
Namma Metro Fare Hike | ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆ; ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪ
ಮೆಟ್ರೋ ಸಂಬಂಧಿತ ಎಲ್ಲಾ ಜವಾಬ್ದಾರಿಗಳೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿವೆ. ದರ ನಿಗದಿ ಸಮಿತಿ ದೆಹಲಿಯಲ್ಲಿಲ್ಲ. ಕರ್ನಾಟಕದಲ್ಲಿಯೇ ಇದೆ ಎಂದು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ʼನಮ್ಮ ಮೆಟ್ರೋ ʼ ಪ್ರಯಾಣ ದರ ಏರಿಕೆ ವಿಚಾರ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಅಧಿಕಾರ ರಾಜ್ಯದ ಕೈಯಲ್ಲಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ.
ಮೆಟ್ರೋ ಸಂಬಂಧಿತ ಎಲ್ಲಾ ಜವಾಬ್ದಾರಿಗಳೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲಿವೆ. ದರ ನಿಗದಿ ಸಮಿತಿ ದೆಹಲಿಯಲ್ಲಿಲ್ಲ. ಕರ್ನಾಟಕದಲ್ಲಿಯೇ ಇದೆ. ಕೇಂದ್ರ ಸರ್ಕಾರ ಪ್ರಯಾಣ ದರ ಏರಿಕೆ ಮಾಡಿದೆ ಎಂಬುದು ಸುಳ್ಳು. ಕರ್ನಾಟಕ ಮಾತ್ರವಲ್ಲದೇ ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ನಗರದಲ್ಲೂ ಮೆಟ್ರೋ ಯೋಜನೆಗಳು ರಾಜ್ಯ ಸರ್ಕಾರದ ಅಧೀನದಲ್ಲಿವೆ. ರಾಜ್ಯ ಸರ್ಕಾರಕ್ಕೆ ಇದರ ಗ್ರೌಂಡ್ ರಿಯಾಲಿಟಿ ತಿಳಿದಿದೆ ಎಂದು ಹೇಳಿದ್ದಾರೆ.
ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರಗಳಿವೆ. ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆ ಪ್ರಸ್ತಾವ ಕಳುಹಿಸಿದ್ದೇ ಕರ್ನಾಟಕ ಸರ್ಕಾರ. ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ದರ ಏರಿಕೆಗೆ ಯಾವುದೇ ಸೂಚನೆ ನೀಡಿಲ್ಲ. ವೃಥಾ ಕೇಂದ್ರದ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಕೆಗೆ ತೀವ್ರವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಯಾಣ ದರ ಏರಿಕೆ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರ ನೇಮಿಸಿದ್ದ ದರ ನಿಗದಿ ಸಮಿತಿ ಶಿಫಾರಸು ಆಧರಿಸಿ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಇದಾದ ಬಳಿಕ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರಿಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ಅವರು, ಪ್ರಯಾಣ ದರ ಇಳಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಬಳಿಕ ಬಿಎಂಆರ್‌ಸಿಎಲ್ ಅಧಿಕಾರಿಗಳು, ಸ್ಟೇಜ್‌ವಾರು ಪ್ರಯಾಣ ದರವನ್ನು ಕೊಂಚ ಇಳಿಕೆ ಮಾಡಿದ್ದರು.