
ವಿದ್ಯಾರ್ಥಿನಿಲಯಕ್ಕೆ ಉಪಲೋಕಾಯುಕ್ತರ ಭೇಟಿ: ಅಧಿಕಾರಿಗಳ ವಿರುದ್ಧ ಗರಂ
ವಿದ್ಯಾರ್ಥಿನಿಲಯಗಳಿಗೆ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ನ್ಯೂನತೆಗಳನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸುವಂತೆ ನಿರ್ದೇಶನ ನೀಡಿದರು.
ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣಿಂದ್ರ ಅವರು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ವೇಳೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದಿರುವುದು. ಕೊಠಡಿಗಳು ಕಿರಿದಾಗಿದ್ದು, ಪ್ರತಿ ಕೊಠಡಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಾಸಿಸುತ್ತಿರುವುದು ಕಂಡುಬಂದಿದೆ. ಕೊಠಡಿಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ವಿದ್ಯಾರ್ಥಿಗಳು ತಮ್ಮ ಟ್ರಂಕ್‌ಗಳನ್ನು ತಮ್ಮ ಹಾಸಿಗೆಯ ಮೇಲೆಯೇ ಇಟ್ಟುಕೊಂಡಿರುವುದು ಕಂಡು ಬಂತು. ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್‌ಗಳಾಗಲೀ ಅಥವಾ ಪ್ರತ್ಯೇಕ ಗ್ರಂಥಾಲಯದ ಕೊಠಡಿಯಾಗಲೀ ಇಲ್ಲ. ಈ ಹಿನ್ನೆಲೆಯಲ್ಲಿ, ಅಲ್ಯೂಮಿನಿಯಂ ಶೀಟ್‌ಗಳನ್ನು ಬಳಸಿ ಒಂದು ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಲು ಸೂಚಿಸಲಾಯಿತು.
ಊಟದ ಕೋಣೆಯಲ್ಲಿರುವ ನೀರಿನ ಫಿಲ್ಟರ್‌ಗೆ ರಾತ್ರಿ ವೇಳೆ ಬೀಗ ಹಾಕಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು, ಊಟದ ಕೋಣೆಯ ಹೊರಗೆ ಮತ್ತೊಂದು ಕುಡಿಯುವ ನೀರಿನ ಫಿಲ್ಟರ್ ಅಳವಡಿಸಲು ನಿರ್ದೇಶನ ನೀಡಲಾಯಿತು. ಸೋಲಾರ್ ನೀರಿನ ವ್ಯವಸ್ಥೆಯಿದ್ದು, ಬಿಸಿಲು ಇಲ್ಲದ ದಿನಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ಪರ್ಯಾಯ ವ್ಯವಸ್ಥೆ ಇರುವುದಿಲ್ಲ. ತಕ್ಷಣವೇ ವಿದ್ಯುತ್ ಗೀಸರ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ವಿದ್ಯಾರ್ಥಿಗಳ ಕೊಠಡಿಗಳಲ್ಲಿ ವಾಸನೆ ಬರುತ್ತಿದ್ದು, ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದೆ. ತಿಂಗಳಿಗೆ ಎರಡು ಬಾರಿ 'ರೂಂ ಫ್ರೆಶ್‌ನರ್' ಬಳಸಲು ಮತ್ತು ಕೊಠಡಿಗಳನ್ನು ಸ್ವಚ್ಛವಾಗಿಡುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಶೂ, ಚಪ್ಪಲಿಗಳನ್ನು ಇಡಲು ಯಾವುದೇ ವ್ಯವಸ್ಥೆ ಇಲ್ಲ. ಹಾಸ್ಟೆಲ್‌ನ ಹೊರಗಡೆ 'ಶೂ ರ್‍ಯಾಕ್' ಮಾಡಿಸಲು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ವಸ್ತುಗಳನ್ನು ಇಡಲು ಕಪಾಟುಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಯಿತು. ಕಿಟಕಿಗಳಿಗೆ ಹಾಕಿರುವ ಮೆಶ್‌ಗಳು ಹಲವೆಡೆ ಹರಿದು ಹೋಗಿದ್ದು, ಸೊಳ್ಳೆಗಳು ಒಳಗೆ ಬರುತ್ತಿವೆ. ಅವುಗಳನ್ನು ತಕ್ಷಣ ಸರಿಪಡಿಸುವಂತೆ ತಿಳಿಸಲಾಯಿತು. ಶೌಚಾಲಯ ಮತ್ತು ಸ್ನಾನದ ಕೋಣೆಗಳಲ್ಲಿ ದುರ್ವಾಸನೆ ಬರುತ್ತಿದ್ದು, ನಿರ್ವಹಣೆ ಸರಿಯಾಗಿಲ್ಲದಿರುವುದು ಸ್ಪಷ್ಟವಾಗಿದೆ. ರಾಸಾಯನಿಕಗಳನ್ನು ಬಳಸಿ ಆ ಸ್ಥಳಗಳನ್ನು ಸ್ವಚ್ಛಗೊಳಿಸಲು ನಿರ್ದೇಶಿಸಲಾಯಿತು.
ಇನ್ನು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ವೇಳೆ ಕೊಠಡಿಗಳಲ್ಲಿ ಬಂಕ್‌ಬೆಡ್‌ಗಳನ್ನು ಅಳವಡಿಸಿದ್ದು, ಸೀಲಿಂಗ್ ಫ್ಯಾನ್‌ಗಳು ಬಹಳ ಕೆಳಗೆ ಇವೆ. ಇದರಿಂದಾಗಿ ಮೇಲಿನ ಬೆಡ್‌ನಲ್ಲಿ ಮಲಗುವ ವಿದ್ಯಾರ್ಥಿನಿಯರಿಗೆ ಫ್ಯಾನ್ ತಗಲುವ ಅಪಾಯವಿದೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ತಕ್ಷಣವೇ ಸೀಲಿಂಗ್ ಫ್ಯಾನ್‌ಗಳನ್ನು ಬದಲಿಸಿ, 'ವಾಲ್ ಮೌಂಟ್ ಫ್ಯಾನ್' ಅಥವಾ 'ಸ್ಟ್ಯಾಂಡಿಂಗ್ ಫ್ಯಾನ್'ಗಳನ್ನು ಅಳವಡಿಸಬೇಕು. ಕಂಪ್ಯೂಟರ್ ಮತ್ತು ಪ್ರತ್ಯೇಕ ಗ್ರಂಥಾಲಯದ ಕೊಠಡಿ ಇಲ್ಲ. ಅಲ್ಯೂಮಿನಿಯಂ ಶೀಟ್‌ಗಳನ್ನು ಬಳಸಿ ಒಂದು ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ತಿಳಿಸಲಾಯಿತು.
ಬಾಲಕರ ಹಾಸ್ಟೆಲ್‌ನಲ್ಲಿರುವಂತೆಯೇ, ಇಲ್ಲಿಯೂ ಊಟದ ಕೋಣೆಯ ಹೊರಗೆ ರಾತ್ರಿ ಬಳಕೆಗಾಗಿ ನೀರಿನ ಫಿಲ್ಟರ್ ಮತ್ತು ಬಿಸಿಲಿರದ ದಿನಗಳಿಗಾಗಿ ವಿದ್ಯುತ್ ಗೀಸರ್ ಅಳವಡಿಸಲು ನಿರ್ದೇಶನ ನೀಡಲಾಯಿತು. ಸ್ನಾನದ ಕೋಣೆಗಳ ಕಿಟಕಿಗಳಿಗೆ ಗಾಜುಗಳನ್ನು ಹಾಕಿಲ್ಲ. ಇದರಿಂದಾಗಿ ಹೆಣ್ಣುಮಕ್ಕಳು ಸ್ನಾನ ಮಾಡುವಾಗ ಮುಜುಗರಕ್ಕೊಳಗಾಗುವ ನಿರ್ಮಾಣವಾಗಿದೆ. ಹೊರಗಿನವರಿಗೆ ಕಾಣದಂತೆ ತಕ್ಷಣವೇ ಕಿಟಕಿಗಳಿಗೆ ಗಾಜುಗಳನ್ನು ಅಳವಡಿಸಬೇಕು ಎಂದು ಉಪಲೋಕಾಯುಕ್ತರು ನಿರ್ದೇಶನ ನೀಡಿದರು.

