
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ
ನೋಂದಾಯಿಸದ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಪ್ರಧಾನಿಯಷ್ಟೇ ಭದ್ರತೆ, ಶಿಷ್ಟಾಚಾರವೇಕೆ: ಸಚಿವ ಖರ್ಗೆ
ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ಜಟಾಪಟಿ ತೀವ್ರಗೊಂಡಿದೆ. ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂಬ ವಿಷಯವನ್ನು ಮುಂದಿಟ್ಟುಕೊಂಡು, ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ಹಣಕಾಸಿನ ಮೂಲ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, "ತನ್ನದು ನೋಂದಾಯಿತ ಸಂಸ್ಥೆಯಲ್ಲ ಎಂದು ಆರ್‌ಎಸ್‌ಎಸ್ ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಿದೆ. ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ದೇಣಿಗೆಯ ಮೂಲ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆ
"ಸಂಘಕ್ಕೆ ದೇಣಿಗೆಗಳು ಎಲ್ಲಿಂದ ಬರುತ್ತವೆ ಮತ್ತು ದಾನಿಗಳು ಯಾರು?" ಎಂದು ಪ್ರಶ್ನಿಸಿರುವ ಅವರು, "ನೋಂದಾಯಿಸದ ಸಂಸ್ಥೆಯೊಂದರ ಮುಖ್ಯಸ್ಥರು, ಪ್ರಧಾನಿ ಮತ್ತು ಗೃಹ ಸಚಿವರಿಗೆ ಸಮಾನವಾದ ಭದ್ರತೆ ಹಾಗೂ ಶಿಷ್ಟಾಚಾರವನ್ನು ಏಕೆ ಪಡೆಯುತ್ತಾರೆ? ತೆರಿಗೆ ಪಾವತಿದಾರರ ಹಣವನ್ನು ಆರ್‌ಎಸ್‌ಎಸ್ ಮುಖ್ಯಸ್ಥರ ಮೇಲೆ ಏಕೆ ಖರ್ಚು ಮಾಡಲಾಗುತ್ತಿದೆ?" ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
"ಸಂಘದ ಪೂರ್ಣ ಸಮಯದ ಪ್ರಚಾರಕರಿಗೆ ಯಾರು ಹಣ ಪಾವತಿಸುತ್ತಾರೆ? ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳು ಮತ್ತು 'ಸಾಮಾಜಿಕ' ಅಭಿಯಾನಗಳಿಗೆ ಯಾರು ಹಣಕಾಸು ಒದಗಿಸುತ್ತಾರೆ?" ಎಂದು ಹಣಕಾಸಿನ ಮೂಲವನ್ನು ಕೆದಕಿದ್ದಾರೆ. "ಆರ್‌ಎಸ್‌ಎಸ್ ನೋಂದಾಯಿಸದೆ ಮತ್ತು ಯಾವುದೇ ಹೊಣೆಗಾರಿಕೆ ಹೊಂದಿಲ್ಲದಿದ್ದರೆ, ಅದು ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ, ಲೆಕ್ಕಪರಿಶೋಧನೆ ಮತ್ತು ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶಭಕ್ತರನ್ನಾಗಿಸುತ್ತದೆ?" ಎಂದು ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಕೂಡ, ಆರ್‌ಎಸ್‌ಎಸ್ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವಾಗ, ಅದರ ನೋಂದಣಿ ಪತ್ರವನ್ನು ತೋರಿಸುವಂತೆ ಪ್ರಿಯಾಂಕ್ ಖರ್ಗೆ ಹಲವು ಬಾರಿ ಸವಾಲು ಹಾಕಿದ್ದರು. ಇದೀಗ ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಿ, ಸಂಘದ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್‌ಗೆ ಸಿದ್ಧತೆ
ಇದೇ ಸಂದರ್ಭದಲ್ಲಿ, ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ 'ಬೆಂಗಳೂರು ಟೆಕ್ ಸಮ್ಮಿಟ್' ಬಗ್ಗೆಯೂ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು. "ಬೆಂಗಳೂರು ಕೇವಲ ರಾಜ್ಯ ಅಥವಾ ರಾಷ್ಟ್ರಕ್ಕೆ ಸೀಮಿತವಾಗಿಲ್ಲ, ಇದು ಜಾಗತಿಕವಾಗಿ ಮಹತ್ವದ ಗುರುತನ್ನು ಹೊಂದಿದೆ. ಇದನ್ನು ಮುಂದುವರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ಸರ್ಕಾರವು 'ಫ್ಯೂಚರ್ ಮೇಕರ್ಸ್ ಕಾನ್‌ಕ್ಲೇವ್' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು ಯುವಕರನ್ನು ನವೋದ್ಯಮಗಳತ್ತ ಸೆಳೆಯಲು ಮತ್ತು ನವೋದ್ಯಮಗಳ ಸಮಸ್ಯೆಗಳು, ಸಾಧ್ಯತೆಗಳು ಹಾಗೂ ಭವಿಷ್ಯದ ಉದ್ಯಮದ ಬಗ್ಗೆ ಚರ್ಚಿಸಲು ವೇದಿಕೆ ಕಲ್ಪಿಸಲಿದೆ," ಎಂದು ಅವರು ತಿಳಿಸಿದರು.

