
ಸಾಂದರ್ಭಿಕ ಚಿತ್ರ
ಮಧುಗಿರಿಯಲ್ಲಿ ದಲಿತ ಯುವಕನಿಗೆ ದೇಗುಲ ಪ್ರವೇಶ ನಿರಾಕರಣೆ
ಸವರ್ಣೀಯರು ದಲಿತ ಯುವಕನನ್ನು ದೇವಾಲಯದಿಂದ ಹೊರ ಬರುವಂತೆ ತಾಕೀತು ಮಾಡಿದ್ದಲ್ಲದೆ, ನೀನು ದೇವಾಲಯದ ಒಳ ಪ್ರವೇಶಿಸುವಂತಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ದಲಿತ ಯುವಕನಿಗೆ ದೇವಾಲಯ ಪ್ರವೇಶಿಸಲು ಬಿಡದೆ ಅವಮಾನ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕವಣದಾಲ ಗ್ರಾಮದಲ್ಲಿ ನಡೆದಿದೆ.
ಕವಣದಾಲ ಗ್ರಾಮದ ವೀರಾಂಜನೇಯ ದೇವಾಲಯದಲ್ಲಿ ದೇವರಿಗೆ ಪೂಜೆ ಸಲ್ಲಿಸಲೆಂದು ಮಾದಿಗ ಸಮುದಾಯಕ್ಕೆ ಸೇರಿದ ಸ್ವಾಮಿನಾಥ್ ಎಂಬ ಯುವಕ ದೇವಾಲಯ ಪ್ರವೇಶಿಸಿದ್ದ. ಇದನ್ನು ಕಂಡ ಸವರ್ಣೀಯರು ಆತನನ್ನು ದೇವಾಲಯದಿಂದ ಹೊರ ಬರುವಂತೆ ತಾಕೀತು ಮಾಡಿದ್ದಲ್ಲದೆ, ನೀನು ದೇವಾಲಯದ ಒಳ ಪ್ರವೇಶಿಸುವಂತಿಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
"ದಲಿತರು ದೇವಾಲಯದ ಒಳಗೆ ಬರಬಾರದು" ಎಂದು ಅವಮಾನಿಸಿದ್ದಾರೆ ಎಂದು ಯುವಕ ಸ್ವಾಮಿನಾಥ್, ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸೋಮವಾರ (ಇಂದು) ಗ್ರಾಮಕ್ಕೆ ಮಧುಗಿರಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
ಕವಣದಾಲ ಗ್ರಾಮದಲ್ಲಿ ನಡೆದ ದೇವಾಲಯ ಪ್ರವೇಶ ನಿರಾಕರಣೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿವೆ.
ದೇವಾಲಯ ಸಾರ್ವಜನಿಕರ ಆಸ್ತಿ. ಎಲ್ಲಾ ಸಮುದಾಯದವರಿಗೂ ಸೇರಿದ್ದಾಗಿರುತ್ತದೆ. ಮುಕ್ತ ಪ್ರವೇಶ ನಿರಾಕರಿಸಿದರೆ ಕಾನೂನಿನ ಪ್ರಕಾರ ಅಪರಾಧ. ಪ್ರವೇಶ ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಸಿದ್ದಾರೆ.