ಕ್ಯಾಬ್ ಬುಕ್ ಮಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆಸಿ ದರೋಡೆ; ಆತಂಕದಲ್ಲಿ ಚಾಲಕರು
ಕ್ಯಾಬ್ ಚಾಲಕರನ್ನೇ ಗುರಿಯಾಗಿಸಿಕೊಂಡು ಸುಲಿಗೆ ನಡೆಸುವ ತಂಡಗಳು ಬೆಂಗಳೂರು ಸುತ್ತುಮುತ್ತ ಕಾರ್ಯಾಚರಿಸುತ್ತಿರುವುದು ಆತಂಕ ಮೂಡಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಚಾಲಕರ ಸುಲಿಗೆ, ದರೋಡೆ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಸಾರ್ವಜನಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಕ್ಯಾಬ್ ಚಾಲಕರಿಗೇ ಈಗ ಅಸುರಕ್ಷತೆ ಭಾವ ಎದುರಾಗಿದೆ.
ಕ್ಯಾಬ್ ಚಾಲಕರನ್ನೇ ಗುರಿಯಾಗಿಸಿಕೊಂಡು ಸುಲಿಗೆ ನಡೆಸುವ ತಂಡಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಆತಂಕ ಮೂಡಿಸಿದೆ. ಸಾರಿಗೆ ಬಸ್ ಸಂಚರಿಸದ ಸ್ಥಳಗಳಿಗೂ ಕ್ಯಾಬ್ ಚಾಲಕರು ತೆರಳುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದುಷ್ಕರ್ಮಿಗಳು ದೂರದ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕ್ಯಾಬ್ ಚಾಲಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೊಟ್ಟೆಪಾಡಿಗಾಗಿ ಕ್ಯಾಬ್ ಚಾಲಕರಾಗಿ ದುಡಿಯುವ ಸಾಕಷ್ಟು ಮಂದಿ ಸುಲಿಗೆಕೋರರ ಹಾವಳಿಗೆ ಹೈರಾಣಾಗಿದ್ದಾರೆ. 2017ರಿಂದ ಈವರೆಗೂ ಕ್ಯಾಬ್ ಚಾಲಕರ ಸುಲಿಗೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಾಖಲಾಗುವ ಕೆಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದರೆ, ಮತ್ತೆ ಕೆಲ ಪ್ರಕರಣಗಳನ್ನು ಬೇಧಿಸುವುದು ಈವರೆಗೂ ಪೊಲೀಸರಿಂದ ಸಾಧ್ಯವಾಗಿಲ್ಲ. ಇನ್ನು ಬಹಳಷ್ಟು ಚಾಲಕರು ಘಟನೆಯ ಬಗ್ಗೆ ಪೊಲೀಸರಿಗೆ ದೂರನ್ನೇ ನೀಡದಿರುವುದು ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ, ವಿಚಾರಣೆ, ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕೆಂದು ಹೆದರಿ ದೂರನ್ನೇ ದಾಖಲಿಸುತ್ತಿಲ್ಲ.
ಓಲಾ, ಉಬರ್ ಚಾಲಕರೇ ಟಾರ್ಗೆಟ್
ಓಲಾ, ಉಬರ್ ಮತ್ತಿತರ ಕ್ಯಾಬ್ ಸೇವೆಯು ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನ ನಾಲ್ಕು ಮೂಲೆಗಳಿಗೂ ಕ್ಯಾಬ್ ಸೇವೆ ಒದಗಿಸುತ್ತಿವೆ. ಜೊತೆಗೆ ಅಂತರ ಜಿಲ್ಲಾ ಪ್ರಯಾಣ ವ್ಯವಸ್ಥೆಯನ್ನೂ ಒದಗಿಸಿವೆ.
ಒಂದೂವರೆ ತಿಂಗಳ ಹಿಂದೆ ರಾತ್ರಿ 11.30 ರ ಸುಮಾರಿಗೆ ಬೆಂಗಳೂರಿನ ಕೆಂಗೇರಿಯಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯೊಬ್ಬ ಇನ್ನೇನು ಕ್ಯಾಬ್ ಸಮೀಪಿಸುತ್ತಿದ್ದಂತೆ ಬುಕ್ಕಿಂಗ್ ರದ್ದು ಮಾಡಿದ್ದಾರೆ. ಆಗ ಕ್ಯಾಬ್ ಚಾಲಕ ಹಿಂತಿರುಗುವಾಗ ಕೋಡಿಪಾಳ್ಯದ ಬಳಿ ಹಿಂದಿನಿಂದ ಒಬ್ಬರು ಹಾಗೂ ಮುಂದಿನಿಂದ ಇಬ್ಬರು ಬೈಕ್ನಲ್ಲಿ ಬಂದು ಕಾರು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಬೆದರಿಸಿ 2,500 ರೂ.ನಗದು, 30 ಸಾವಿರ ಬೆಲೆಯ ಮೊಬೈಲ್, 19 ಗ್ರಾಂ ತೂಕದ ಚೈನ್ ಹಾಗೂ ಉಂಗುರ ಕಸಿದು ಪರಾರಿಯಾಗಿದ್ದಾರೆ.
ಸುಲಿಗೆಗೆ ಒಳಗಾದ ಕಾರು ಚಾಲಕ ಮೊಬೈಲ್ ಕಳೆದುಕೊಂಡ ಕಾರಣ ಮರುದಿನ ಬೆಳಿಗ್ಗೆ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ಘಟನೆ ಕುರಿತು ವಿವರಿಸಿದಾಗ ಆತನನ್ನೇ ಪೊಲೀಸರು ಅನುಮಾನದಿಂದ ನೋಡಿದ್ದಾರೆ. ಇದರಿಂದ ಬೇಸರಗೊಂಡ ಕಾರು ಚಾಲಕ ಯಾವುದೇ ದೂರು ನೀಡದೇ ಮೊಬೈಲ್ ಆದರೂ ಪತ್ತೆ ಮಾಡಿಕೊಡಿ ಎಂದು ಅಲವತ್ತುಕೊಂಡಿದ್ದಾರೆ.
ಈ ಕುರಿತಂತೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಕ್ಯಾಬ್ ಚಾಲಕ ಚಂದ್ರಶೇಖರ್(ಹೆಸರು ಬದಲಿಸಲಾಗಿದೆ) ʼʼಪ್ರಯಾಣಿಕರ ಸೋಗಿನಲ್ಲಿ ಕ್ಯಾಬ್ ಬುಕ್ಕಿಂಗ್ ಮಾಡಿ ಸುಲಿಗೆ ಮಾಡಿದ ಘಟನೆಯನ್ನು ವಿವರಿಸಿದ್ದಾರೆ. 30 ಸಾವಿರ ಬೆಲೆಯ ಮೊಬೈಲ್ ಅನ್ನು ಕಂತಿನಲ್ಲಿ ತೆಗೆದುಕೊಂಡಿದ್ದೆ. ಈಗಷ್ಟೇ ಒಂದು ಕಂತು ತೀರಿಸಿದ್ದೆ. ಸುಲಿಗೆಕೋರರ ಕೃತ್ಯದಿಂದಾಗಿ ನನ್ನ ಬಳಿ ಇಲ್ಲದ ಮೊಬೈಲ್ಗೂ ಈಗ ಕಂತು ಪಾವತಿಸಬೇಕಾಗಿದೆ. ಪೊಲೀಸರಿಗೆ ಘಟನೆಯ ಬಗ್ಗೆ ವಿವರಿಸಿದರೆ ರಾತ್ರಿಯೇ ದೂರು ನೀಡಬೇಕಿತ್ತು. ತಡವಾಗಿ ಬಂದಿದ್ದು ಏಕೆ ಎಂಬತ್ಯಾದಿ ಪ್ರಶ್ನೆಗಳ ಮೂಲಕ ನನ್ನ ಮೇಲೆಯೇ ಅನುಮಾನ ವ್ಯಕ್ತಪಡಿಸಿದರು. ಹಾಗಾಗಿ ದೂರು ನೀಡುವುದೇ ಬೇಡ ಎನಿಸಿ ವಾಪಸ್ ಬಂದೆʼʼ ಎಂದು ಅಳಲು ತೋಡಿಕೊಂಡಿದ್ದಾರೆ.
2024 ರಲ್ಲಿ ತುರಹಳ್ಳಿ ಅರಣ್ಯ ಪ್ರದೇಶ ಹಾಗೂ ಕಲ್ಯಾಣ ನಗರದಲ್ಲಿಯೂ ಇದೇ ರೀತಿಯ ಉಬರ್ ಚಾಲಕರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಕಾರಿನ ಗಾಜುಗಳನ್ನು ಒಡೆದು, ಹಣ ದೋಚಿದ್ದರು. ಆದರೆ, ಈ ಯಾವ ಘಟನೆಗಳ ಕುರಿತು ಚಾಲಕರೇ ದೂರು ದಾಖಲಿಸಿಲ್ಲ.
ಇಂತಹುದೇ ಅನುಭವವನ್ನು ಕೆಲವು ಕ್ಯಾಬ್ ಚಾಲಕರು ವಿವರಿಸಿದ್ದಾರೆ. ಆದರೆ, ಅವರೆಲ್ಲರೂ ತಮ್ಮ ಹೆಸರುಗಳನ್ನು ಹೇಳಲು ಮತ್ತು ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. "ಮಾಹಿತಿ ನೀಡಿದರೆ, ಪೊಲೀಸ್ ದೂರು ದಾಖಲಾದರೆ, ತನಿಖೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದೇ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ," ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
2019 ರಲ್ಲಿ ಓಲಾ, ಉಬರ್ ಕ್ಯಾಬ್ಗಳಲ್ಲಿ ಪ್ರಯಾಣಿಕನಂತೆ ಹೋಗಿ ಚಾಲಕರ ಮೊಬೈಲ್ ಕಳವು ಮಾಡುತ್ತಿದ್ದ ಕೋಲಾರ ಮೂಲದ ನಿಶಾಂತ್(28) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯು ನಗರ ಹೊರವಲಯಗಳಿಗೆ ಕ್ಯಾಬ್ ಬುಕ್ ಮಾಡುತ್ತಿದ್ದ. ಕಾರು ಹತ್ತಿದ ಮೇಲೆ ಆಪ್ ಡೌನ್ಲೋಡ್ ಮಾಡಿಕೊಡುತ್ತೇನೆ. ಅದೃಷ್ಟ ಖುಲಾಯಿಸಿದರೆ ಒಂದು ಲಕ್ಷ ರೂ. ಗೆಲ್ಲಬಹುದು ಎಂದು ನಂಬಿಸುತ್ತಿದ್ದ. ಆರೋಪಿಯ ಮಾತು ಕೇಳಿ ಚಾಲಕರು ಮೊಬೈಲ್ ಅನ್ನು ಆತನ ಕೈಗೆ ಕೊಡುತ್ತಿದ್ದರು. ಐದು ನಿಮಿಷ ಇಲ್ಲೇ ಇರಿ, ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದ. ಇಂಟರ್ನೆಟ್ ಇದೆ ಎಂದು ಹೇಳಿದರೆ, ನಿಮ್ಮ ನೆಟ್ ಪ್ಯಾಕ್ನಲ್ಲಿ ಅದು ಡೌನ್ಲೋಡ್ ಆಗುವುದಿಲ್ಲ ಎಂದು ಹೇಳಿ ಮೊಬೈಲ್ ಸಮೇತ ನಾಪತ್ತೆಯಾಗುತ್ತಿದ್ದ.
ಪೊಲೀಸರು ಹೇಳುವುದೇನು?
ʼʼದೂರದ ಹಾಗೂ ನಿರ್ಜನ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವಾಗ ಸಾಕಷ್ಟು ಎಚ್ಚರಿಕೆ ವಹಿಸುವಂತೆ ಕ್ಯಾಬ್ ಚಾಲಕರಿಗೆ ಸೂಚನೆ ನೀಡಲಾಗಿದೆ. ಓಲಾ, ಉಬರ್ ಸಂಸ್ಥೆಯವರು ಕೂಡ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿರುತ್ತಾರೆ. ಕೆಂಗೇರಿಯಲ್ಲಿ ಕ್ಯಾಬ್ ಚಾಲಕನ ಸುಲಿಗೆ ಬಗ್ಗೆ ಮಾಹಿತಿ ಇಲ್ಲ. ಈ ರೀತಿಯ ಘಟನೆಗಳು ನಡೆದ ತಕ್ಷಣ ಪೊಲೀಸರಿಗೆ ದೂರು ನೀಡಿದರೆ ಆರೋಪಿಗಳನ್ನು ಪತ್ತೆ ಹಚ್ಚಬಹುದು. ಈಗಾಗಲೇ ದಾಖಲಾಗಿದ್ದ ಹಲವು ದೂರುಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ಸುಲಿಗೆ ಪ್ರಕರಣಗಳ ನಿಯಂತ್ರಣಕ್ಕೆ ಕ್ಯಾಬ್ ಚಾಲಕರು ಕೂಡ ಸಹಕಾರ ನೀಡಬೇಕುʼʼ ಎಂದು ಪೊಲೀಸ್ ಜಂಟಿ ಆಯುಕ್ತ(ಅಪರಾಧ) ಚಂದ್ರಗುಪ್ತ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಎಚ್ಚರಿಕೆ ಕ್ರಮಗಳೇನು?
- ಗ್ರಾಹಕರು ಹತ್ತುವ ಹಾಗೂ ಇಳಿಯುವ ಪ್ರದೇಶಗಳನ್ನು ಚಾಲಕರು ಖಚಿತಪಡಿಸಿಕೊಳ್ಳಬೇಕು.
- ಗ್ರಾಹಕರ ಇಳಿಯುವ ಪ್ರದೇಶವನ್ನು 200 ಅಂತರದಲ್ಲೇ ಸೂಕ್ಷ್ಮವಾಗಿ ಗಮನಿಸಬೇಕು.
- ಅಂತರ ನಗರ ಪ್ರಯಾಣದ ಸೌಲಭ್ಯ ಬಳಸುವವರ ಬಗ್ಗೆ ಪೂರ್ಣ ಮಾಹಿತಿ ಹೊಂದಿರಬೇಕು.
- ಉಬರ್, ಓಲಾ ವಾಹನ ಬುಕ್ಕಿಂಗ್ ವೇಳೆ ಪ್ರಯಾಣಿಸುವವರ ಸಂಖ್ಯೆಯ ಬಗ್ಗೆಯೂ ಮಾಹಿತಿ ಪಡೆದಿರಬೇಕು.
- ಅಚಾತುರ್ಯ ನಡೆಸುವ ಸಾಧ್ಯತೆ ಗಮನಕ್ಕೆ ಬರುತ್ತಿದ್ದಂತೆ ವಾಹನವನ್ನು ನಿಲ್ಲಿಸಬಾರದು.
- ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು.