ಪ್ರತಿಪಕ್ಷದ ಸದಸ್ಯರಿಂದ ಗಲಾಟೆ: ಸೋಮವಾರಕ್ಕೆ ಕಲಾಪ ಮುಂದೂಡಿಕೆ
x

ಪ್ರತಿಪಕ್ಷದ ಸದಸ್ಯರಿಂದ ಗಲಾಟೆ: ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಸದನದ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವ ಪ್ರಕ್ರಿಯೆ ಆರಂಭಿಸಿದರು. ಇದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು.


ಬೆಂಗಳೂರು: ಸದನದ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವ ಪ್ರಕ್ರಿಯೆ ಆರಂಭಿಸಿದರು. ಇದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು ಹಾಗಾಗಿ ವಿಧಾನಸಭೆ ಕಲಾಪವನ್ನು ಸೋಮವಾರ (ಫೆ.26) ದವರೆಗೆ ಮುಂದೂಡಲಾಗಿದೆ.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಆದರೆ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಂಧಾನ ಯತ್ನ ವಿಫಲವಾಯಿತು.ಪುನಃ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಧರಣಿ‌ ಮುಂದುವರಿಸಿದರು.

ಪೂರ್ವ ನಿಗದಿ ಪ್ರಕಾರ ವಿಧಾನಸಭೆ ಕಲಾಪ ಇಂದಿಗೆ ಮುಕ್ತಾಯವಾಗಬೇಕಿತ್ತು. ಆದರೆ ಕೆಲವು ಪ್ರಮುಖ ಮಸೂದೆಗಳ ಮೇಲಿನ ಚರ್ಚೆ, ಅಂಗೀಕಾರ ಬಾಕಿಯಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನಾರೋಗ್ಯವಿರುವುದರಿಂದ ಕಲಾಪದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ನಾಳೆ ಮತ್ತು ನಾಡಿದ್ದು ವಿಶ್ರಾಂತಿ ತೆಗೆದುಕೊಂಡು ಸೋಮವಾರ ಸದನದಲ್ಲಿ ಕಲಾಪಕ್ಕೆ ಹಾಜರಾಗಲಿದ್ದಾರೆ.

ಸಭಾಪತಿ ಯು.ಟಿ. ಖಾದರ್ ನೇತೃತ್ವದಲ್ಲಿ ಇಂದು ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಸೋಮವಾರ ಒಂದು ದಿನಕ್ಕೆ ವಿಧಾನಸಭೆ ಕಲಾಪ ನಡೆಸುವ ಮತ್ತು ಮಂಗಳವಾರ ರಾಜ್ಯಸಭಾ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಅಂದು ಕಲಾಪ ನಡೆಯುವುದಿಲ್ಲ.

ಗಲಾಟೆ ನಡುವೆಯೇ ಎರಡು ವರದಿಗಳ ಮಂಡನೆ ಮತ್ತು ಎರಡು ಮಸೂದೆಗಳ ಅಂಗೀಕಾರ ಆಯಿತು. ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಪ್ರತಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮನವಿ ಮಾಡಿದರು. ಸ್ಪೀಕರ್ ಒಪ್ಪಲಿಲ್ಲ. ಗದ್ದಲದ‌ ಮಧ್ಯೆಯೇ ತಾವು ತಂದಿದ್ದ ನಿರ್ಣಯದ ಕರಡನ್ನು ಅಶೋಕ ಓದಿದರು. ಗದ್ದಲ‌ ಮತ್ತಷ್ಟು ಜೋರಾಗುತ್ತಿದ್ದಂತೆ ಸ್ಪೀಕರ್ ಸದನದ ಕಲಾಪವನ್ನು ಸೋಮವಾರ ಬೆಳಿಗ್ಗೆ 9.30ರವರೆಗೆ ಮುಂದೂಡುವುದಾಗಿ ಹೇಳಿದರು.

Read More
Next Story