲಗೆಳೆದಿದ್ದು ನಾನು ಯಾರಿಗೂ ರಾಜೀನಾಮೆ ಕೇಳಿಲ್ಲ, ನನಗೆ ಯಾರೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲದೆ ಎಸ್ ಐಟಿ ತನಿಖೆಯ ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು.

Read More
Next Story