
ಐಐಎಸ್ಸಿ ಶ್ರೇಷ್ಠತಾ ಕೇಂದ್ರಕ್ಕೆ ಎಚ್ ಡಿಕೆ ಭೇಟಿ | ಡ್ರೋನ್ ಹಾರಿಸಿ, ತರುಣ ವಿಜ್ಞಾನಿಗಳ ಜತೆ ಸಂವಾದ ನಡೆಸಿದ ಕೇಂದ್ರ ಸಚಿವ
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಎಚ್ ಎಂಟಿ ಕ್ಯಾಂಪಸ್ಸಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದರು.
ಬೆಂಗಳೂರಿನ ಎಚ್ ಎಂಟಿ ಕ್ಯಾಂಪಸ್ಸಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದರು.
ಈ ಕೇಂದ್ರವು ಭಾರೀ ಕೈಗಾರಿಕೆ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ನೆರವಿನೊಂದಿಗೆ ನಡೆಯುತ್ತಿದೆ. ಎಚ್ ಎಂಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಚಿವರು ಇಲ್ಲಿಗೆ ಭೇಟಿ ನೀಡಿದರು.
ರೋಬೋಟಿಕ್ಸ್, ಡ್ರೋನ್, ಅತ್ಯಾಧುನಿಕ ಕೃಷಿ ಸಲಕರಣೆ, ಸೇನಾ ಉಪಕರಣ ಸೇರಿದಂತೆ ಹತ್ತು ಹಲವು ಉತ್ಪನ್ನಗಳನ್ನು ತಯಾರಿಕೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಈ ಕೇಂದ್ರದಲ್ಲಿ ಕೇಂದ್ರ ಸಚಿವರು ಬಹಳ ಹೊತ್ತು ಕಳೆದರು.
ಶ್ರೇಷ್ಠತಾ ಕೇಂದ್ರದಲ್ಲಿರುವ ಆರ್ಟ್ ಪಾರ್ಕ್ (Art park) ಗೆ ಭೇಟಿ ನೀಡಿ ತರುವ ವಿಜ್ಞಾನಿಗಳ ಜತೆ ಸಂವಾದ ನಡೆಸಿದ ಸಚಿವರು, ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನ ಸಲಕರಣೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಪ್ರಮುಖವಾಗಿ ಅತ್ಯಾಧುನಿಕ ATV (all terrain vehicle) ವಾಹನವನ್ನು ವೀಕ್ಷಿಸಿದ ಸಚಿವರು, ಕೆಲ ಹೊತ್ತು ಅದರ ಮೇಲೆ ಸವಾರಿ ನಡೆಸಿದರು. ಕೃಷಿ ಉದ್ದೇಶಕ್ಕೆ ಬಳಸಬಹುದಾದ ಈ ವಾಹನವನ್ನು ಎಂತಹುದೇ ದುರ್ಗಮ ಪ್ರದೇಶದಲ್ಲಿಯೂ ಬಳಕೆ ಮಾಡಬಹುದಾಗಿದೆ. ಪ್ರಮುಖವಾಗಿ ಅಡಿಕೆ, ಕಾಫಿ, ಚಹಾ, ತೆಂಗು ಸೇರಿದಂತೆ ನಾನಾ ವಾಣಿಜ್ಯ ಬೆಳಗಳನ್ನು ಬೆಳೆಯುವ ರೈತರಿಗೆ ಈ ವಾಹನ ಅನುಕೂಲವಾಗುತ್ತದೆ. ಎತ್ತರದ, ಕಡಿದಾದ ಪ್ರದೇಶಗಳಲ್ಲಿ ಈ ವಾಹನ ಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಸಚಿವರಿಗೆ ವಿವರಿಸಿದರು.
ಬಳಿಕ ಸಚಿವರು ಡ್ರೋನ್ ಗಳ ಆವಿಷ್ಕಾರದಲ್ಲಿ ವಿಜ್ಞಾನಿಗಳ ಸಾಧನೆಯನ್ನು ಕಂಡು ಚಕಿತರಾದರು. ಅಲ್ಲದೆ, ತಾವೂ ಕುತೂಹಲದಿಂದ ಹೊಸ ತಲೆಮಾರಿನ ಅತ್ಯಾಧುನಿಕ ಡ್ರೋನ್ ಅನ್ನು ಹಾರಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ಅಲ್ಲದೆ; ವಿವಿಧ ನಮೂನೆಯ, ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ಡ್ರೋನ್ ಗಳನ್ನು ವೀಕ್ಷಿಸಿ ತರುಣ ವಿಜ್ಞಾನಿಗಳ ಬೆನ್ನು ತಟ್ಟಿದರು.
ರೋಬೋಟಿಕ್ ವಿಭಾಗದಲ್ಲಿ ಕೃಷಿಗೂ ಬಳಕೆ ಮಾಡಲಾಗುವ ರೋಬೋಟ್ ಗಳನ್ನು ಸಚಿವರು ವೀಕ್ಷಿಸಿದರು.
ವಿಜ್ಞಾನಿಗಳು ಅಸ್ತಿಯಷ್ಟೇ ಅಲ್ಲ; ದೇಶದ ಹೆಮ್ಮೆ
ಇದೇ ಸಂದರ್ಭದಲ್ಲಿ ತರುಣ ವಿಜ್ಞಾನಿಗಳ ಜತೆ ಸಂವಾದ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ನಿಮ್ಮ ಸಂಶೋಧನೆ, ಆವಿಷ್ಕಾರಗಳನ್ನು ಕಂಡು ಚಕಿತನಾಗಿದ್ದೇನೆ. ನಿಮ್ಮೆಲ್ಲರ ಸಾಧನೆಯನ್ನು ಕಂಡು ನನಗೆ ಹೆಮ್ಮೆ ಎನಿಸಿದೆ. ವಿಜ್ಞಾನಿಗಳು ನೀವು ದೇಶದ ಆಸ್ತಿ ಮತ್ತು ನಮ್ಮ ಪಾಲಿನ ಹೆಮ್ಮೆ ಎಂದು ಸಂತೋಷ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ, ಸ್ವಚ್ಚತಾ ದಿವಸ ಆಚರಣೆ
ಶ್ರೇಷ್ಠತಾ ಕೇಂದ್ರ (Center for Excellence)ದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಸ್ವಚ್ಚತಾ ದಿನ ನಿಮಿತ್ತ ಪೌರ ಕಾರ್ಮಿಕರೊಂದಿಗೆ ಸ್ವಚ್ಚತಾ ಅಭಿಯಾನದಲ್ಲಿ ಸಚಿವರು ಭಾಗವಹಿಸಿದರು.