
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ದಟ್ಟಣೆಗೆ ಶೀಘ್ರವೇ ಪರಿಹಾರ; ಸಬ್ ಅರ್ಬನ್ ರೈಲು ಕಾಮಗಾರಿಗೆ ವೇಗ- ಸೋಮಣ್ಣ
ಸಬ್ ಅರ್ಬನ್ ರೈಲು ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಗಡುವಿನ ಬಗ್ಗೆ ಸ್ಪಷ್ಟನೆ ನೀಡಿದ ರೈಲ್ವೆ ಖಾತೆಯ ರಾಜ್ಯ ಸಚಿವ ಸೋಮಣ್ಣ, "ಡೆಡ್‌ಲೈನ್ ಬಗ್ಗೆ ಖಡಾಖಂಡಿತವಾಗಿ ಹೇಳಲಾಗದು. ಆದರೆ, ಶೀಘ್ರ ಪರಿಹಾರ ದೊರಕಲಿದೆ ಎಂದರು.
ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸುವ ಬಹುನಿರೀಕ್ಷಿತ 'ಬೆಂಗಳೂರು ಸಬ್ ಅರ್ಬನ್ ರೈಲ್ವೆ' ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
"ಈ ಹಿಂದೆ ನಾನು ರಾಜ್ಯದಲ್ಲಿ ಮೂಲಸೌಕರ್ಯ ಸಚಿವನಾಗಿದ್ದಾಗ, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ನಾವೆಲ್ಲರೂ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಸಬ್ ಅರ್ಬನ್ ರೈಲ್ವೆ ಯೋಜನೆಯ ಬಗ್ಗೆ ವಿಶೇಷ ಮನವಿ ಮಾಡಿದ್ದೆವು. ಅಂದು ಹಾಕಿದ ಅಡಿಪಾಯ ಇಂದು ಕಾರ್ಯರೂಪಕ್ಕೆ ಬರುತ್ತಿದೆ" ಎಂದು ಹಳೆಯ ದಿನಗಳನ್ನು ಸ್ಮರಿಸಿದರು.
ಯೋಜನೆಯ ಪ್ರಗತಿಯ ಬಗ್ಗೆ ವಿವರಿಸಿದ ಅವರು, "ಈಗ ಯೋಜನೆಗೆ ಒಂದು ತಾರ್ಕಿಕ ಅಂತ್ಯ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸತತ ಮಾತುಕತೆಗಳು ನಡೆದಿವೆ. ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಅತ್ಯಂತ ಪೂರಕವಾದ ವಿಚಾರವಾಗಿದ್ದು, ನಗರದ ಸಾರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲಿದೆ" ಎಂದಿದ್ದಾರೆ.
ಅನೇಕರು ನಿರೀಕ್ಷಿಸುತ್ತಿರುವ ಕಾಮಗಾರಿ ಪೂರ್ಣಗೊಳ್ಳುವ ಸಮಯದ ಬಗ್ಗೆ ಸ್ಪಷ್ಟನೆ ನೀಡಿದ ಸೋಮಣ್ಣ, "ಡೆಡ್‌ಲೈನ್ ಬಗ್ಗೆ ಈಗಲೇ ಖಡಾಖಂಡಿತಯಾಗಿ ಹೇಳಲು ಸಾಧ್ಯವಿಲ್ಲ. ಭೂಸ್ವಾಧೀನ ಸೇರಿದಂತೆ ಕೆಲವು ತಾಂತ್ರಿಕ ಅಡೆತಡೆಗಳಿಂದಾಗಿ ಯೋಜನೆ ಸ್ವಲ್ಪ ವಿಳಂಬವಾಗಿದೆ. ಆದರೆ, ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಗುರಿʼʼ ಎಂದು ತಿಳಿಸಿದ್ದಾರೆ.
ಯೋಜನೆಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಮತ್ತು ರೈಲ್ವೆ ಇಲಾಖೆಯ ಹೊಸ ಎಂಡಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ಸೋಮಣ್ಣ ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮುಂದಿನ ಹಂತದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದೇ ವೇಳೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ನಗರದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಬದಲು ಕೇವಲ ಟೀಕೆ ಮತ್ತು ಅಪ್ರಾಯೋಗಿಕ ಯೋಜನೆಗಳ ಮೂಲಕ ಕಾಲಹರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಈಗ ಜಾಗತಿಕ ವಾಸಸ್ಥಾನ ವಿಶ್ವದಲ್ಲೇ ಬೆಂಗಳೂರು ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ಒಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ದೇಶದ ಮೂಲೆ ಮೂಲೆಯಲ್ಲಿರುವವರೆಲ್ಲರೂ ಇಂದು ಬೆಂಗಳೂರಿಗೆ ಬಂದು ವಾಸಿಸುತ್ತಿದ್ದಾರೆ. ಒಮ್ಮೆ ಇಲ್ಲಿಗೆ ಬಂದವರು ಮತ್ತೆ ವಾಪಸ್ ಹೋಗುತ್ತಿಲ್ಲ. ಇಲ್ಲಿನ ಹವಾಮಾನ ಮತ್ತು ಐಟಿ-ಬಿಟಿ ಉದ್ಯಮದ ಕಾರಿಡಾರ್‌ಗಳು ಜನರನ್ನು ಸೆಳೆಯುತ್ತಿವೆ. ಹೀಗಿರುವಾಗ ಭವಿಷ್ಯದ ದೃಷ್ಟಿಯಿಂದ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೇ ಹೊರತು ರಾಜಕೀಯ ಮಾಡಬಾರದು" ಎಂದರು.
ಅಂಡರ್‌ಗ್ರೌಂಡ್ ಯೋಜನೆಗೆ ವಿರೋಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ 'ಟನಲ್ ರಸ್ತೆ' ಯೋಜನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಸೋಮಣ್ಣ, "ಅಂಡರ್‌ಗ್ರೌಂಡ್ ಮಾಡುತ್ತೇನೆ ಎಂದು ಹೇಳಿಕೊಂಡು ಕಾಲಹರಣ ಮಾಡುವುದು ಸರಿಯಲ್ಲ. ಇಂತಹ ಯೋಜನೆಗಳ ಹೆಸರಿನಲ್ಲಿ ಸಮಯ ವ್ಯರ್ಥ ಮಾಡುವುದು ರಾಜಕೀಯವೇ ಹೊರತು ಅಭಿವೃದ್ಧಿಯಲ್ಲ. ಕೇವಲ ಟೀಕೆಗಳನ್ನು ಮಾಡಿಕೊಂಡು ಕೂರುವುದಕ್ಕಿಂತ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು" ಎಂದು ಟೀಕಿಸಿದ್ದಾರೆ.
ಅಭಿವೃದ್ಧಿಯೇ ಮುಖ್ಯ ಗುರಿ ನಗರದ ಜನಸಂಖ್ಯೆ ಮತ್ತು ವಾಹನಗಳ ಒತ್ತಡಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ರಸ್ತೆ ಮತ್ತು ರೈಲ್ವೆ ಸಂಪರ್ಕವನ್ನು ವಿಸ್ತರಿಸುವ ಅಗತ್ಯವಿದೆ. ಕೇಂದ್ರ ಸರ್ಕಾರವು ರೈಲ್ವೆ ಯೋಜನೆಗಳ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬದ್ಧವಾಗಿದೆ. ಆದರೆ ರಾಜ್ಯ ಸರ್ಕಾರವು ಕೇವಲ ಯೋಜನೆಗಳ ಘೋಷಣೆ ಮಾಡದೆ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

