
ಮೆಜಸ್ಟಿಕ್‌ನ ಬಿಎಂಟಿಎಸ್ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಹಾಗೂ ಬಿ. ಬೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೆಜೆಸ್ಟಿಕ್ ಬಸ್ಸ್ಟಾಂಡ್ ಶೌಚಾಲಯಗಳಲ್ಲಿ ಶುಲ್ಕ ವಸೂಲಿ ದಂಧೆ ; ತನಿಖೆಗೆ ಆದೇಶಿದ ಉಪಲೋಕಾಯುಕ್ತ
ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಉಪಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿಯ ವೇಳೆ ಕಂಡುಬಂದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರುಗಳಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ (ಮೇ 8) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಗುತ್ತಿರುವ ಮೋಸದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ದಿನನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುವ ಈ ಬಸ್ ನಿಲ್ದಾಣದಲ್ಲಿನ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನಿರ್ಮಿಸಲಾದ ಶೌಚಾಲಯಗಳಲ್ಲಿ ಅಧಿಕ ಹಣ ವಸೂಲಿ ಮಾಡುತ್ತಿರುವುದು ಉಪಲೋಕಾಯುಕ್ತ ಪರಿಶೀಲನೆ ವೇಳೆ ಕಂಡುಬಂತು. ತಕ್ಷಣ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಮತ್ತು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು ಎಂದು ಶೌಚಾಲಯದ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ನಂತರ, ಬಸ್ ನಿಲ್ದಾಣದಲ್ಲಿರುವ ನಿರ್ಭಯ ಕೇಂದ್ರ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಭೇಟಿ ನೀಡಿ ಮಹಿಳೆಯರು ದಾಖಲಿಸಿರುವ ದೂರುಗಳ ಬಗ್ಗೆ ಮಾಹಿತಿ ಪಡೆದರು.
ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಗುರುವಾರ (ಮೇ 8) ರಂದು ರಾಜ್ಯದ ಕೋಲಾರ, ದಾವಣಗೆರೆ, ಯಾದಗಿರಿ ಮತ್ತು ಬೆಂಗಳೂರಿನ ವಿವಿಧ ಅಧಿಕಾರಿಗಳ ಮೇಲೆ ಆದಾಯ ಮೀರಿದ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ತಾಲೂಕಿನ ಭೂಮಾಪನ ಇಲಾಖೆಯ ಸರ್ವೆ ಅಧಿಕಾರಿ ಜಿ. ಸುರೇಶ್ ಬಾಬು, ಸುರಪುರ ತಾಲೂಕಿನ ಆರೋಗ್ಯಾಧಿಕಾರಿ ರಾಜೀವ್ ವೆಂಕಟಪ್ಪ ನಾಯಕ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ. ರವಿ, ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಶ್ರೀನಿವಾಸಮೂರ್ತಿ ಅವರ ಮನೆ, ಕಚೇರಿ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.