
ಅಮೆರಿಕ ಪೌರತ್ವಕ್ಕೆ 'ಗೋಲ್ಡ್ ಕಾರ್ಡ್' ಆಫರ್: 1 ಮಿಲಿಯನ್ ಡಾಲರ್ ನೀಡಿದರೆ ಸಿಗಲಿದೆ ಗ್ರೀನ್ ಕಾರ್ಡ್!
ಈ ಯೋಜನೆಗೆ ಅರ್ಜಿ ಸಲ್ಲಿಸುವವರ ಹಿನ್ನೆಲೆ ಪರಿಶೀಲನೆಗಾಗಿ (Vetting) ಹೆಚ್ಚುವರಿಯಾಗಿ 15,000 ಡಾಲರ್ ಶುಲ್ಕ ವಿಧಿಸಲಾಗುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ತಿಳಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬಹುನಿರೀಕ್ಷಿತ 'ಗೋಲ್ಡ್ ಕಾರ್ಡ್' (Gold Card) ಯೋಜನೆಯನ್ನು ಬುಧವಾರ (ಡಿ.10) ಅಧಿಕೃತವಾಗಿ ಜಾರಿಗೆ ತಂದಿದ್ದಾರೆ. ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಮತ್ತು ಪೌರತ್ವ ಪಡೆಯಲು ಬಯಸುವ ವಿದೇಶಿಗರಿಗೆ ಇದೊಂದು 'ದುಬಾರಿ ಆದರೆ ತ್ವರಿತ' ಮಾರ್ಗ.
ಈ ಯೋಜನೆಯ ಪ್ರಕಾರ, 1 ಮಿಲಿಯನ್ ಡಾಲರ್ (ಅಂದಾಜು 8 ಕೋಟಿಗೂ ಹೆಚ್ಚು ರೂಪಾಯಿ) ಶುಲ್ಕ ಪಾವತಿಸುವ ವ್ಯಕ್ತಿಗಳಿಗೆ ಅಮೆರಿಕದಲ್ಲಿ ಕಾನೂನುಬದ್ಧವಾಗಿ ನೆಲೆಸಲು ಮತ್ತು ಪೌರತ್ವದ ಹಾದಿಯನ್ನು ಸುಗಮಗೊಳಿಸಲು ಅವಕಾಶ ನೀಡಲಾಗಿದೆ.
ಶ್ವೇತಭವನದಲ್ಲಿ ಉದ್ಯಮಿಗಳ ಸಮ್ಮುಖದಲ್ಲಿ ಮಾತನಾಡಿದ ಟ್ರಂಪ್, ಈ ಯೋಜನೆಯ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಈ ಯೋಜನೆಯಡಿ ಕೇವಲ ವ್ಯಕ್ತಿಗಳಷ್ಟೇ ಅಲ್ಲದೆ, ಕಾರ್ಪೊರೇಟ್ ಕಂಪನಿಗಳು ಕೂಡ ತಮ್ಮ ವಿದೇಶಿ ಉದ್ಯೋಗಿಗಳಿಗಾಗಿ ಈ ಕಾರ್ಡ್ ಖರೀದಿಸಬಹುದಾಗಿದೆ. ಆದರೆ, ಕಂಪನಿಗಳು ಪ್ರತಿ ಉದ್ಯೋಗಿಗೆ 2 ಮಿಲಿಯನ್ ಡಾಲರ್ ಪಾವತಿಸಬೇಕಾಗುತ್ತದೆ. ಇದು 1990ರಲ್ಲಿ ಜಾರಿಗೆ ಬಂದಿದ್ದ, ಉದ್ಯೋಗ ಸೃಷ್ಟಿ ಆಧಾರಿತ ಇಬಿ-5 (EB-5) ವೀಸಾ ವ್ಯವಸ್ಥೆಗೆ ಬದಲಿಯಾಗಿ ಅಥವಾ ಅದರ ಮುಂದುವರಿದ ಭಾಗವಾಗಿ ಜಾರಿಗೆ ಬರುತ್ತಿದೆ. ಈ ಯೋಜನೆಯಿಂದ ಬರುವ ಹಣ ನೇರವಾಗಿ ಅಮೆರಿಕ ಸರ್ಕಾರದ ಖಜಾನೆಗೆ ಸೇರಲಿದ್ದು, ದೇಶದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
ವೀಸಾ ಸಮಸ್ಯೆಗೆ ಪರಿಹಾರ
ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ ಭಾರತ, ಚೀನಾ ಮತ್ತು ಫ್ರಾನ್ಸ್‌ನಂತಹ ದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳು ವೀಸಾ ಸಮಸ್ಯೆಯಿಂದಾಗಿ ಅಮೆರಿಕ ತೊರೆಯುತ್ತಿದ್ದಾರೆ. ಅಂತಹ ಅತ್ಯುತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಉದ್ಯಮಗಳಿಗೆ ನೇಮಕಾತಿ ಸುಲಭವಾಗಿಸಲು ಈ 'ಗೋಲ್ಡ್ ಕಾರ್ಡ್' ಸಹಕಾರಿಯಾಗಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. "ಇದು ಸಾಮಾನ್ಯ ಗ್ರೀನ್ ಕಾರ್ಡ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ," ಎಂದು ಅವರು ಬಣ್ಣಿಸಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವವರ ಹಿನ್ನೆಲೆ ಪರಿಶೀಲನೆಗಾಗಿ (Vetting) ಹೆಚ್ಚುವರಿಯಾಗಿ 15,000 ಡಾಲರ್ ಶುಲ್ಕ ವಿಧಿಸಲಾಗುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ತಿಳಿಸಿದ್ದಾರೆ. ಟ್ರಂಪ್ ಅವರ ಕಠಿಣ ವಲಸೆ ನೀತಿಗಳ ನಡುವೆಯೂ, ಹಣ ಪಡೆದು ಪೌರತ್ವ ನೀಡುವ ಈ ನಡೆ ಅವರ ಕೆಲವು ಬೆಂಬಲಿಗರ ವಲಯದಲ್ಲಿ ಅಸಮಾಧಾನ ಮೂಡಿಸಿದ್ದರೂ, ಆರ್ಥಿಕವಾಗಿ ಸಬಲರಾದ ಕೌಶಲ್ಯಯುತ ವಲಸಿಗರಿಗೆ ಮಣೆ ಹಾಕಲು ಸರ್ಕಾರ ನಿರ್ಧರಿಸಿದೆ.

